ಮುಂಬೈ, ಅ.13: ಪಾಕಿಸ್ತಾನದ ಮಾಜಿ ಸಚಿವ ಖುರ್ಷಿದ್ ಕಸೂರಿ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಅನುಮತಿ ನೀಡಿದ್ದು , ಭಾರೀ ವಿವಾದ ಸೃಷ್ಟಿಸಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಕಾರ್ಯ ವೈಖರಿಯಿಂದ ಬೇಸತ್ತಿರುವ ಮೈತ್ರಿ ಪಕ್ಷ ಶಿವಸೇನೆ ಸಂಪುಟ ತೊರೆಯಲು ಮುಂದಾಗಿದೆ.
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿವೆ. ನಿನ್ನೆ ಕರ್ನಾಟಕ ಮೂಲದ ಚಿಂತಕ ಸುಧೀಂದ್ರ ಕುಲಕರ್ಣಿಗೆ ಶಿವಸೇನೆ ನಾಯಕರು ಮುಖಕ್ಕೆ ಮಸಿ ಬಳಿದಿದ್ದರು. ಆದರೂ ಮುಖ್ಯಮಂತ್ರಿ ಫಡ್ನವೀಸ್ ನಿಗದಿಯಾದಂತೆ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಖುರ್ಷಿದ್ ಕಸೂರಿ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು. ಇದರಿಂದ ಕೆರಳಿರುವ ಶಿವಸೇನೆ ಸಂಪುಟದಲ್ಲಿರುವ ಎಲ್ಲಾ ಸಚಿವರು ತಕ್ಷಣವೇ ರಾಜೀನಾಮೆ ನೀಡಬೇಕೆಂದು ಶಿವಸೇನೆಯ ಕಾರ್ಯಾಧ್ಯಕ್ಷ ಉದ್ಧವ್ ಠಾಕ್ರೆ ಸೂಚನೆ ಕೊಟ್ಟಿದ್ದಾರೆಂದು ಮೂಲಗಳು ಖಚಿತಪಡಿಸಿವೆ.
ದೇವೇಂದ್ರ ಫಡ್ನವೀಸ್ ಸಂಪುಟದಲ್ಲಿ ಶಿವಸೇನೆಯ 10 ಮಂದಿ ಸಚಿವರಿದ್ದಾರೆ. ಒಂದು ವೇಳೆ ಬಿಜೆಪಿಗೆ ನೀಡಿರುವ ಬೆಂಬಲವನ್ನು ಹಿಂತೆಗೆದುಕೊಂಡರೆ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಅಪಾಯಕ್ಕೆ ಸಿಲುಕುವುದು ಖಚಿತ.
ಮಹಾರಾಷ್ಟ್ರದ ಒಟ್ಟು 283 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 122, ಶಿವಸೇನೆ 63, ಕಾಂಗ್ರೆಸ್ 42, ಎನ್ಸಿಪಿ 41, ಎಐಎಂಐಎಂ 2, ಎಸ್ಪಿ 1, ಪಿಡಬ್ಲ್ಯುಪಿಐ 3, ಬಿವಿಎ 3, ಸಿಪಿಐಎಂ 1 ಹಾಗೂ ಇತರರು 7 ಮಂದಿ ಇದ್ದಾರೆ.
ಯಾವುದೇ ಸರ್ಕಾರ ಸರಳ ಬಹುಮತದ ಮೂಲಕ ಸರ್ಕಾರ ರಚಿಸಬೇಕಾದರೆ 142 ಸ್ಥಾನಗಳನ್ನು ಹೊಂದಬೇಕು. ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿದ್ದು , 122 ಸ್ಥಾನ ಹೊಂದಿದ್ದರೂ ಸರಳ ಬಹುಮತಕ್ಕೆ ಇನ್ನು 20 ಸ್ಥಾನಗಳ ಕೊರತೆ ಎದುರಿಸಲಿದೆ. ಸಂಪುಟ ತೊರೆಯಲು ಉದ್ಧವ್ ಠಾಕ್ರೆ ಸಚಿವರಿಗೆ ಸೂಚನೆ ಕೊಟ್ಟಿದ್ದರೂ ಸರ್ಕಾರದಿಂದ ಹೊರ ಬರುವ ಬಗ್ಗೆ ಯಾವುದೇ ರೀತಿಯ ಸುಳಿವು ಬಿಟ್ಟುಕೊಟ್ಟಿಲ್ಲ. ಕಳೆದ ರಾತ್ರಿ ಮಾತ್ರೋಶ್ರೀಯಲ್ಲಿ ಶಿವಸೇನೆಯ ಎಲ್ಲಾ ಶಾಸಕರು, ಸಚಿವರು ಸಭೆ ನಡೆಸಿದ್ದಾರೆಂದು ಗೊತ್ತಾಗಿದೆ.
