ಮುಂಬೈ

ಭಾರತ-ಪಾಕಿಸ್ತಾನ ನಡುವಿನ ಕ್ರಿಕೆಟ್ ಸರಣಿ ಕುರಿತು ಮಾತುಕತೆ; ಬಿಸಿಸಿಐಗೆ ಮುತ್ತಿಗೆ ಹಾಕಿ ದಾಂಧಲೆ ನಡೆಸಿದ ಶಿವಸೇನೆ ಕಾರ್ಯಕರ್ತರು

Pinterest LinkedIn Tumblr

shiv-sena-protest-against

ಮುಂಬೈ,ಅ.19: ಭಾರತ-ಪಾಕಿಸ್ತಾನ ದಾಯಾದಿಗಳ ನಡುವಣ ಕ್ರಿಕೆಟ್ ಸರಣಿಗೂ ಶಿವಸೇನೆ ತೀವ್ರ ಪ್ರತಿರೋಧ ವ್ಯಕ್ತಪಡಿಸುತ್ತಿದ್ದು, ಕ್ರೀಡೆಗೂ `ಕೋಮು ಗ್ರಹಣ’ ಹಿಡಿಯುವ ಸಾಧ್ಯತೆಗಳು ದಟ್ಟವಾಗಿದೆ.

ಭಾರತ-ಪಾಕಿಸ್ತಾನ ನಡುವಿನ ಕ್ರಿಕೆಟ್ ಸರಣಿ ಕುರಿತು ಮಾತುಕತೆ ನಡೆಸಲು ಬಿಸಿಸಿಐ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಜೊತೆಗೆ ಇಂದು ಸಭೆ ನಿಗದಿ ಪಡಿಸಿತ್ತಾದರೂ ಶಿವಸೇನೆ ಕಾರ್ಯಕರ್ತರು ಬಿಸಿಸಿಐಗೆ ಮುತ್ತಿಗೆ ಹಾಕಿ ದಾಂಧಲೆ ನಡೆಸಿದ ಪರಿಣಾಮ ಮಾತುಕತೆಯನ್ನು ರದ್ದುಗೊಳಿಸಿದೆ.

ಬಿಸಿಸಿಐ ಕಚೇರಿಗೆ ಮುತ್ತಿಗೆ ಹಾಕಿದ ಶಿವಸೇನೆ ಕಾರ್ಯಕರ್ತರು ಶಶಾಂಕ್ ಮನೋಹರ್ ಅವರ ರಾಜೀನಾಮೆಗೆ ಒತ್ತಾಯಿಸಿ, ಅವರ ವಿರುದ್ಧ ಘೋಷಣೆಗಳನ್ನು ಹಾಕಿ, ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನ ಭಾರತದಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವುದರಿಂದ ದಾಯಾದಿಗಳ ಕ್ರಿಕೆಟ್ ಸರಣಿ ನಡೆಸದಂತೆ ಶಿವಸೇನೆ ತಾಕೀತು ಮಾಡಿದೆ. ಪ್ರತಿಯೊಬ್ಬರಿಗೂ ಪ್ರತಿಭಟಿಸುವ ಹಕ್ಕಿದೆ. ಆದರೆ ಅದು ಸಭ್ಯ ರೀತಿಯಲ್ಲಿರಬೇಕು. ಮನೋಹರ್ ಅವರು ವಿಷಯದ ಗಂಭೀರತೆ ಮತ್ತು ಸೂಕ್ಷ್ಮತೆಯನ್ನು ಅರಿತಿದ್ದಾರೆ. ನಮ್ಮೆಲ್ಲರಿಗೂ ಪ್ರತಿಭಟಿಸುವ ಹಕ್ಕಿದೆ. ಆದರೆ ಕಚೇರಿ ಧ್ವಂಸ ಹಾಗೂ ಮಸಿ ಬಳಿಯುವಂತಹ ಅನಾಗರಿಕ ವರ್ತನೆಯನ್ನು ಒಪ್ಪಲಾಗದು ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್ ಅಭಿಪ್ರಾಯಪಟ್ಟಿದ್ದಾರೆ.

