ಮೆಲ್ಬೋರ್ನ್, (ಆಸ್ಟ್ರೇಲಿಯಾ): ಭಾರತೀಯರ ಆರಾಧ್ಯ ದೇವತೆ ವಿಸ್ತತವಾದ ಹೃದಯಪ್ರಪಂಚವುಳ್ಳ ಪಂಚಮುಖಿ ವಿಶ್ವಂಭರ ಆಂಜನೇಯನಂತೆ ಜಗತ್ತು ಇಂದು ಗೀತೆ ನಿರೂಪಿಸಿದಂತೆ ಭೂಮಿಯೊಂದು ಕುಟುಂಬವೃಕ್ಷದಂತೆ ಎಂಬ ತತ್ವವನ್ನು ಅಳವಡಿಸಿಕೊಳ್ಳುವ ಮೂಲಕ ಬಹುತ್ತ್ವವನ್ನು ಅಳಿಸಿಕೊಳ್ಳದೆ ಏಕತ್ವವನ್ನು ಉಳಿಸಿಕೊಳ್ಳುವ ದೃಢಪಡಿಸುವ ಸಾಧನೆಯನ್ನು ಮಾಡಬೇಕು. ಭಿನ್ನತೆಯನ್ನು ಹುಡುಕುವ ಕೆದಕುವ ಎತ್ತಿ ತೋರಿಸುವ ವೈಭವೀಕರಿಸುವ ವಿಭಾಜಕ ಕೆಲಸವನ್ನು ನಿಲ್ಲಿಸಿ ಮೂಲದಲ್ಲಿರುವ ಏಕತೆಯನ್ನು ಹುಡುಕಿ ತೆಗೆದು ಎತ್ತಿ ತೋರಿಸಿ ಸ್ಥಿರೀಕರಿಸುವ ಕೆಲಸಕ್ಕೆ ಇಂದು ಇಂಬು ನೀಡಿದರೆ ವಿಶ್ವಶಾಂತಿ ಸುಸ್ಥಿರಗೊಳ್ಳಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಭೌಗೋಳಿಕ ಇತಿಹಾಸವನ್ನು ಸಂಶೋಧಿಸಿದಾಗ ಆಸ್ಟ್ರೇಲಿಯಾ ಒಂದು ಕಾಲದಲ್ಲಿ ಭಾರತದ ಅವಿಭಕ್ತ ಅಂಗವಾಗಿದ್ದು ಇಂದಿಗೂ ಆಸ್ಟ್ರೇಲಿಯಾದ ಪಶ್ಚಿಮಭಾಗವನ್ನು ಭಾರತದ ಪೂರ್ವಕರಾವಳಿಗೆ ಜೋಡಿಸಿದಾಗ ಎರಡೂ ಕರಾವಳಿಯ ಅಂಕುಡೊಂಕುಗಳು ಪೂರ್ಣಮಯವಾಗುವುದೆಂದು ಸಂಶೋಧಕರು ಅಭಿಪ್ರಾಯ ಪಡುತ್ತಿದ್ದು ಇಂತಹ ಏಕೀಕರಣದ ಏಕತೆಗೆ ಸ್ಫೂರ್ತಿ ನೀಡುವ ಚಿಂತನೆಗೆ ಬಲಬರಬೇಕು. ಪ್ರಸಾರ ಸಿಗಬೇಕು. ಎಂದು ಉಡುಪಿ ಶ್ರೀಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ನುಡಿದರು.
ಅವರು ಆಸ್ಟ್ರೇಲಿಯಾದ ಮೆಲ್ಬೋರ್ನ್ ಕೇಸಿಸಿಟಿಗೆ ಆಗಮಿಸಿದಾಗ ಅವರ ಗೌರವಾರ್ಥವಾಗಿ ಸಿಟಿಮೇಯರ್ ಏರ್ಪಡಿಸಿದ ಸನ್ಮಾನ ಸಮಾರಂಭದಲ್ಲಿ ಸನ್ಮಾನಪತ್ರ ಸಿಟಿಪದಕಹಾರವನ್ನೊಳಗೊಂಡ ಪೌರಸಮ್ಮಾನವನ್ನು ಸ್ವೀಕರಿಸಿ ಮಾತನಾಡುತ್ತಿದ್ದರು.