ಸದ್ಯಕ್ಕೆ ಸಚಿವರು ಮಾತ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮುಂದಿನ ಕಾರ್ಯತಂತ್ರಗಳ ಕುರಿತು ನಿರ್ದೇಶನ ನೀಡಲಿದ್ದಾರೆ ಎಂದು ಉದ್ಧವ್ ಠಾಕ್ರೆ ಸೂಚ್ಯವಾಗಿ ಹೇಳಿದ್ದಾರೆ. ನಿನ್ನೆ ಶಿವಸೇನೆ ವಿರೋಧದ ನಡುವೆಯೂ ಪಾಕಿಸ್ತಾನದ ಮಾಜಿ ಸಚಿವ ಖುರ್ಷಿದ್ ಕಸೂರಿ ಅವರ ನೆದರ್ ಎ ಹಾಕ್ ನಾರ್ ಎ ಡೋವ್ ಪುಸ್ತಕ ಬಿಡುಗಡೆ ಸಮಾರಂಭವನ್ನು ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರ ಮಾಧ್ಯಮ ಸಲಹೆಗಾರ ಸುಧೀಂದ್ರ ಕುಲಕರ್ಣಿ ಆಯೋಜಿಸಿದ್ದರು. ಶಿವಸೇನೆ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಅವರ ಮುಖಕ್ಕೆ ಮಸಿ ಬಳಿದಿತ್ತು. ಆದರೂ ಪುಸ್ತಕ ಬಿಡುಗಡೆ ಯಥಾ ರೀತಿ ನಡೆದಿತ್ತು.
ಫಡ್ನವೀಸ್ ವಿರುದ್ಧ ವಾಗ್ದಾಳಿ: ಇನ್ನು ಶಿವಸೇನೆ ತನ್ನ ಮುಖವಾಣಿ ಮಾತೋಶ್ರೀಯಲ್ಲಿ ಫಡ್ನವೀಸ್ ಕಾರ್ಯ ವೈಖರಿ ವಿರುದ್ಧ ಕಿಡಿಕಾರಿದೆ. ನಿಮ್ಮ ನಡವಳಿಕೆಯನ್ನು ಸರಿಪಡಿಸಿಕೊಳ್ಳದಿದ್ದರೆ ಭಾರೀ ಬೆಲೆ ತೆತ್ತಬೇಕಾಗುತ್ತದೆ ಎಂದು ಸೂಚ್ಯವಾಗಿ ಎಚ್ಚರಿಸಿದೆ. ಮಹಾರಾಷ್ಟ್ರದ ಬಿಜೆಪಿ-ಶಿವಸೇನೆ ಕಳೆದ ಎರಡು ದಶಕಗಳಿಂದ ದೋಸ್ತಿ ಪಕ್ಷಗಳಾಗಿ ಒಂದು ಬಾರಿ ವಿಧಾನಸಭೆ ಹಾಗೂ ಬೃಹನ್ ಮುಂಬೈ ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ದೋಸ್ತಿ ಸರ್ಕಾರ ರಚಿಸಿದ್ದವು. ಇದೀಗ ವಿವಾದ ಭುಗಿಲೆದ್ದಿರುವುದರಿಂದ ಬಿಜೆಪಿ ನಾಯಕರು ಶಿವಸೇನೆಯ ಬೇಡಿಕೆಗೆ ಮಣಿಯಲಿದ್ದಾರೆಯೇ ಎಂಬ ಯಕ್ಷ ಪ್ರಶ್ನೆ ಎದುರಾಗಿದೆ.
