ಕಾಸರಗೋಡು, ಅ.26: ಕೂಡ್ಲು ಸೇವಾ ಸಹಕಾರಿ ಬ್ಯಾಂಕ್‌ನಿಂದ ಇತ್ತೀಚೆಗೆ ಹಾಡಹಗಲೇ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿ ಕೊಂಡಿದ್ದ ಪ್ರಮುಖ ಆರೋಪಿ ಸಹಿತ ಇಬ್ಬರನ್ನು ತನಿಖಾ ತಂಡ ಬಂಧಿಸಿದೆ. ಇವರಿಂದ 7.6 ಕೆ.ಜಿ. ಚಿನ್ನಾಭರಣ, ಐದು ಲಕ್ಷ ರೂ. ನಗದು ಹಾಗೂ ಒಂದು ಕಾರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಕಾಸರಗೋಡು ಜಿಲ್ಲಾ ಎಸ್ಪಿ ಡಾ.ಎಸ್.ಶ್ರೀನಿವಾಸ್ ಅವರು ಮಾತನಾಡಿ, ಪ್ರಕರಣದ ಪ್ರಮುಖ ಆರೋಪಿ ಕಾಸರಗೋಡು ಚೌಕಿ ನಿವಾಸಿ ಮುಜೀಬ್(27) ಹಾಗೂ ಎರ್ನಾಕುಲಂ ಫೋರ್ಟ್ ಕೊಚ್ಚಿಯ ಜೋಮನ್ ಫೆಲಿಕ್ಸ್(30) ಬಂಧಿತರು.ಇದರೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಏಳಕ್ಕೇರಿದೆ ಎಂದು ತಿಳಿಸಿದರು.
ಬ್ಯಾಂಕ್‌ನಿಂದ ಒಟ್ಟು 17.5 ಕೆ.ಜಿ. ಚಿನ್ನಾಭರಣ ದರೋಡೆಯಾಗಿತ್ತು. ಈ ಪೈಕಿ ದರೋಡೆ ಸೂತ್ರಧಾರ ಬಂದ್ಯೋಡು ಪಚ್ಚಂಬಳದ ಶರೀಫ್‌ನನ್ನು ಬಂಧಿಸಿ 7.150 ಕೆ.ಜಿ. ಚಿನ್ನವನ್ನು ವಶಪಡಿಸಿಕೊಳ್ಳಲಾಗಿತ್ತು. ಇದೀಗ 7.6 ಕೆ.ಜಿ. ಚಿನ್ನಾಭರಣ ಸಿಕ್ಕಿದ್ದು, ಒಟ್ಟು 15.750 ಕೆ.ಜಿ.ಯಷ್ಟು ಚಿನ್ನವನ್ನು ತನಿಖಾ ತಂಡ ವಶಪಡಿಸಿಕೊಂಡಂತಾಗಿದೆ.
ಮುಜೀಬ್‌ನನ್ನು ಶನಿವಾರ ಮುಳ್ಳೇರಿಯ ಬೋವಿಕ್ಕಾನದಿಂದ ಬಂಧಿಸಲಾಗಿದ್ದು, ವಿಚಾ ರಣೆಯ ವೇಳೆ ಆತ ನೀಡಿದ ಮಾಹಿತಿಯ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ತನಿಖಾ ತಂಡವು ಮಲೇರಿಯಾ ಜ್ವರಬಾಧಿತನಾಗಿ ಕೊಯಂಬತ್ತೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ ಯುತ್ತಿದ್ದ ಜೋಮನ್ ಫೆಲಿಕ್ಸ್‌ನನ್ನು ಬಂಧಿಸಿದೆ. ಅಲ್ಲದೆ, ಮಡಿಕೇರಿಯ ವೀರಾಜಪೇಟೆಯ ಮನೆಯೊಂದರಲ್ಲಿ ಬಚ್ಚಿಟ್ಟಿದ್ದ ಚಿನ್ನಾಭರಣವನ್ನು ವಶಕ್ಕೆ ತೆಗೆದುಕೊಂಡಿದೆ ಎಂದವರು ವಿವರಿಸಿದರು.
