ಮಧ್ಯಪ್ರದೇಶ: ನಾವು ಮೇಲು, ನೀವು ಕೀಳು ಎಂದು ಧರ್ಮದ ವಿಚಾರದಲ್ಲಿ ಹಲವಾರು ಜನರು ಕಿತ್ತಾಡುವುದು ಸಾಮಾನ್ಯವಾಗಿದೆ. ಕೋಮುವಾದ ಹೆಚ್ಚಿರುವ ಈ ದಿನಗಳಲ್ಲಿ ಸೌಹಾರ್ದತೆಯಿಂದ ಬಾಳುವವರನ್ನು ಕಾಣುವುದು ಬಲು ಅಪರೂಪ. ಇಂತಹ ಪರಿಸ್ಥಿತಿ ಕಾಣಸಿಗುವಾಗ ಮಧ್ಯಪ್ರದೇಶದ ಮುಸ್ಲಿಂ ಮಹಿಳೆಯೊಬ್ಬಳು ಹಿಂದೂ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದ್ದಾಳೆ.
45 ವರ್ಷದ ಸುಗ್ ‘ರಾ ಬೀ ದಿನಗೂಲಿ ಮಾಡುತ್ತಾ ಮಂದ್ ಸೌರ್’ ನ ಇಂದಿರಾ ಕಾಲೋನಿಯಲ್ಲಿ ಕಳೆದ 10 ವರ್ಷಗಳಿಂದ ತನ್ನ ಕುಟುಂಬಸ್ಥರೊಡನೆ ನೆಲೆಸಿದ್ದಾಳೆ. ಮೂರು ವರ್ಷಗಳ ಮೊದಲು ಈ ಮುಸ್ಲಿಂ ಮಹಿಳೆ ತನ್ನ ಮನೆ ಪಕ್ಕದಲ್ಲಿ ಹಿಂದೂ ಮಂದಿರವೊಂದನ್ನು ಕಂಡಿದ್ದಾಳೆ, ಸಂಪೂರ್ಣವಾಗಿ ಪಾಳು ಬಿದ್ದಿದ್ದ ಈ ಗುಡಿಯ ಕುರಿತಾಗಿ ಅಲ್ಲಿನ ಜನರಿಗೆ ತಿಳಿದಿರಲಿಲ್ಲವಂತೆ.
‘ನನಗೆ ಈ ಗುಡಿಯ ಕುರಿತು ಗೊತ್ತಾದ ಮೇಲೆ ಇದನ್ನು ಜೀರ್ಣೋದ್ಧಾರ ಮಾಡುವ ಕುರಿತು ಯೋಚಿಸಿದೆ. ಇದರಂತೆ ನಮ್ಮ ಕಾಲೋನಿಯ ಪ್ರತಿಯೊಬ್ಬರಿಂದ ಎರಡು ರೂಪಾಯಿ ಚಂದಾ ಪಡೆದು ಗುಡಿಯನ್ನು ಮತ್ತೆ ಸರಿಪಡಿಸಿದ್ದೇನೆ’ ಎಂದು ಸುಗ್’ರಾ ತಿಳಿಸಿದ್ದಾರೆ.
ಮೇಲ್ವಿಚಾರಣೆಯ ಕುರಿತು ತಿಳಿಸಿದ ಸುಗ್’ರಾ ‘ಹಿಂದೂ & ಮುಸ್ಲಿಂ ಎಂಬ ಭೇದಭಾವ ಇಲ್ಲದೆ ಪ್ರತಿಯೊಬ್ಬರೂ ಇಲ್ಲಿ ಬರುತ್ತಾರೆ ಹಾಗೂ ಇದನ್ನು ನೋಡಿಕೊಳ್ಳುತ್ತಾರೆ. ನಾವಿಲ್ಲಿ ನವರಾತ್ರಿ ಉತ್ಸವವನ್ನೂ ಆಚರಿಸುತ್ತೇವೆ. ಧರ್ಮದೊಡನೆ ಭೇದಭಾವ ಪ್ರದರ್ಶಿಸಲು ನಾವ್ಯಾರು? ದುರ್ಗಾದೇವಿ ಇಡೀ ಜಗತ್ತಿನ ತಾಯಿ. ಇದೇ ಕಾರಣದಿಂದ ನಾನು ಈ ಗುಡಿಯನ್ನು ಜೀರ್ಣೋದ್ಧಾರ ಮಾಡಿದ್ದೇನೆ’ ಎಂದಿದ್ದಾರೆ.
ಆರತಿಯಲ್ಲಿ ಎಲ್ಲರೂ ಭಾಗವಹಿಸುತ್ತಾರೆ!
ಈ ಗುಡಿಯನ್ನು ಪುನರ್ ನಿರ್ಮಿಸಲು ಊರಿನ ಜನತೆ ವಹಿಸಿದ ಕಾಳಜಿ ಮಧ್ಯಪ್ರದೇಶದ ಈ ಸಾಧಾರಣ ಊರನ್ನು ಅಸಾಧಾರಣವನ್ನಾಗಿಸಿದೆ. ಈ ಕಾಲೋನಿಯಲ್ಲಿ ಈ ಗುಡಿಯನ್ನು ನೋಡಿಕೊಳ್ಳಲೆಂದೇ ಸಮಿತಿ ರಚನೆಯಾಗಿದ್ದು ಇದರಲ್ಲಿ ಹಿಂದು ಹಾಗೂ ಮುಸ್ಲಿಂ ಈ ಎರಡೂ ಸಮುದಾಯದ ಜನರು ಸದಸ್ಯರಾಗಿದ್ದು, ಪ್ರತಿ ಸಂಜೆ ಎಲ್ಲರೂ ಸೇರಿ ಇಲ್ಲಿ ದೇವಿಗೆ ಆರತಿ ನಡೆಸುತ್ತಾರೆ.
ಈ ಕುರಿತಾಗಿ ಪ್ರತಿಕ್ರಿಯಿಸಿದ ಇಲ್ಲಿನ ನಿವಾಸಿಯೊಬ್ಬರು ‘ನಮ್ಮ ಕಾಲೋನಿಯ ವಾತಾವರಣ ತುಂಬಾ ಚೆನ್ನಾಗಿದೆ. ನಾವೆಲ್ಲರೂ ಶಾಂತಿಯಿಂದ, ನೆಮ್ಮದಿಯಿಂದ ಒಟ್ಟಾಗಿ ಇದ್ದೇವೆ. ಗುಡಿಗೆ ಹೋಗಿ ಪೂಜೆ ಮಾಡುವುದರೊಂದಿಗೆ ಮೊಹರಂ ಸಂದರ್ಭದಲ್ಲಿ ಇಲ್ಲಿ ಸಿಹಿ ತಿಂಡಿಯನ್ನೂ ವಿತರಿಸುತ್ತೇವೆ’ ಎಂದಿದ್ದಾರೆ.
ಕೋಮು ಗಲಭೆಗೆ ಕುಮ್ಮಕ್ಕು ನೀಡುವವರು ಹೆಚ್ಚಿರುವ ಈ ದಿನಗಳಲ್ಲಿ ಧರ್ಮಕ್ಕೆ ಬೆಲೆ ನೀಡದೆ ಮಾನವೀಯತೆಯಿಂದ ಬಾಳುವ ಈ ಕಾಲೋನಿಯ ಜನತೆ ಮಾದರಿಯಾಗಿದ್ದಾರೆ.
