ಶ್ರೀನಗರ: ದೇಶದಲ್ಲಿ ‘ಅಭಿವ್ಯಕ್ತಿ ಸ್ವಾತ್ರಂತ್ರದ ಮೇಲೆ ಆಗುತ್ತಿರುವ ಹಲ್ಲೆ’ಯನ್ನು ವಿರೋಧಿಸಿ, ಕಾಶ್ಮೀರದ ಇಸ್ಲಾಮಿಕ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ(ಐ ಯು ಎಸ್ ಟಿ) ಎಂಬಿಎ ಪದವೀಧರನೊಬ್ಬ ಮಾನವ ಸಂಪನ್ಮೂಲಗಳ ಸಚಿವೆ ಸ್ಮೃತಿ ಇರಾನಿಯವರಿಂದ ಘಟಿಕೋತ್ಸವ ಸಮಾರಂಭದಲ್ಲಿ ಪದವಿ ಪತ್ರ ಸ್ವೀಕರಿಸಲು ನಿರಾಕರಿಸಿದ್ದಾರೆ.
“ವಿದ್ಯಾರ್ಥಿಗೆ ಪದವಿ ಪತ್ರ ಸ್ವೀಕರಿಸುವುದು ಯಾವುದೇ ಪ್ರಶಸ್ತಿಗಿಂತಲೂ ಹೆಚ್ಚಿನ ಗೌರವವಾದರೂ, ನಾನು ಸಮೀರ್ ಗೋಜ್ವಾರಿ ಅಕ್ಟೋಬರ್ ೧೯ ರಂದು ಪದವಿ ಪತ್ರ ಸ್ವೀಕರಿಸುವುದಿಲ್ಲ” ಎಂದು ಐ ಯು ಎಸ ಟಿಯಿಂದ 2008ರಲ್ಲಿ ಎಂ ಬಿ ಎ ಪದವಿ ಮುಗಿಸಿರುವ ಗೋಜ್ವಾರಿ ತಮ್ಮ ಫೇಸ್ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ,
ಐ ಯು ಎಸ ಟಿಯ ಮೊದಲ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಸ್ಮೃತಿ ಇರಾನಿ ಅವರು ಪದವಿ ಪತ್ರಗಳನ್ನು ವಿತರಿಸಲಿದ್ದಾರೆ ಎಂಬ ವದಂತಿಗಳ ಮೇರೆಗೆ ಗೋಜ್ವಾರಿ ಹೀಗೆ ಪ್ರತಿಕ್ರಿಯಿಸಿದ್ದಾರೆ.
“ದೇಶದಲ್ಲಿ 41ಕ್ಕೂ ಹೆಚ್ಚು ಹಿರಿಯ ಲೇಖಕರು ‘ಅಭಿವ್ಯಕ್ತಿ ಸ್ವಾತ್ರಂತ್ರದ ಮೇಲೆ ಆಗುತ್ತಿರುವ ಹಲ್ಲೆ’ಯನ್ನು ವಿರೋಧಿಸಿ ಪ್ರತಿಷ್ಟಿತ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಹಿಂದಿರುಗಿಸುತ್ತಿರುವಾಗ ಐ ಯು ಎಸ ಟಿಯ ಮೊದಲ ಘಟಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಪಕ್ಷದ ಸ್ಮೃತಿ ಇರಾನಿ ವಹಿಸಲಿದ್ದಾರೆ ಎಂಬ ಸುದ್ದಿ ಕೇಳಿ ಆಘಾತವಾಗಿದೆ” ಎಂದು ಅವರು ತಿಳಿಸಿದ್ದಾರೆ.
ಸ್ಮೃತಿ ಇರಾನಿ ಮಂಗಳವಾರ ಗಂದೇರ್ಬಾಲ್ ನ ಕಾಶ್ಮೀರ್ ಕಾಂಪ್ಲೆಕ್ಸ್ ನಲ್ಲಿ ಕೆಂದ್ರ ವಿಶ್ವವಿದ್ಯಾಲಯಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.
