ಚೆನ್ನೈ, ಅ.27: ಕನ್ನಡದ ಖ್ಯಾತ ಸಂಶೋಧಕ ಎಂ.ಎಂ.ಕಲಬುರ್ಗಿ ಹತ್ಯೆ ಘಟನೆ ಸೇರಿದಂತೆ ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿರುವ ಬೆಳವಣಿಗೆಗಳ ಬಗ್ಗೆ ವಿಜ್ಞಾನಿಗಳ ಗುಂಪೊಂದು ಕಳವಳ ವ್ಯಕ್ತಪಡಿಸಿದ್ದು, ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ಪತ್ರ ಬರೆದು ಸೂಕ್ತ ಕ್ರಮಕ್ಕೆ ಒತ್ತಾಯಿಸಿದೆ.
ಸಮಾಜದಲ್ಲಿ ಸಮುದಾಯ ಗಳ ಧ್ರುವೀಕರಣ ಅಣು ಬಾಂಬ್ ಇದ್ದಂತೆ. ಈ ಹಿನ್ನೆಲೆಯಲ್ಲಿ ಮಾನವ ವಿರೋಧಿ, ನಾಗರಿಕ ವಿರೋಧಿ ಕೃತ್ಯಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳನ್ನು ವಿಜ್ಞಾನಿ ಗಳು ಒತ್ತಾಯಿಸಿದ್ದಾರೆ.ಅಸಹಿಷ್ಣುತೆ, ಧ್ರುವೀಕರಣ ಮತ್ತು ಕೋಮು ದ್ವೇಷದ ಪ್ರಸಾರದ ಪರಿಣಾಮವಾಗಿ ಅಮಾಯಕ ಜನರು, ವಿಚಾರವಾದಿಗಳ ಹತ್ಯೆ ಘಟನೆಗಳಿಗೆ ಸಂಬಂಧಿಸಿದ ಇತ್ತೀಚೆಗಿನ ಬೆಳವಣಿಗೆಗಳಿಂದ ನಮಗೆ ಕಳವಳ ಉಂಟಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಪುಣೆ ಮೂಲದ ದ ಇಂಟರ್-ಯೂನಿವರ್ಸಿಟಿ ಸೆಂಟರ್ ಫಾರ್ ಆಸ್ಟ್ರೋನಮಿ ಆ್ಯಂಡ್ ಆಸ್ಟ್ರೋಫಿಸಿಕ್ಸ್ನ ನಿವೃತ್ತ ನಿರ್ದೇಶಕ ನರೇಶ್ ದದೀಚ್, ದ ಇನ್ಸ್ಟಿಟ್ಯೂಟ್ ಆಫ್ ಮ್ಯಾಥ್ಮ್ಯಾಟಿಕಲ್ ಸಯನ್ಸ್ಸ್ನ ಜಿ.ರಾಜಶೇಖರನ್, ದಿಲ್ಲಿಯ ಜವಹರಲಾಲ್ ನೆಹರು ವಿಶ್ವವಿದ್ಯಾನಿಲಯ, ಅಲಹಾಬಾದ್ನ ಹರೀಶ್-ಚಂದ್ರ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಮತ್ತು ಶಿಕ್ಷಣ ತಜ್ಞರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ. ಅಲ್ಲದೆ, ಎಲ್ಲ ಬಗೆಯ ಸಿದ್ಧಾಂತಗಳು ಮತ್ತು ವಿಚಾರವಾದಕ್ಕೆ ಗೌರವ ತೋರಿಸುವಂತೆ ದೇಶದ ಜನತೆಗೆ ಸಲಹೆ ನೀಡಿರುವ ರಾಷ್ಟ್ರಪತಿಗಳ ಕ್ರಮವನ್ನು ವಿಜ್ಞಾನಿಗಳು ಶ್ಲಾಘಿಸಿದ್ದಾರೆ. ‘ಈ ಎಲ್ಲ ಬೆಳವಣಿಗೆಗಳನ್ನು ಗಂಭೀರವಾಗಿ ತೆಗೆದುಕೊಂಡು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ನಾವು ನಿಮ್ಮನ್ನು ಒತ್ತಾಯಿಸುತ್ತೇವೆ’ ಎಂದು ಪತ್ರದಲ್ಲಿ ವಿಜ್ಞಾನಿಗಳು ಕೋರಿದ್ದಾರೆ.
ಇದರ ಜೊತೆಗೆ, ಕೇಂದ್ರ, ರಾಜ್ಯ ಸರಕಾರಗಳು ಮತ್ತು ಜನತೆಗೆ ಪ್ರತ್ಯೇಕವಾಗಿ ಮನವಿ ಮಾಡಿಕೊಂಡಿರುವ ವಿಜ್ಞಾನಿಗಳು, ಕೋಮು ದ್ವೇಷ ಹರಡದಂತೆ ಹಾಗೂ ಸಮುದಾಯಗಳ ಧ್ರುವೀಕರಣಕ್ಕೆ ಅವಕಾಶ ನೀಡದಂತೆ ಕೋರಿದ್ದಾರೆ. ಅಲ್ಲದೆ, ಭಾರತವು ಬಹುತ್ವವನ್ನು ಹೊಂದಿರುವ ಹಾಗೂ ಎಲ್ಲ ಸಮುದಾಯಗಳ ವಾಸಕ್ಕೆ ಪರಸ್ಪರರು ಅವಕಾಶ ನೀಡಿರುವ ದೇಶವಾಗಿದೆ ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