ಮೊನ್ನೆ ಮೊನ್ನೆಯಷ್ಟೇ ಭುಜದ ನೋವಿನಿಂದ ಶಿವರಾಜ್ ಕುಮಾರ್ ಆಸ್ಪತ್ರೆ ಸೇರಿ, ಸದ್ಯ ಚೇತರಿಸಿಕೊಂಡಿದ್ದಾರೆ. ಇದೀಗ ರಾಘವೇಂದ್ರ ರಾಜ್ ಕುಮಾರ್ ಕೂಡ ಆಸ್ಪತ್ರೆಗೆ ದಾಖಲಾಗಿದ್ದಾರೆ. ಭಾನುವಾರ ರಾತ್ರಿ ಬಾಚ್ ರೂಮ್ ನಲ್ಲಿ ಜಾರಿ ಬಿದ್ದಿದ್ದರಿಂದ ರಾಘಣ್ಣ ಕೈಗೆ ಏಟಾಗಿತ್ತು. ಹೀಗಾಗಿ ಅವರನ್ನು ಬೆಂಗಳೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸದ್ಯಕ್ಕೆ ರಾಘವೇಂದ್ರ ರಾಜ್ ಕುಮಾರ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು ಇವತ್ತು ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆಯಿದೆ. ಭಾನುವಾರ ರಾಘವೇಂದ್ರ ರಾಜ್ ಕುಮಾರ್ ಅವರು ಆರೋಗ್ಯವಾಗಿಯೇ ಇದ್ದರು. ಅರಮನೆ ಮೈದಾನದಲ್ಲಿ ನಡೆದ ಪ್ರಜ್ವಲ್ ದೇವರಾಜ್ ಅವರ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಸ್ವಲ್ಪ ಸುಸ್ತಾಗಿದ್ದ ರಾಘವೇಂದ್ರ ರಾಜ್ ಕುಮಾರ್ ಅವರು ಭಾನುವಾರ ಮಧ್ಯರಾತ್ರಿ ಸುಮಾರು ಎರಡೂವರೆ ಯಷ್ಟು ಹೊತ್ತಿಗೆ ಬಾತ್ ರೂಮ್ ನಲ್ಲಿ ಕಾಲು ಜಾರಿ ಬಿದ್ದಿದ್ದಾರೆ. ತಕ್ಷಣ ಅವರನ್ನು ಬೆಂಗಳೂರಿನ ಯಶವಂತಪುರದಲ್ಲಿರುವ, ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಲಾಯಿತು.
ಮೂಲಗಳ ಪ್ರಕಾರ ಅವರ ಕೈ ಫ್ರಾಕ್ಚರ್ ಆಗಿದೆಯಂತೆ. ಆದರೆ ವೈದ್ಯರು ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಇನ್ನು ರಾಘಣ್ಣ ಆರೋಗ್ಯದ ಬಗ್ಗೆ ಪ್ರತಿಕ್ರಿಯಿಸಿರುವ ನಟ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಆರೋಗ್ಯವಾಗಿದ್ದಾರೆ ಎಂದಿದ್ದಾರೆ. ಶಿವರಾಜ್ ಕುಮಾರ್ ದಂಪತಿ ಕೂಡ ಆಸ್ಪತ್ರೆಗೆ ಆಗಮಿಸಿ ರಾಘವೇಂದ್ರ ಅವರ ಆರೋಗ್ಯ ವಿಚಾರಿಸಿದ್ದಾರೆ.