ಬೆಂಗಳೂರು, ಅ.19: ಮೆಜೆಸ್ಟಿಕ್ ಬಸ್ ನಿಲ್ದಾಣದ ಪ್ರವೇಶ ಭಾಗದಲ್ಲಿ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಮೈಮೇಲೆ ಹರಿದ ಪರಿಣಾಮ ಪಿಯುಸಿ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು ಬೆಳ್ಳಂಬೆಳಗ್ಗೆ ಸಂಭವಿಸಿದೆ. ಬಳೇಪೇಟೆ ನಿವಾಸಿ ಪೂರ್ಣಿಮಾ (18) ಮೃತಪಟ್ಟ ನತದೃಷ್ಟ ವಿದ್ಯಾರ್ಥಿನಿ.
ಸುಂದರಮೂರ್ತಿ ಎಂಬುವರ ಮಗಳಾದ ಪೂರ್ಣಿಮಾ ಮೌಂಟ್ ಕಾರ್ಮೆಲ್ ಕಾಲೇಜಿ ನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳೆಂದು ಪೊಲೀಸರು ತಿಳಿಸಿದ್ದಾರೆ. ಕಾಲೇಜಿಗೆ ತೆರಳಲು ಬೆಳಗ್ಗೆ 7.30ಕ್ಕೆ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ನಡೆದು ಬಂದ ಪೂರ್ಣಿಮಾ ಪ್ರವೇಶ ಭಾಗದಲ್ಲಿ ಬರುವಾಗ ಬಿಎಂಟಿಸಿ ಬಸ್ಸೊಂದು ಡಿಕ್ಕಿ ಹೊಡೆದಿದೆ.
ಡಿಕ್ಕಿ ರಭಸಕ್ಕೆ ಆಕೆ ಕೆಳಕ್ಕೆ ಬಿದ್ದಿದ್ದು, ಬಸ್ನ ಚಕ್ರ ಆಕೆ ಮೇಲೆ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೋಷಕರ ಆಕ್ರಂಧನ ಮುಗಿಲು ಮುಟ್ಟಿತ್ತು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಪೋಷಕರಿಗೆ ಒಪ್ಪಿಸಲಾಗಿದೆ. ಉಪ್ಪಾರಪೇಟೆ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.
