ಹೊಸದಿಲ್ಲಿ,ಅ.10: ಖ್ಯಾತ ವಿಚಾರವಾದಿ ಪ್ರೊ.ಎಂ.ಎಂ.ಕಲಬುರ್ಗಿಯವರ ಹತ್ಯೆ ಕುರಿತಂತೆ ಸಾಹಿತ್ಯ ಅಕಾಡಮಿಯ ವೌನವನ್ನು ಪ್ರತಿಭಟಿಸಿ ಮಲಯಾಳಂ ಕವಿ ಹಾಗೂ ವಿಮರ್ಶಕ ಕೆ.ಸಚ್ಚಿದಾನಂದನ್, ಅಕಾಡಮಿಯ ತನ್ನೆಲ್ಲ ಸ್ಥಾನಗಳಿಗೂ ರಾಜೀನಾಮೆ ಸಲ್ಲಿಸಿದ್ದಾರೆ. ಇದೇ ವಿಷಯದಲ್ಲಿ ಖ್ಯಾತ ಸಾಹಿತಿ ಶಶಿ ದೇಶಪಾಂಡೆ ನಿನ್ನೆ ಅಕಾಡಮಿಯ ಆಡಳಿತ ಮಂಡಳಿಗೆ ರಾಜೀನಾಮೆ ಸಲ್ಲಿಸಿ ಹೊರನಡೆದಿದ್ದರು.
ಇದಕ್ಕೂ ಮುನ್ನ ಸಾಹಿತಿಗಳ ಬದುಕುವ ಮತ್ತು ಅಭಿವ್ಯಕ್ತಿ ಹಕ್ಕುಗಳ ಮೇಲೆ ಹಲ್ಲೆಯನ್ನು ಪ್ರತಿಭಟಿಸಿ ಹಿಂದಿ ಸಾಹಿತಿ ಉದಯ ಪ್ರಕಾಶ, ಲೇಖಕಿ ನಯನತಾರಾ ಸೆಹಗಲ್ ಮತ್ತು ಲಲಿತ ಕಲಾ ಅಕಾಡಮಿಯ ಮಾಜಿ ಅಧ್ಯಕ್ಷ ಅಶೋಕ ವಾಜಪೇಯಿ ಅವರು ತಮ್ಮ ಸಾಹಿತ್ಯ ಅಕಾಡಮಿ ಪ್ರಶಸ್ತಿಗಳನ್ನು ಮರಳಿಸಿದ್ದರು.
ಅಕಾಡಮಿಯ ಪ್ರಾದೇಶಿಕ ಕಚೇರಿಯಲ್ಲಿ ವಾಡಿಕೆಯ ಸಂತಾಪ ಸೂಚಕ ಸಭೆಯನ್ನು ನಡೆಸಿರುವುದು ಅಭಿವ್ಯಕ್ತಿ ಸ್ವಾತಂತ್ರದ ಮೇಲಿನ ಹಲ್ಲೆ ಮತ್ತು ದೇಶದ ವಿವಿಧ ಭಾಗಗಳಲ್ಲಿ ನಡೆದಿರುವ ವಿಚಾರವಾದಿಗಳ ಸರಣಿ ಹತ್ಯೆಗಳಿಗೆ ಸೂಕ್ತ ಉತ್ತರವಲ್ಲ ಎಂದು ಅಕಾಡಮಿ ಅಧ್ಯಕ್ಷ ಡಾ.ವಿಶ್ವನಾಥ ಪ್ರಸಾದ ತಿವಾರಿಯವರಿಗೆ ಶಿಮ್ಲಾದಿಂದ ಬರೆದಿರುವ ಕಟುವಾದ ರಾಜೀನಾಮೆ ಪತ್ರದಲ್ಲಿ ಸಚ್ಚಿದಾನಂದನ್ ಕಿಡಿಗಾರಿದ್ದಾರೆ.
ಇದೊಂದು ‘ರಾಜಕೀಯ ವಿಷಯ’ ವೆಂದು ನೀವು ಭಾವಿಸಿರುವುದಕ್ಕೆ ನಾನು ವಿಷಾದಿಸುತ್ತೇನೆ. ನನ್ನಂತಹ ಸಾಹಿತಿಗಳಿಗೆ ಇದು ಬದುಕುವ, ಚಿಂತನೆಯ ಮತ್ತು ಬರೆಯುವ ನಮ್ಮ ಮೂಲಭೂತ ಸ್ವಾತಂತ್ರದ ವಿಷಯವಾಗಿದೆ. ಪ್ರಜಾಪ್ರಭುತ್ವದ ಮೂಲ ತಿರುಳಾದ ವಾದವನ್ನೆಂದೂ ದಮನಿಸಕೂಡದು ಎಂದು ಅವರು ಬರೆದಿದ್ದಾರೆ.
ಸಾಹಿತಿಗಳ ಬೆನ್ನಿಗೆ ನಿಲ್ಲಲು ಮತ್ತು ಭಾರತದ ಸಂವಿಧಾನವು ಖಚಿತ ಪಡಿಸಿರುವ ಅಭಿವ್ಯಕ್ತಿ ಸ್ವಾತಂತ್ರವನ್ನು ಎತ್ತಿ ಹಿಡಿಯುವಲ್ಲಿ ಅಕಾಡಮಿಯು ವಿಫಲಗೊಂಡಿದೆ ಎಂದು ಅವರು ಆರೋಪಿಸಿದ್ದಾರೆ. ಅಕಾಡಮಿಯ ಸಾಮಾನ್ಯ ಮಂಡಳಿ ಮತ್ತು ಕಾರ್ಯಕಾರಿ ಮಂಡಳಿಗಳ ಸದಸ್ಯತ್ವಗಳ ಜೊತೆಗೆ, ಇಂಗ್ಲಿಷ್ ಸಲಹಾ ಮಂಡಳಿಯ ಸಂಚಾಲಕತ್ವ, ವಿವಿಧ ಸಮಿತಿಗಳ ಸದಸ್ಯತ್ವಗಳಿಗೂ ಸಚ್ಚಿದಾನಂದನ್ ರಾಜೀನಾಮೆ ಸಲ್ಲಿಸಿದ್ದಾರೆ.