ಚಿತ್ರ: ರುದ್ರಮಾದೇವಿ (ತೆಲುಗು)
ತಾರಾಗಣ: ಅನುಷ್ಕಾ ಶೆಟ್ಟಿ, ಪ್ರಕಾಶ್ ರೈ, ಅಲ್ಲು ಅರ್ಜುನ್, ರಾಣಾ ದಗ್ಗುಬಾಟಿ, ಸುಮನ್, ನಿತ್ಯಾ ಮೆನನ್, ಮತ್ತಿತರರು.
ನಿರ್ದೇಶನ: ಗುಣಶೇಖರ್
ನಿರ್ಮಾಪಕರು: ಗುಣಶೇಖರ್, ರಾಗಿಣಿ ಗುಣ
ಹದಿನೆಂಟು ವರ್ಷಗಳ ಹಿಂದೆ ‘ರಾಮಾಯಣ’ ತೆಲುಗು ಸಿನಿಮಾ ಮಾಡಿ ಅದಕ್ಕೆ ಶ್ರೇಷ್ಠ ಮಕ್ಕಳ ಚಿತ್ರ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದ ಗುಣಶೇಖರ್, ಐತಿಹಾಸಿಕ ಪಾತ್ರ ರಾಣಿ ರುದ್ರಮಾದೇವಿಯನ್ನು ದೊಡ್ಡ ಬಜೆಟ್ ಬಳಸಿ ತೆರೆಮೇಲೆ ತಂದಿದ್ದಾರೆ. ಕಾಕತೀಯ ಪ್ರಾಂತ್ಯದ ವೀರಾಗ್ರಣಿ ಹೆಣ್ಣುಮಗಳ ಈ ಕಥಾನಕದಲ್ಲಿ ಮಹತ್ವದ ತಿರುವುಗಳು, ಕುತೂಹಲಗಳು, ಭಾವದಲೆಗಳು ಅಡಗಿವೆ. ಯುದ್ಧ ಸನ್ನಿವೇಶ ದೊಡ್ಡ ಸಿನಿಮೀಯ ಸಾಧ್ಯತೆಯನ್ನೂ ಒದಗಿಸಿದೆ.
ಗಂಡು ಸಂತಾನವಿಲ್ಲದ ರಾಜನಿಗೆ ತನ್ನ ರಾಜ್ಯದ ಮೇಲೆ ಶತ್ರುಗಳು ದಾಳಿ ನಡೆಸಿಯಾರು ಎಂಬ ಆತಂಕ. ರಾಣಿಗೆ ಜನಿಸಿದ ಮಗು ಹೆಣ್ಣಾಗಿದ್ದರೂ ಗಂಡು ಸಂತಾನ ಎಂದೇ ಪ್ರಕಟಿಸುವಂತೆ ರಾಜನು ಪಟ್ಟು ಹಿಡಿಯುತ್ತಾನೆ. ಭವಿಷ್ಯದಲ್ಲಿ ಎದುರಾಗುವ ಸಮಸ್ಯೆಗೆ ಮಂತ್ರಿ ಆರಂಭದಲ್ಲಿಯೇ ಹೊಸ ಉಪಾಯ ಹೂಡುತ್ತಾನೆ. ಹೆಣ್ಣುಮಗುವಿಗೆ ಶಸ್ತ್ರವಿದ್ಯೆ ಕಲಿಸಿ ಪರಾಕ್ರಮದ ಕಸುವು ತುಂಬುತ್ತಾನೆ. ಪ್ರಜಾಹಿತಕ್ಕಾಗಿ ಯುವಕನಂತೆ ಕಾಣಿಸಿಕೊಳ್ಳುವ ಲಲನೆಯ ಬದುಕಿನಲ್ಲಿ ಕಾಲಕ್ರಮೇಣ ಆಗುವ ಕುತೂಹಲಕಾರಿ ತಿರುವುಗಳೇ ಸಿನಿಮಾದ ತಿರುಳು.
ದೊಡ್ಡ ಬಜೆಟ್‌ನ, ಅದರಲ್ಲೂ ಐತಿಹಾಸಿಕ ಸಂಗತಿಯ ಸಿನಿಮಾ ತಯಾರಿಕೆಯಲ್ಲಿ ಎದುರಾಗುವ ಸವಾಲುಗಳು ಹಲವು. ಚಿತ್ರಕಥೆ ಹಾಗೂ ನಿರೂಪಣಾ ಕ್ರಮ, ತೆರೆಮೇಲೆ ಮೂಡಿಸಬೇಕಾದ ಚಿತ್ರಿಕೆಗಳ ಪ್ರಮಾಣ, ಹಿನ್ನೆಲೆ ಸಂಗೀತ, ರೀರೆಕಾರ್ಡಿಂಗ್, ಗ್ರಾಫಿಕ್ ಸೂಕ್ಷ್ಮಗಳು ಇವೆಲ್ಲವೂ ಒಂದಕ್ಕೊಂದು ಹದವಾಗಿ ಬೆಸೆದುಕೊಂಡರಷ್ಟೆ ಸಿನಿಮಾದ ಶಿಲ್ಪ ಗಟ್ಟಿಗೊಳ್ಳುವುದು. ಈ ವಿಷಯದಲ್ಲಿ ‘ರುದ್ರಮಾದೇವಿ’ ಸಡಿಲಗೊಂಡಿದೆ ಎನ್ನಲು ಅನೇಕ ಕಾರಣಗಳು ಸಿಗುತ್ತವೆ.
