ನವದೆಹಲಿ: 1990ರಲ್ಲಿ ವಿ.ಪಿ.ಸಿಂಗ್ ಸರ್ಕಾರ ಬಿದ್ದು ಹೋದ ಮೇಲೆ ಅಂದಿನ ರಾಷ್ಟ್ರಪತಿ ಆರ್.ವೆಂಕಟ್ ರಾಮನ್ ಅವರು ಪ್ರಣಬ್ ಮುಖರ್ಜಿ ಅವರನ್ನು ಪ್ರಧಾನಿಯಾಗಿ ಮಾಡಬೇಕೆಂದಿದ್ದರು ಆದರೆ ರಾಜೀವ್ ಗಾಂಧಿಯವರು ಬೇರೆ ರೀತಿ ಯೋಚಿಸಿದರು.
ಹಿರಿಯ ಕಾಂಗ್ರೆಸ್ ನಾಯಕ ಮತ್ತು ಗಾಂಧಿ ಕುಟುಂಬಕ್ಕೆ ನಿಕಟವರ್ತಿಯಾಗಿದ್ದ ಎಂ.ಎಲ್.ಫೋತೆದಾರ್ ಅವರು ಬರೆದಿರುವ ‘ದ ಚಿನ ರ್ ಲೀವ್ಸ್’ ಪುಸ್ತಕದಲ್ಲಿ ಈ ಅಂಶ ದಾಖಲಾಗಿದೆ. 1990ರಲ್ಲಿ ವಿ.ಪಿ.ಸಿಂಗ್ ಅವರು ರಾಜೀನಾಮೆ ನೀಡಿದ ಮೇಲೆ ತಾವು ರಾಷ್ಟ್ರಪತಿ ವೆಂಕಟರಾಮನ್ ಅವರನ್ನು ಭೇಟಿ ಮಾಡಿ ರಾಜಕೀಯ ಪರಿಸ್ಥಿತಿಯನ್ನು ಚರ್ಚಿಸುತ್ತಿದ್ದಾಗ ರಾಜೀವ್ ಗಾಂಧಿಯವರು ಪ್ರಣಬ್ ಮುಖರ್ಜಿಯವರನ್ನು ಬೆಂಬಲಿಸಬೇಕು ಎಂದು ಒಲವು ವ್ಯಕ್ತಪಡಿಸಿದ್ದರು.
ಒಂದು ಹಂತದಲ್ಲಿ ಇಂಧಿರಾ ಗಾಂಧಿಯವರು ಕೂಡ ಮುಖರ್ಜಿಯವರನ್ನು ನರಸಿಂಹ ರಾವ್ ಮತ್ತು ವೆಂಕಟ್ ರಾಮನ್ ಅವರ ಸಮಾನ ರಾಜಕೀಯ ನಾಯಕರನ್ನಾಗಿ ಪರಿಗಣಿಸಿದ್ದರು. ಆದರೆ ತಮ್ಮ ಪುತ್ರ ರಾಜೀವ್ ಗಾಂಧಿಯನ್ನು ತಮ್ಮ ಉತ್ತರಾಧಿಕಾರಿಯಾಗಿ ಮಾಡಬೇಕೆಂಬ ಹೆಬ್ಬಯಕೆಯಿಂದ ಪ್ರಣಬ್ ಮುಖರ್ಜಿಯವರಿಗೆ ಅವಕಾಶ ಹಿಂದಕ್ಕೆ ಸರಿಯಿತು ಎಂದು ಹಾರ್ಪರ್ ಕಾಲಿನ್ಸ್ ಪಬ್ಲಿಕೇಶನ್ ನಲ್ಲಿ ವರದಿ ಮಾಡಲಾಗಿದೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರಾಗಿರುವ ಫೊತೆದಾರ್ ಅಂದಿನ ದಿನವನ್ನು ನೆನಪಿಸಿ ಅಂದಿನ ರಾಷ್ಟ್ರಪತಿ ವೆಂಕಟ್ ರಾಮನ್ ಅವರು ತಮ್ಮ ವೈಯಕ್ತಿಕ ಆಯ್ಕೆಯನ್ನು ರಾಜೀವ್ ಗಾಂಧಿಯವರಿಗೆ ತಿಳಿಸಬೇಕೆಂದುಕೊಂಡಿದ್ದರು ಎಂದು ನಮೂದಿಸಿದ್ದಾರೆ.