ಕೂಡ್ಲು ಸೇವಾ ಸಹಕಾರಿ ಬ್ಯಾಂಕ್‌ನಿಂದ ಸೆಪ್ಟಂಬರ್ 7ರಂದು ಹಾಡಹಗಲೇ ದರೋಡೆ ನಡೆದಿತ್ತು. ಬ್ಯಾಂಕ್ ಸಿಬ್ಬಂದಿ ಹಾಗೂ ಅಲ್ಲಿದ್ದ ಗ್ರಾಹಕರನ್ನು ಬೆದರಿಸಿ ಲಾಕರ್‌ನಲ್ಲಿದ್ದ ಚಿನ್ನಾಭರಣ ಹಾಗೂ ನಗದನ್ನು ದರೋಡೆ ಮಾಡಲಾಗಿತ್ತು.
ಐಷಾರಾಮಿ ಮನೆ, ಕಾರು ಖರೀದಿ :
ಕೂಡ್ಲು ಬ್ಯಾಂಕ್ ದರೋಡೆ ಪ್ರಕರಣದ ಸೂತ್ರಧಾರ ಸಹಿತ ಐವರು ಆರೋಪಿಗಳನ್ನು 20 ದಿನಗಳೊಳಗೆ ಪೊಲೀಸರು ಬಂಧಿಸಿದ್ದರೂ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಮುಜೀಬ್‌ತನಿಖಾ ತಂಡಕ್ಕೆ ಸವಾಲಾಗಿದ್ದನು. 49 ದಿನಗಳ ಬಳಿಕ ಆತ ಸೆರೆಯಾಗಿದ್ದಾನೆ.
ಕೃತ್ಯದ ಬಳಿಕ ಈತ ಕರ್ನಾಟಕ, ತಮಿಳುನಾಡು ಮೊದಲಾದಡೆಗಳಲ್ಲಿ ತಲೆಮರೆಸಿಕೊಂಡಿದ್ದನು. ಆದರೆ ಶನಿವಾರ ಮಧ್ಯಾಹ್ನ ಮುಜೀಬ್ ಕಾರಿನಲ್ಲಿ ಕಾಸರಗೋಡು ಕಡೆಗೆ ತೆರಳುತ್ತಿರುವ ಕುರಿತು ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಿಸಿದ ಪೊಲೀಸರು ಮುಳ್ಳೇರಿಯದಲ್ಲಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕದ್ದ ಚಿನ್ನಾಭರಣದಲ್ಲಿ ಒಂದಿಷ್ಟನ್ನು ಮಾರಿದ ಮುಜೀಬ್ ಮತ್ತು ಫೆಲಿಕ್ಸ್ ಮಡಿಕೇರಿಯ ವೀರಾಜಪೇಟೆಯಲ್ಲಿ ಐಷಾರಾಮಿ ಮನೆಯೊಂದನ್ನು ಖರೀದಿಸಿ ಉಳಿದ ಚಿನ್ನಾಭರಣವನ್ನು ಅಲ್ಲಿ ಬಚ್ಚಿಟ್ಟಿದ್ದರು. ಅಲ್ಲದೆ, ಐಷಾರಾಮಿ ಕಾರೊಂದನ್ನೂ ಖರೀದಿಸಿದ್ದರು.
ಗಾಂಜಾ ನಂಟು: ಮುಜೀಬ್ ಮತ್ತು ಫೆಲಿಕ್ಸ್ ನಡುವೆ ನಂಟು ಬೆಳೆಯಲು ಗಾಂಜಾ ವಹಿವಾಟು ಕಾರಣವೆನ್ನಲಾಗಿದೆ. ಮಂಗಳೂರಿನಲ್ಲಿ ಪರಿಚಿತರಾದ ಇವರು ಅಪರಾಧ ಚಟುವಟಿಕೆಯತ್ತ ತಮ್ಮ ಗೆಳೆತನದ ನಂಟು ಮುಂದುವರಿಸಿದ್ದರು.


