ರಾಷ್ಟ್ರೀಯ

ಕೇಂದ್ರ ಸರ್ಕಾರದ ಗ್ರೂಪ್ ಬಿ, ಸಿ ಮತ್ತು ಡಿ ಹುದ್ದೆಗಳಿಗೆ ಸಂದರ್ಶನ ರದ್ದು: ಪ್ರಧಾನಿ ಮೋದಿ

Pinterest LinkedIn Tumblr

PM-Modi-Mann-ki-Baatನವದೆಹಲಿ: ಪ್ರಧಾನಿಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಆಕಾಶವಾಣಿಯಲ್ಲಿ 13ನೇ ಬಾರಿಗೆ ಮನ್‌ ಕಿ ಬಾತ್‌ ಕಾರ್ಯಕ್ರಮದಲ್ಲಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದರು.

ಪ್ರತೀ ಬಾರಿ ದೇಶದಲ್ಲಿರುವ ಸಮಸ್ಯೆಗಳು ಹಾಗೂ ರೈತರ ಕುರಿತಂತೆ ಮಾತನಾಡುತ್ತಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಬಾರಿ ದೇಹದ ಅಂಗಾಂಗ ದಾನ ಹಾಗೂ ನೇತ್ರದಾನದ ಮಹತ್ವ ಕುರಿತಂತೆ ಮಾತನಾಡಿದ್ದು, ಕಣ್ಣು ಹಾಗೂ ಅಂಗಾಂಗ ದಾನವೆಂಬುದು ಮಹತ್ವಪೂರ್ಣ ವಿಷಯವಾಗಿದೆ. ಇಂದು ದೇಶದಲ್ಲಿ ಪ್ರತೀ ವರ್ಷ 1ಲಕ್ಷ ಕಣ್ಣುಗಳ ಅವಶ್ಯಕತೆಯಿಂದೆ. ಆದರೆ, ದೇಶದಲ್ಲಿ ಕೇವಲ 25 ಸಾವಿರದಷ್ಟು ಕಣ್ಣುಗಳು ಮಾತ್ರ ದಾನವಾಗಿ ದೊರೆಯುತ್ತಿದೆ ಎಂದು ಹೇಳಿದ್ದಾರೆ.

ತಮ್ಮ 13ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಅಂಗಾಂಗ ದಾನ ಕುರಿತಾದ ಪ್ರಶ್ನೆಗೆ ಉತ್ತರಿಸಿ ಮಾತನಾಡಿರುವ ಅವರು, ಅಂಗಾಂಗ ದಾನ ಮಾಡುವುದು ಮಹತ್ವ ಪೂರ್ಣ ವಿಷಯ. ಅಂಗಾಂಗ ದಾನದಲ್ಲಿ ಇದೀಗ ತಮಿಳುನಾಡು ಮೊದಲ ಸ್ಥಾನದಲ್ಲಿದೆ. ದೇಶದಲ್ಲಿ ಇದೀಗ ಕಿಡ್ನಿ, ಹೃದಯ ಹಾಗೂ ಯಕೃತ್ತು ಗಳ ಅವಶ್ಯಕತೆ ಸಾಕಷ್ಟಿದೆ. ಆದರೆ, ಕಸಿ ಶಸ್ತ್ರಚಿಕಿತ್ಸೆ ಮಾಡುವ ಸೌಲಭ್ಯ ಮಾತ್ರ ಕೆಲವು ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯವಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಭಾರತ-ಆಫ್ರಿಕಾ ಶೃಂಗ ಸಭೆ ಕುರಿತಂತೆ ಮಾತನಾಡಿದ ಅವರು, ಇದೊಂದು ಹಬ್ಬದ ಸಮಯವಾಗಿದ್ದು, ಈ ಹಬ್ಬದ ಸಮಯದಲ್ಲಿ ಭಾರತ-ಆಫ್ರಿಕಾದ ಶೃಂಗಸಭೆ ಎಂಬ ಹಬ್ಬವಿದೆ. ಭಾರತ ಮತ್ತು ಆಫ್ರಿಕಾದ ನಡುವೆ ಸಾಕಷ್ಟು ಹೋಲಿಕೆಗಳಿವೆ. ಭಾರತ ಮೂಲದ ಸಾಕಷ್ಟು ಭಾರತೀಯರು ಇಂದು ಆಫ್ರಿಕಾದಲ್ಲಿ ನೆಲೆಯೂರಿದ್ದಾರೆ ಎಂದು ಹೇಳಿದ್ದಾರೆ.

