ನವದೆಹಲಿ: ಉತ್ತರ ಭಾರತದ ಜನತೆ ಕಾನೂನು ಮುರಿಯುವುದರಲ್ಲಿ ಸಂತಸ ಕಾಣುತ್ತಾರೆ ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಕಿರೆನ್ ರಿಜ್ಜು ಹೇಳಿಕೆ ನೀಡಿ, ಉತ್ತರ ಭಾರತದ ರಾಜಕೀಯ ವಲಯದಲ್ಲಿ ಕೋಲಾಹಲ ಮೂಡಿಸಿದ್ದಾರೆ.
ಕೆಲ ವರ್ಷಗಳ ಹಿಂದೆ ದೆಹಲಿಯ ಮಾಜಿ ಲೆಫ್ಟಿನೆಂಟ್ ಗವರ್ನರ್‌ರೊಬ್ಬರು, ಉತ್ತರ ಭಾರತದ ಜನತೆ ಕಾನೂನು ಮುರಿಯುವುದರಲ್ಲಿ ಸಂತಸ ಅನುಭವಿಸುತ್ತಾರೆ. ಸಂಜೆಯ ವೇಳೆಗೆ ಕ್ಷಮೆ ಕೋರುವಂತೆ ಒತ್ತಡ ಹೇರುತ್ತಾರೆ ಎಂದು ನೀಡಿರುವ ಹೇಳಿಕೆಗೆ ನಾನೇ ಸಾಕ್ಷಿಯಾಗಿದ್ದೇನೆ ಎಂದರು.
ಮಹಿಳೆಯರ ಮೇಲಿನ ದೌರ್ಜನ್ಯಗಳು ನಿರಂತರವಾಗಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವುದು ಆಘಾತಕಾರಿ ಮತ್ತು ಅಸಹನೀಯ ಸಂಗತಿಗಳಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಳೆದ 2008ರಲ್ಲಿ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಆಗಿದ್ದ ತೇಜಿಂದರ್ ಖನ್ನಾ, ದೇಶದ ಉತ್ತರ ಮತ್ತು ಪಶ್ಚಿಮ ಭಾಗದ ಜನತೆ ಕಾನೂನು ಮುರಿಯುವುದು ಪ್ರತಿಷ್ಠೆಯ ವಿಷಯವೆನ್ನುವಂತೆ ಭಾವಿಸುತ್ತಾರೆ. ಕಾನೂನು ಮುರಿದರೂ ಯಾವುದೇ ಕ್ರಮ ತೆಗೆದುಕೊಳ್ಳಬಾರದು ಎಂದು ಬಯಸುವುದಾಗಿ ಹೇಳಿಕೆ ನೀಡಿದ್ದರು. ನಂತರ ಕಾಂಗ್ರೆಸ್ ಮತ್ತು ಬಿಜೆಪಿ ಪ್ರತಿಭಟನೆಯಿಂದಾಗಿ ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದರು.
ಪೊಲೀಸರು ಅನಾಗರಿಕರಂತೆ ವರ್ತಿಸುತ್ತಾರೆ ಎನ್ನುವ ಆರೋಪ ಸಾಮಾನ್ಯವಾಗಿದೆ. ಒಂದು ವೇಳೆ, ನಾಗರಿಕರು ಶಿಸ್ತುಬದ್ಧವಾಗಿ ವರ್ತಿಸಿದಲ್ಲಿ ಪೊಲೀಸರು ಅನಾಗರಿಕರಂತೆ ವರ್ತಿಸುವುದಿಲ್ಲ. ಲಾಠಿಯಿಂದ ಏಟು ಬಿದ್ದಾಗ ಮಾತ್ರ ಜನತೆ ಕಾನೂನಿನ ಮಹತ್ವ ಅರಿಯುತ್ತಾರೆ ಎನ್ನುವುದು ಜನಸಾಮಾನ್ಯರ ವಾದವಾಗಿದೆ ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಕಿರೆನ್ ರಿಜ್ಜು ಹೇಳಿದ್ದಾರೆ.