ನಿರ್ದೇಶಕರು ಕೆಲವು ದೃಶ್ಯಗಳ ವಿಸ್ತೃತ ಭಾಗವನ್ನು ರೇಖಾಚಿತ್ರಗಳಿಂದ ತೋರಿಸಿದ್ದು, ಇದು ಬಜೆಟ್ ಖೋತಾ ಆದದ್ದಕ್ಕೆ ಸಾಕ್ಷ್ಯದಂತೆ ಕಾಣುತ್ತದೆ. ಒಟ್ಟಾರೆ ಹಿನ್ನೆಲೆ ಸಂಗೀತ (ಇಳಯರಾಜ) ದೃಶ್ಯತೀವ್ರತೆಯನ್ನು ಮೇಲಕ್ಕೆತ್ತುವಂತಿಲ್ಲ. ಹಾಡುಗಳಿಗೂ ಗುನುಗುವ ಅಥವಾ ನೋಡಿಸಿಕೊಳ್ಳುವ ಗುಣವಿಲ್ಲ. ರಾಜಸಿಂಹ ಬರೆದಿರುವ ಸಂಭಾಷಣೆಯ ತೂಕಕ್ಕೆ ಪ್ರಕಾಶ್ ರೈ ನಿರ್ವಹಿಸಿರುವ ಮಂತ್ರಿಯ ಪಾತ್ರ ಉದಾಹರಣೆ. ಮನರಂಜನೆಗೆ ಅಲ್ಲು ಅರ್ಜುನ್ ಅಭಿನಯಿಸಿರುವ ಗೋನ ಗನ್ನಾ ರೆಡ್ಡಿ ಪಾತ್ರ ಉದಾಹರಣೆ.
ಗತಿಯ ಅಸ್ಥಿರತೆ, ಪೇಲವ ಎನ್ನಿಸುವ ಯುದ್ಧ ದೃಶ್ಯಗಳು, ಸಭಾ ದೃಶ್ಯಗಳಲ್ಲಿ ದುರ್ಬಲವಾಗಿ ವ್ಯಕ್ತಗೊಳ್ಳುವ ಪ್ರತಿಕ್ರಿಯಾತ್ಮಕ ಶಾಟ್‌ಗಳು ಸಿನಿಮಾದ ಪ್ರಮುಖ ಲೋಪಗಳು. ಅಜಯನ್ ವಿನ್ಸೆಂಟ್ ಕ್ಯಾಮೆರಾ ಚಲನೆಯ ದಿಕ್ಕುಗಳಲ್ಲೂ ಏಕತಾನತೆ ಇದೆ.
ಸೌಂದರ್ಯವತಿಯಾಗಿಯೇ ಹೆಚ್ಚು ಇಷ್ಟವಾಗುವ ಅನುಷ್ಕಾ ಶೆಟ್ಟಿ, ಪಾತ್ರದ ಗಂಡುತನದ ಆಯಾಮಕ್ಕೂ ನ್ಯಾಯ ಸಲ್ಲಿಸಿದ್ದಾರೆ. ಆಗಾಗ ಬಂದು ‘ಡೈಲಾಗ್’ ಹೊಡೆದು ಹೋಗುವ ಅಲ್ಲು ಅರ್ಜುನ್ ಸಿನಿಮಾದ ಏಕೈಕ ಮನರಂಜನಾತ್ಮಕ ‘ರಿಲೀಫ್’. ಅವರ ನೃತ್ಯಕ್ಕೆ ಹಾಗೂ ರಾಣಾ ದಗ್ಗುಬಾಟಿ ಭುಜಬಲ ಬಳಕೆಗೆ ಸಾಕ್ಷಿಯಾಗುವ ದೃಶ್ಯಗಳು ಇಲ್ಲದಿರುವುದು ಅಚ್ಚರಿ.
ಅಭಿನಯದಲ್ಲಿ ಪ್ರಕಾಶ್ ರೈ ಎಲ್ಲರನ್ನೂ ಹಿಂದಿಕ್ಕುತ್ತಾರೆ. ನಿತ್ಯಾ ಮೆನನ್, ಕ್ಯಾಥರಿನ್ ತ್ರೆಸಾ ಇಬ್ಬರೂ ನಿರ್ವಹಿಸಿರುವ ಪಾತ್ರಗಳಿಗೆ ಹೇಳಿಕೊಳ್ಳುವಂಥ ತೂಕವಿಲ್ಲ. ಚಿತ್ರಿತ ದೃಶ್ಯಗಳಿಗೆ ಸೂತ್ರ ಕಟ್ಟುವಾಗ ಗುಣಶೇಖರ್ ಗೊಂದಲಗೊಂಡಿರುವುದಂತೂ ಸ್ಪಷ್ಟ.