ಪಿಸಿಬಿ ಅಧ್ಯಕ್ಷ ಶಹರ್ಯಾರ್ ಖಾನ್ ಮತ್ತು ಕಾರ್ಯಕಾರಿ ಸಮಿತಿ ಸದಸ್ಯ ನಜಂ ಸೇಥಿ ಅವರು ನಿನ್ನೆಯಷ್ಟೆ ಭಾರತಕ್ಕೆ ಆಗಮಿಸಿದ್ದು, ಡಿಸೆಂಬರ್‍ನಲ್ಲಿ ಆಯೋಜಿಸಲು ಉದ್ದೇಶಿಸಲಾಗಿದ್ದ ಭಾರತ-ಪಾಕಿಸ್ತಾನ ದಾಯಾದಿಗಳ ನಡುವಣ ಕ್ರಿಕೆಟ್ ಪಂದ್ಯದ ಕುರಿತು ಮಾತುಕತೆ ನಡೆಸಲು ಸಭೆಯಲ್ಲಿ ಪಾಲ್ಗೊಳುವವರಿದ್ದರು.

ದಾದ್ರಿ ಪ್ರಕರಣದಲ್ಲಿ ದೇಶದಲ್ಲಿ ಕೋಮು ಸಾಮರಸ್ಯ ಕದಡಿದ್ದು, ಅನೇಕರು ಈ ಘಟನೆಯನ್ನು ಸಮರ್ಥಿಸಿದ್ದರೆ, ಬಹುತೇಕರು ಖಂಡಿಸಿದ್ದರು. ಈ ಘಟನೆ ದಾಯಾದಿಗಳ ನಡುವಿನ ಕಂದರವನ್ನು ಮತ್ತಷ್ಟು ಹೆಚ್ಚಿಸಿದೆ.

ಇತ್ತೀಚೆಗಷ್ಟೆ ಮಾಜಿ ಉಪಪ್ರಧಾನಿ ಬಿಜೆಪಿಯ ಎಲ್.ಕೆ.ಅಡ್ವಾಣಿಯವರ ಮಾಧ್ಯಮ ಕಾರ್ಯದರ್ಶಿಯಾಗಿದ್ದ ಸುಧೀಂದ್ರ ಕುಲಕರ್ಣಿಯವರು, ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಖುರ್ಷಿದ್ ಮಹಮ್ಮದ್ ಕಸೂರಿ ಅವರ ಪುಸ್ತಕ ಬಿಡುಗಡೆ ಸಮಾರಂಭವನ್ನು ಮುಂಬೈನಲ್ಲಿ ಹಮ್ಮಿಕೊಂಡಿದ್ದನ್ನು ವಿರೋಧಿಸಿ ಶಿವಸೇನೆ ಕುಲಕರ್ಣಿಯವರಿಗೆ ಮಸಿ ಬಳಿಯುವ ಮೂಲಕ ಅಸಹಿಷ್ಣುತೆ ವ್ಯಕ್ತಪಡಿಸಿತ್ತು.

ಮುಂಬೈನಲ್ಲಿ ಪಾಕ್‍ಗಾಯಕನ ಕಾರ್ಯಕ್ರಮಕ್ಕೆ ತಡೆಯೊಡ್ಡಿದ್ದ ಶಿವಸೇನೆ, ಇದೀಗ ಡಿಸೆಂಬರ್‍ನಲ್ಲಿ ಆಪ್ ಸರ್ಕಾರ ದೆಹಲಿಯಲ್ಲಿ ಗುಲಾಂ ಆಲಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದ್ದು, ಇದಕ್ಕೂ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದೆ.

ಹೀಗೆ, ಸಂಗೀತ, ಸಾಹಿತ್ಯ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿನ ಪಾಕಿಸ್ತಾನದ ಪ್ರತಿನಿಧಿಗಳ ಕಾರ್ಯಕ್ರಮಗಳನ್ನು ತೀವ್ರ ರೀತಿಯಲ್ಲಿ ಪ್ರತಿಭಟಿಸುತ್ತಿರುವ ಶಿವಸೇನೆ, ಇದೀಗ ಕ್ರೀಡಾ ಕ್ಷೇತ್ರದಲ್ಲೂ ಮೂಗು ತೂರಿಸಿದ್ದು, ಭಾರತ-ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯಾವಳಿಗೂ ವಿರೋಧ ವ್ಯಕ್ತಪಡಿಸುವ ಮೂಲಕ ಕ್ರಿಕೆಟ್ ಜ್ವರವನ್ನು ಉಪಶಮನಗೊಳಿಸಲು ಹೊರಟಿದೆ.

Write A Comment