ನಾನು ವೆಂಕಟ್ ರಾಮನ್ ಅವರ ನಿಲುವನ್ನು ರಾಜೀವ್ ಗಾಂಧಿಯವರಿಗೆ ತಿಳಿಸಿದೆ. ಅವರು ಕೂಡ ಆಶ್ಚರ್ಯಚಕಿತರಾದರು. ಕೊನೆಗೆ ರಾಜೀವ್ ಗಾಂಧಿಯವರು ವಿವಾದಾತ್ಮಕ ತೀರ್ಮಾನ ತೆಗೆದುಕೊಂಡು ಚಂದ್ರಶೇಖರ್ ಅವರನ್ನು ಬೆಂಬಲಿಸಿದರು. ಇದೇ ಸಂದರ್ಭಕ್ಕಾಗಿ ಕಾಯುತ್ತಿದ್ದ ಚಂದ್ರಶೇಖರ್ ಅವರು ಪ್ರಧಾನಿಯಾಗಲು ಒಪ್ಪಿಕೊಂಡರು ಎಂದು ಫೊತೆದಾರ್ ತಮ್ಮ ಪುಸ್ತಕದಲ್ಲಿ ಮೆಲುಕು ಹಾಕಿದ್ದಾರೆ.
ನಂತರ ಸೋನಿಯಾ ಗಾಂಧಿಯವರು ಪಕ್ಷಕ್ಕೆ ಮುಜುಗರ ಸನ್ನಿವೇಶ ಎದುರಾಗಬಾರದೆಂದು ಪ್ರಣಬ್ ಮುಖರ್ಜಿಯವರನ್ನು ರಾಷ್ಟ್ರಪತಿಯನ್ನಾಗಿ ನೇಮಿಸಿದರು. ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದಾಗ, ಸೋನಿಯಾ ಗಾಂಧಿಯವರು ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಅಭ್ಯರ್ಥಿ ಸ್ಥಾನಕ್ಕೆ ಹೆಸರು ಸೂಚಿಸಿದ್ದರು. ಆದರೆ ಆ ಸ್ಥಾನದ ಆಕಾಂಕ್ಷೆಯಲ್ಲಿದ್ದ ಮಾಧವ್ ರಾವ್ ಸಿಂಧಿಯಾ ಸೇರಿದಂತೆ ಅನೇಕ ನಾಯಕರರು ಮುಲಾಯಂ ಸಿಂಗ್ ಯಾದವ್ ಅವರು ಯುಪಿಎ ಸರ್ಕಾರವನ್ನು ಬೆಂಬಲಿಸದಂತೆ ಮನವೊಲಿಸಲು ಅಮರ್ ಸಿಂಗ್ ಮೂಲಕ ಪ್ರಯತ್ನಿಸಿದ್ದರು. ಆದರೆ ಸೋನಿಯಾ ಗಾಂಧಿಯವರು ಮನಮೋಹನ್ ಸಿಂಗ್ ಅವರನ್ನೇ ಆಯ್ಕೆ ಮಾಡಿದರು. ಇದು ಅವರ ಸೂಕ್ಷ್ಮ ರಾಜಕೀಯ ಮನಸ್ಸನ್ನು ತೋರಿಸುತ್ತದೆ. ಮನಮೋಹನ್ ಸಿಂಗ್ ಅವರು ರಾಜಕೀಯ ಹಿನ್ನೆಲೆಯವರಲ್ಲ, ಅದುವೇ ಸೋನಿಯಾ ಗಾಂಧಿಯವರಿಗೂ ಬೇಕಾಗಿತ್ತು, ಅದಲ್ಲದೇ ಇಂದಿರಾ ಗಾಂಧಿಯವರು ಸಿಖ್ ರಿಂದ ಹತ್ಯೆಗೀಡಾದ್ದರಿಂದ, ಆಪರೇಷನ್ ಬ್ಲೂ ಸ್ಟಾರ್ ನಂತರ ಕಾಂಗ್ರೆಸ್ ಪಕ್ಷಕ್ಕೆ ಸಿಖ್ ಸಮುದಾಯವನ್ನು ಒಲಿಸಿಕೊಳ್ಳುವ ಅಗತ್ಯವಿತ್ತು. ಅಲ್ಲದೆ ತಮ್ಮ ಮಕ್ಕಳ ರಾಜಕೀಯ ಸುರಕ್ಷತೆಗಾಗಿ ಬುದ್ಧಿವಂತಿಕೆಯಿಂದ ಸೋನಿಯಾ ಗಾಂಧಿಯವರು ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಿದರು ಎಂದು ಫೊತೆದಾರ್ ಪುಸ್ತಕದಲ್ಲಿ ನಮೂದಿಸಿದ್ದಾರೆ.