ಅಂತರಾಷ್ಟ್ರೀಯ

ನ್ಯಾಟೋ ಪಡೆಗಳ ಮೇಲೆ ಮಾನವ ಬಾಂಬ್ ದಾಳಿ, ಅಪಾರ ಸಾವು-ನೋವು ಶಂಕೆ

Pinterest LinkedIn Tumblr

kabul-Suicide-Bomb-Attackಕಾಬೂಲ್: ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್​ನಲ್ಲಿ ಭಾನುವಾರ ಉಗ್ರರು ಮತ್ತೆ ತಮ್ಮ ಅಟ್ಟಹಾಸ ಮೆರೆದಿದ್ದು, ‘ನ್ಯಾಟೋ’ ವಿದೇಶೀ ಪಡೆಗಳನ್ನು ಗುರಿಯಾಗಿಸಿಕೊಂಡು ಮಾನವ ಬಾಂಬ್  ದಾಳಿ ನಡೆಸಿದ್ದಾರೆ.

ಭಾನುವಾರ ಬೆಳಗ್ಗೆ ಕೇಂದ್ರ ಕಾಬುಲ್ ನ ರಸ್ತೆಯಲ್ಲಿ ನ್ಯಾಟೋ ಪಡೆಗಳ ವಾಹನ ತೆರಳುತ್ತಿದ್ದಾಗ ಉಗ್ರರು ಮಾನವ ಬಾಂಬ್ ದಾಳಿ ನಡೆಸಿದ್ದಾರೆ. ಬಾಂಬ್ ಸ್ಫೋಟದ ರಭಸಕ್ಕೆ ಅಕ್ಕಪಕ್ಕದ  ವಾಹನಗಳೆಲ್ಲಾ ಚೆಲ್ಲಾಪಿಲ್ಲಿಯಾಗಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಘಟನೆಯಲ್ಲಿ ಎಷ್ಟು ಮಂದಿ ಸಾವಿಗೀಡಾಗಿದ್ದಾರೆ ಎಂಬುದರ ಕುರಿತು ಈ ವರೆಗೂ  ಯಾವುದೇ ಮಾಹಿತಿ ತಿಳಿದುಬಂದಿಲ್ಲ.

ಅಮೆರಿಕ ನೇತೃತ್ವದ ನ್ಯಾಟೋ ಅಂತಾರಾಷ್ಟ್ರೀಯ ಭದ್ರತಾ ನೆರವು ಪಡೆ (ಐಎಸ್​ಎಫ್) ಅಧಿಕೃತವಾಗಿ ಆಫ್ಘಾನಿಸ್ತಾನದ ತನ್ನ ಕಾರ್ಯಾಚರಣೆಯನ್ನು ಕಳೆದ ವರ್ಷದ ಅಂತ್ಯದಲ್ಲಿ  ಮುಕ್ತಾಯಗೊಳಿಸಿ, ರಾಷ್ಟ್ರದ ಭದ್ರತಾ ಹೊಣೆಗಾರಿಕೆಯನ್ನು ಸಂಪೂರ್ಣವಾಗಿ ಆಫ್ಘನ್ ಪಡೆಗಳಿಗೆ ವಹಿಸಿತ್ತು. ಹಸ್ತಾಂತರ ಅವಧಿಯಲ್ಲಿ ಕೆಲವೇ ಕೆಲವು ಪಾಶ್ಚಾತ್ಯ ಪಡೆಗಳು ಆಫ್ಘಾನಿಸ್ತಾನದಲ್ಲಿ  ಉಳಿದುಕೊಂಡಿದ್ದವು. ಈ ಮಧ್ಯಂತರ ಅವಧಿಯನ್ನು ಬಳಸಿಕೊಂಡು ರಾಷ್ಟ್ರದ ಪರಿಸ್ಥಿತಿ ಮೇಲೆ ನಿಯಂತ್ರಣ ಸಾಧಿಸಲು ತಾಲಿಬಾನ್ ಮತ್ತು ಐಸಿಸ್​ನಂತಹ ಉಗ್ರಗಾಮಿ ಸಂಘಟನೆಗಳು  ಪ್ರಯತ್ನಿಸುತ್ತಿದ್ದು, ರಾಜಕೀಯ ಹಾಗೂ ಸಾಮಾಜಿಕ ಅಸ್ಥಿರತೆ ಹುಟ್ಟುಹಾಕಲು ನಿರಂತರ ಯತ್ನ ನಡೆಸುತ್ತಿವೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಕುಂದೂಜ್ ಉತ್ತರ ನಗರವನ್ನು ಅತ್ಯಂತ ಅಲ್ಪ ಅವಧಿಯಲ್ಲಿ ಇಸ್ಲಾಮೀ ಉಗ್ರಗಾಮಿಗಳು ತಮ್ಮ ಕೈವಶ ಪಡಿಸಿಕೊಂಡಿದ್ದರು. ಏನಿದ್ದರೂ ಸರ್ಕಾರಿ ಪಡೆಗಳು  ಉಗ್ರಗಾಮಿಗಳನ್ನು ನಗರದಿಂದ ಹೊರದಬ್ಬುವಲ್ಲಿ ಬಳಿಕ ಸಫಲವಾದರೂ, ಜಿಹಾದಿಗಳು ಮತ್ತು ಸರ್ಕಾರಿ ಪಡೆಗಳ ಮಧ್ಯೆ ಘರ್ಷಣೆ ಮುಂದುವರೆದಿದೆ.

Write A Comment