ಮಂಗಳೂರು, ಅ.25: ಮೂಡುಬಿದಿರೆ ಪ್ರಶಾಂತ್ ಪೂಜಾರಿ ಹತ್ಯೆ ಪ್ರಕರಣದ ಮತ್ತೋರ್ವ ಆರೋಪಿ (9ನೇ ಆರೋಪಿ) ಗಂಟಾಲ್ಕಟ್ಟೆಯ ಮುಹಮ್ಮದ್ ಇಮ್ತಿಯಾಝ್(40) ಎಂಬಾ ತನನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ಎಡಿಜಿಪಿ ಅಲೋಕ್ ಮೋಹನ್ ತಿಳಿಸಿದ್ದಾರೆ.
ನಗರದ ಕಮಿಷನರ್ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಮುಹಮ್ಮದ್ ಇಮ್ತಿಯಾಝ್ ಮುಂಬೈ ವಿಮಾನ ನಿಲ್ದಾಣದ ಮೂಲಕ ದುಬೈಗೆ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ ಸಿಕ್ಕಿಬಿದ್ದಿ ದ್ದಾನೆ. ಹತ್ಯೆ ಪ್ರಕರಣದಲ್ಲಿ ಆರೋಪಿಗಳಿಗೆ ಪರೋಕ್ಷ ಸಹಕಾರ ನೀಡಿರುವ ಆರೋಪಿಯಾಗಿರುವ ಈತನ ಬಗ್ಗೆ ದೇಶದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಲುಕ್ಔಟ್ ಸರ್ಕ್ಯುಲರ್ ಕಳುಹಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಈತನನ್ನು ಬಂಧಿಸಲಾಗಿದೆ ಎಂದವರು ಹೇಳಿದರು.
ಪ್ರಕರಣಕ್ಕೆ ಸಂಬಂಧಿಸಿ ಈ ತನಕ ಒಟ್ಟು 9 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಇವರೆಲ್ಲರೂ ತಂಡವಾಗಿ ಕಾರ್ಯನಿರ್ವ ಹಿಸಿದ್ದಾರೆ. ಆದರೆ ಕೃತ್ಯದ ಹಿಂದೆ ಯಾವುದೇ ಸಂಘಟನೆ ಭಾಗಿಯಾಗಿರುವ ಬಗ್ಗೆ ಸಮಗ್ರ ತನಿಖೆಯಿಂದಷ್ಟೇ ತಿಳಿಯಬೇಕಾಗಿದೆ ಎಂದರು.
ಹತ್ಯೆ ಆರೋಪಿಗಳನ್ನು ಶೀಘ್ರವೇ ಬಂಧಿಸುವಲ್ಲಿ ಸಫಲರಾದ ಮಂಗಳೂರು ಪೊಲೀಸರ ಕಾರ್ಯ ವೈಖರಿಯನ್ನು ಎಡಿಜಿಪಿ ಶ್ಲಾಘಿಸಿದರು.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜಕೀ ಯ ನಾಯಕರು ಪೊಲೀಸರ ವಿರುದ್ಧ ವೈಯಕ್ತಿಕ ಟೀಕೆ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಎಡಿಜಿಪಿ, ಯಾವುದೇ ಪ್ರಕರಣವನ್ನು ಭೇದಿಸಲು ಓರ್ವ ಪೊಲೀಸ್ ಅಧಿಕಾರಿಯಿಂದ ಮಾತ್ರ ಅಸಾಧ್ಯ. ಪೊಲೀಸ್ ಅಧಿಕಾರಿಗಳು ತಂಡವಾಗಿ ಕಾರ್ಯನಿರ್ವಹಿಸುತ್ತಾರೆ. ಆದುದರಿಂದ ಪೊಲೀಸರ ಕಾರ್ಯವೈಖರಿಯನ್ನು ಓರ್ವನ ವೈಯಕ್ತಿಕ ಎಂದು ಪರಿಗಣಿಸುವುದು ಸರಿಯಲ್ಲ ಎಂದು ಅವರು ಹೇಳಿದರು.
ಸಾಮಾಜಿಕ ಜಾಲತಾಣಗಳಲ್ಲಿ ಕಾನೂನು ಉಲ್ಲಂಘಿಸಿದ ಪ್ರಕರಣಗಳು ಕಂಡುಬಂದರೆ ಕ್ರಮ ತೆಗೆದುಕೊಳ್ಳಲಾಗುವುದು. ಫೇಸ್ಬುಕ್, ವಾಟ್ಸಾಪ್ಗಳಲ್ಲಿ ಕಾನೂನು ಉಲ್ಲಂಘನೆಯಾ ಗುತ್ತ್ತಿರುವ ಬಗ್ಗೆ ಗಮನಕ್ಕೆ ಬಂದರೆ ಅದನ್ನು ಕೂಡಲೇ ಪೊಲೀಸ್ ಗಮನಕ್ಕೆ ತನ್ನಿ ಎಂದವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಪಶ್ಚಿಮ ವಲಯ ಐಜಿಪಿ ಅಮೃತ್ ಪಾಲ್, ಮಂಗಳೂರು ಪೊಲೀಸ್ ಕಮಿಷನರ್ ಎಸ್.ಮುರುಗನ್, ದ.ಕ. ಜಿಲ್ಲಾ ಎಸ್ಪಿ ಡಾ.ಶರಣಪ್ಪ ಉಪಸ್ಥಿತರಿದ್ದರು.