ಮೇಯರ್ ಸಿ.ಆರ್. ಮಿಕ್ ಮೋರ್ ಲ್ಯಾಂಡ್ ಶ್ರೀ ಶ್ರೀಗಳಿಗೆ ಸನ್ಮಾನಪತ್ರವನ್ನು ನೀಡುತ್ತಾ 750 ವರ್ಷಗಳ ಇತಿಹಾಸವುಳ್ಳ ಹಿಂದೂಪೀಠಾಧಿಪತಿಯೊಬ್ಬರು ಜಗತ್‌ಪ್ರಸಿದ್ಧರಾಗಿ ವಿಶ್ವಾಶಾಂತಿಪ್ರಚಾರಕರಾಗಿ ಜಗತ್ತಿನಲ್ಲೇ ಪ್ರಪ್ರಥಮ ಲಿವೇಬಲ್ ಸಿಟಿ ಎಂದು ಪ್ರಸಿದ್ಧವಾದ ಆಧುನಿಕವಾದ ಮೆಲ್ಬೋರ್ನ್ ಕೇಸಿ ಸಿಟಿಗೆ ಆಗಮಿಸಿದ್ದು ಅತ್ಯಂತ ಆಧುನಿಕವಾದ ನಗರಕ್ಕೆ ಪ್ರಾಚೀನ ವೈಭವದ ಮೆರುಗನ್ನು ನೀಡಿದಂತಾಗಿದೆ. ಮೆಲ್ಬೋರ್ನ್ ಕೇಸಿ ಸಿಟಿಯು ಸಾಂಸ್ಕೃತಿಕ ವೈವಿಧ್ಯಕ್ಕೆ ಪ್ರೋತ್ಸಾಹ ನೀಡಿರುವುದೇ ಅದರ ಪ್ರಾಥಮ್ಯದ ಗರಿಮೆಯ ಹಿಂದಿರುವ ಹಿರಿಮೆ. ಯಾವುದೇ ಮನುಷ್ಯ ಮುಕ್ತ ಹೃದಯಿಯಾದಾಗ ಮುಖ್ಯವ್ಯಕ್ತಿಯಾಗುತ್ತಾನೆ ಎಂದರು.
ಅನೇಕ ಭಾರತೀಯರು ಭಾಗವಹಿಸಿದ ಟೌನ್ ಹಾಲ್‌ನಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಶ್ರೀ ಶ್ರೀಗಳು ಮೇಯರ್ ಅವರಿಗೆ ಸಂಸ್ಥಾನದ ಶಾಲು ಹಾಗೂ ಆಚಾರ್ಯ ಮಧ್ವರ ಸಂದೇಶವುಳ್ಳ ಗ್ರಂಥ ಹಾಗೂ ಅಷ್ಟಭುಜ ಭೂಮಾತೆಯ ಪ್ರತಿಕೃತಿಯನ್ನು ನೀಡಿ ಹರಸಿದರು. ಪೌರ ಆಯುಕ್ತ ಸಿ.ಆರ್. ಡೇಮಿಯನ್ ರೆಸಾರಿಯೋ ಸ್ವಾಗತಿಸಿದರು. ಪೌರಪ್ರಮುಖ ಸಿ.ಆರ್. ರಫಾಲ್ ಕಫಾನ್ ವಂದಿಸಿದರು. ಶ್ರೀ ಶ್ರೀ ಗಳು ಆಸ್ಟ್ರೇಲಿಯಾದ ಮೆಲ್ಬೋರ್ನ್ ಸಿಟಿಯಲ್ಲಿರುವ ಶ್ರೀ ಪುತ್ತಿಗೆ ಮಠದ ಶ್ರೀಕೃಷ್ಣವೃಂದಾವನದಲ್ಲಿ ಒಂದು ವಾರದ ಪರ್ಯಂತ ವಾಸ್ತವ್ಯವಿದ್ದು ಅನೇಕ ಸಾಂಸ್ಕೃತಿಕ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಲಿದ್ದಾರೆಂದು ತಿಳಿದು ಬಂದಿದೆ.




