ಉಡುಪಿ: ಅಂದು ಈತನಿಗೆ ನೀರು ಎಂದರೇ ತುಂಬನೇ ಭಯ. ನೀರು ಕಂಡರೇ ಬೆದರುತ್ತಿದ್ದ ಇದೇ ಬಾಲಕ ಈಗ ನಿರಂತರ 1.5 ಕೀ. ಮೀ. ಈಜುವ ಮೂಲಕ ಸಾಧನೆ ಮಾಡುತ್ತಿದ್ದಾನೆ. ಹೌದು ಈತನ ಹೆಸರು ರೊನಾನ್ ಲೂಯಿಸ್ ಪ್ರಾಯ 8 ವರ್ಷ. ಬ್ರಹ್ಮಗಿರಿಯ ರೋಶನ್ ಲೂಯಿಸ್, ಶೈಲಾ ಲೂಯಿಸ್ ಅವರ ಮುದ್ದಿನ ಮಗ. ಕನ್ನರ್ಪಾಡಿ ಸೈಂಟ್ ಮೇರೀಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ.
ರೋನಾನ್ ಲೂಯಿಸ್ ಗೆ ಇದ್ದ ವಿಪರೀತ ನೀರಿನ ಭಯವನ್ನು ಹೋಗಲಾಡಿಸಲು ತಂದೆ ಕೆಲವು ತಿಂಗಳ ಹಿಂದಷ್ಟೇ ಅಜ್ಜರಕಾಡಿನಲ್ಲಿರುವ ಈಜು ಕೊಳ್ಳದಲ್ಲಿ ತರಬೇತಿಗೆ ಸೇರಿಸಿದ್ದರು. ಸುಮಾರು 21 ದಿನಗಳ ಕಾಲ ನಡೆದ ಈ ತರಬೇತಿಯಲ್ಲಿ ತರಬೇತುದಾರರಾಗಿದ್ದ ಗಿನ್ನಿಸ್ ದಾಖಲೆ ಮಾಡಿದ ಗೋಪಾಲ ಖಾರ್ವಿ ಮತ್ತು ಚಂದ್ರಶೇಖರ್ ಅವರ ತರಬೇತಿ ಪಡೇದಿದ್ದಾನೆ. ಸದ್ಯ ಈತನೇ ಹೇಳುವ ಪ್ರಕಾರ ನೀರಿನ ಭಯ ಸಂಪೂರ್ಣ ಹೋಗಿದೆ ಮಾತ್ರವಲ್ಲದೇ ಈಜಿನಲ್ಲಿ ಸಾಧನೆ ಮಾಡುವ ಬಯಕೆ ಹೊಂದಿದ್ದಾನೆ. ಈತ ಈಜಷ್ಟೇ ಅಲ್ಲ ಚೆಸ್, ಸ್ಕೇಟಿಂಗ್, ಸೈಕ್ಲಿಂಗ್ನಲ್ಲೂ ಪರಿಣಿತನಾಗಿದ್ದಾನೆ.
ದಾಖಲೆಗೆ ಅಡ್ಡಿಯಾದ ವಯಸ್ಸು: 25 ಮೀ. ಉದ್ದದ ಈಜುಕೊಳದಲ್ಲಿ ಈತ ಫ್ರೀಸ್ಟೈಲ್ನಲ್ಲಿ ಬಿಡುವಿಲ್ಲದೆ ಐವತ್ತಕ್ಕೂ ಅಧಿಕ ಬಾರೀ ಸುತ್ತಿ ಬರುತ್ತಾನೆ. ಲಿಮ್ಕಾ ದಾಖಲೆಗೆ 13 ವರ್ಷವಾಗಿರಬೇಕು ಎಂಬ ನಿಯಮವಿರುವ ಕಾರಣ ಈತನ ಪೋಷಕರು ಎರಡು ಬಾರೀ ಅರ್ಜಿ ಹಾಕಿದ್ದು ಪುರಸ್ಕಾರಗೊಂಡಿಲ್ಲ. ಆದ್ದರಿಂದ ರೊನನ್ ದಾಖಲೆ ಸಾಧನೆಗಾಗಿ ಇನ್ನೈದು ವರ್ಷಗಳ ಕಾಲ ಕಾಯಬೇಕು ಅಷ್ಟರಲ್ಲಿ ಇನ್ನಷ್ಟು ಈಜು ಪಟುವಾಗಲಿದ್ದಾನೆ ಎನ್ನುತ್ತಾರೆ ಈತನ ಹೆತ್ತವರು.
ಆತನ ಉಸಿರಾಟ ಕ್ರಿಯೆ ಉತ್ತಮವಾಗಿರುವುದರಿಂದ ಆತನಗೆ ಈಜು ಸುಲಭವಾಗಿದೆ. ನಿರಂತರವಾಗಿ ಈಜಾಡಲು ಉಸಿರಾಟ ಸಮರ್ಪಕವಾಗಿರಬೇಕಿದೆ. ಮೊದಲ ಹಂತದ ತರಬೇತಿಯಲ್ಲಿ ಬಹಳ ಸುಧಾರಣೆ ಕಂಡಿದ್ದ. ಬಳಿಕ ಫ್ರೀಸ್ಟೈಲ್ ಈಜಿನಲ್ಲಿ ಪಳಗಿ ಈ ಚಿಕ್ಕ ವಯಸ್ಸಿಗೆ ದೊಡ್ಡ ಸಾಧನೆ ಮಾಡಿದ್ದಾನೆ.ರೊನಾನ್ ಇಷ್ಟು ಸಣ್ಣ ಪ್ರಾಯದ ಈ ಸಾಧನೆಗೆ ನಿಜಕ್ಕೂ ಉತ್ತಮವಾಗಿದೆ.
-ಗೋಪಾಲ ಖಾರ್ವಿ, ತರಬೇತುದಾರ