ಇದೇ ವೇಳೆ ಸ್ವಚ್ಛ ಭಾರತ ಅಭಿಯಾನದ ಕುರಿತಂತೆ ಮಾಧ್ಯಮಗಳಿಗೆ ಅಭಿನಂದನೆ ಸಲ್ಲಿಸಿರುವ ಅವರು, ಮನ್ ಕಿ ಬಾತ್ ನಲ್ಲಿ ನಮ್ಮ ಸ್ವಚ್ಛ ಭಾರತ ಅಭಿಯಾನದ ಬಗ್ಗೆ ಮಾತನಾಡಲೇಬೇಕು. ಸ್ವಚ್ಛ ಭಾರತ ಅಭಿಯಾನಕ್ಕೆ ಮಾಧ್ಯಮಗಳು ಪಟ್ಟ ಶ್ರಮಕ್ಕೆ ಧನ್ಯವಾದ ಹೇಳಬೇಕಿದೆ ಎಂದಿದ್ದಾರೆ.

ಭಾರತದ ವೈವಿಧ್ಯತೆಯ ಕುರಿತಂತೆ ಇಂದು ಎಲ್ಲೆಡೆ ಮಾತನಾಡುತ್ತಾರೆ. ಇದು ನಮ್ಮೆಲ್ಲರ ಹೆಮ್ಮೆಯ ವಿಚಾರ. ಇಂದು ಭಾರತ ಅಭಿವೃದ್ಧಿ ಪಥದತ್ತ ಇರಲು ಶಾಂತಿ, ಸದ್ಭಾವನೆ ಹಾಗೂ ಏಕತೆ ಕಾರಣವಾಗಿದೆ. ಸರ್ಕಾರ ಶೀಘ್ರದಲ್ಲೇ ಅಶೋಕ ಚಕ್ರವಿರುವ ಚಿನ್ನದ ನಾಣ್ಯಗಳನ್ನು ಹೊರತರಲಿದೆ. ಇತ್ತೀಚಿನ ದಿನಗಳಲ್ಲಿ ಚಿನ್ನ ಎಂಬುದು ನಮ್ಮ ನಿತ್ಯ ಜೀವನದ ಭಾಗವಾಗಿಬಿಟ್ಟಿದೆ. ಆದರೆ, ಚಿನ್ನ ಎಂಬುದು ಸತ್ತುಹೋದ ಹಣವಿದ್ದಂತೆ. ಹೀಗಾಗಿ ಸರ್ಕಾರ ಜನರಿಗೆ ಉಪಯೋಗವಾಗಲೆಂದು ಗೋಲ್ಡ್ ಮೊನೆಟಿಸೇಷನ್ ಯೋಜನೆಯನ್ನು ಜಾರಿಗೆ ತರಲಿದ್ದು, ಈ ಯೋಜನೆ ಮೂಲಕ ಜನರು ತಮ್ಮ ಚಿನ್ನವನ್ನು ಬ್ಯಾಂಕ್ ನಲ್ಲಿಟ್ಟು ಅದರ ಲಾಭವನ್ನು ಪಡೆಯಬಹುದಾಗಿದೆ. ಈ ಚಿನ್ನವೇ ಭಾರತ ಆಸ್ತಿಯಾಗಿ ಮಾರ್ಪಡಲಿದೆ.

ಉದ್ಯೋಗದಲ್ಲಿ ಭ್ರಷ್ಟಾಚಾರ ಕುರಿತಂತೆ ಈ ಹಿಂದೆ ನಾನು ಮಾತನಾಡಿದ್ದೆ, ಇದೀಗ ನಮ್ಮ ಸರ್ಕಾರ ಕೆಲವು ಕ್ಷೇತ್ರದ ಉದ್ಯೋಗದಲ್ಲಿರುವ ಸಂದರ್ಶನಗಳನ್ನು ತೆಗೆದುಹಾಕಲು ಚಿಂತನೆ ನಡೆಸಿದ್ದು, ಮುಂದಿನ ವರ್ಷ ಜನವರಿ 1 ರಿಂದ ಕೇಂದ್ರ ಸರ್ಕಾರದ ಗ್ರೂಪ್ ಬಿ, ಸಿ, ಮತ್ತು ಡಿ ಭಾಗದಲ್ಲಿರುವ ಹುದ್ದೆಗಳ ಸಂದರ್ಶನಗಳು ರದ್ದಾಗಲಿದೆ ಎಂದು ಹೇಳಿದ್ದಾರೆ.

Write A Comment