ನವದೆಹಲಿ: ದಾದ್ರಿ ಹತ್ಯೆ ಘಟನೆಯನ್ನು ಖಂಡಿಸಿ ದೇಶಾದ್ಯಂತ ಸಾಹಿತಿಗಳು ತಮಗೆ ನೀಡಲಾಗಿರುವ ಪ್ರಶಸ್ತಿಯನ್ನು ಹಿಂದಕ್ಕೆ ನೀಡುತ್ತಿದ್ದರೆ, ಉರ್ದು ಕವಿ ಮತ್ತು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಮುನಾವ್ವರ್ ರಾಣಾ ಈ ಅವಕಾಶವನ್ನು ಬಳಸಿಕೊಂಡು ಪ್ರಧಾನಿ ಮೋದಿಯವರಿಗೆ ಹತ್ತಿರವಾಗಲು ಬಯಸಿದಂತೆ ತೋರುತ್ತದೆ.
ಲಕ್ನೋನಲ್ಲಿ ಮಾತನಾಡುತ್ತಿದ್ದ ಅವರು ಪ್ರಧಾನಿ ತಮ್ಮನ್ನು ಕಿರಿಯ ಸಹೋದರನೆಂಬ ಭಾವದಲ್ಲಿ ಆಹ್ವಾನಿಸಿದರೆ ತಾವು ಬಹಳ ಖುಷಿಯಿಂದಲೇ ಪಾದರಕ್ಷೆಗಳನ್ನು ಹೊತ್ತೊಯ್ಯಲು ಸಿದ್ಧ ಎಂದು ಹೇಳಿದ್ದಾರೆ.
“ಮೋದಿ ನನಗೆ ಹಿರಿಯ ಸಹೋದರನಂತೆ. ನನ್ನ ಬಗ್ಗೆ ಅವರು ಹಿರಿಯ ಸಹೋದರನ ಅಪ್ಯಾಯಮಾನತೆಯನ್ನು ತೋರಿಸಿದರೆ, ಸಂತೋಷದಿಂದ ಅವರ ಚಪ್ಪಲಿಗಳನ್ನು ಕೈಗೆತ್ತಿಕೊಳ್ಳುತ್ತೇನೆ. ಎಂದು ನಾನು ಒಂದು ಕವಿತೆಯಲ್ಲಿ ಬರೆದಿದ್ದೇನೆ”, ಎಂದು ರಾಣಾ ಹೇಳಿದ್ದಾರೆ.
ಸಾಹಿತಿಗಳು ಪ್ರಶಸ್ತಿ ಹಿಂತಿರುಗಿಸುತ್ತಿದ್ದುದನ್ನು ರಾಣಾ ಪ್ರಾರಂಭದಿಂದಲೂ ಟೀಕಿಸಿಕೊಂಡು ಬಂದಿದ್ದರು. ಯಾರು ತಮ್ಮ ಬರವಣಿಗೆಯಲ್ಲಿ ವಿಶ್ವಾಸವನ್ನು ಕಳೆದುಕೊಂಡಿದ್ದಾರೋ, ಅವರು ತಮ್ಮ ಪ್ರಶಸ್ತಿಗಳನ್ನು ಹಿಂತಿರುಗಿಸುತ್ತಿದ್ದಾರೆ ಎಂದು ಕಿಚಾಯಿಸಿದ್ದ ಅವರು ನಾಟಕೀಯ ಬೆಳವಣಿಗೆಯಲ್ಲಿ ಕಳೆದ ಭಾನುವಾರ ತಮ್ಮ ಪ್ರಶಸ್ತಿಯನ್ನು ಸಹ ಹಿಂತಿರುಗಿಸಿದ್ದರು.
ನಂತರ ಪತ್ರಕರ್ತರ ಜತೆ ಮಾತನಾಡುತ್ತಿದ್ದ ಅವರು, “ನನಗೆ ಪಿಎಂಓ ಕಚೇರಿಯಿಂದ ಕರೆ ಬಂದಿದ್ದು ಮೋದಿಯನ್ನು ಭೇಟಿಯಾಗಲು ಬರುವಂತೆ ತಿಳಿಸಲಾಗಿದೆ. ಇತರ ಸಾಹಿತಿಗಳು ನನ್ನ ಜತೆ ಬರಲು ನಿರಾಕರಿಸಿದರೂ ನಾನು ಪ್ರಧಾನಿಯನ್ನು ಭೇಟಿಯಾಗುತ್ತೇನೆ,” ಎಂದಿದ್ದರು.