ಶ್ರೀನಗರ,ಅ.8: ಗೋಮಾಂಸ ಔತಣಕೂಟ ಆಯೋಜಿಸಿದ್ದಕ್ಕೆ ಪಕ್ಷೇತರ ಶಾಸಕ ಶೇಖ್ ಅಬ್ದುಲ್ ರಶೀದ್ ಅವರಿಗೆ ಬಿಜೆಪಿ ಶಾಸಕರು ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ಥಳಿಸಿದ ಘಟನೆ ನಡೆದಿದೆ. ಬಿಜೆಪಿ ಶಾಸಕರ ನಡವಳಿಕೆ ಖಂಡಿಸಿ ಪ್ರತಿಪಕ್ಷಗಳು ಸಭಾತ್ಯಾಗ ನಡೆಸಿವೆ.
ಇಂದು ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಶಾಸಕರು ಗೋಮಾಂಸ ನಿಷೇಧ ಮಸೂದೆ ಜಾರಿಗೆ ಒತ್ತಾಯಿಸಿ, ಪಕ್ಷೇತರ ಶಾಸಕ ರಶೀದ್ ಅವರು ಶಾಸಕರ ಭವನದಲ್ಲಿ ಏರ್ಪಡಿಸಿದ್ದ ಗೋಮಾಂಸ ಔತಣಕೂಟವನ್ನು ಖಂಡಿಸಿದ್ದಾರೆ. ಈ ಸಂದರ್ಭದಲ್ಲಿ ಪರಸ್ಪರ ಮಾತಿನ ಚಕಮಕಿ ನಡೆದು, ಕೋಪೋದ್ರಿಕ್ತರಾದ ಬಿಜೆಪಿ ಶಾಸಕರು ರಶೀದ್ ಅವರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ.
ಮೊದಲಿಗೆ ಬಿಜೆಪಿ ಶಾಸಕ ರವೀಂದರ್ ಸಿಂಗ್ ಅವರು ರಶೀದ್ ಅವರನ್ನು ಥಳಿಸಲು ಪ್ರಾರಂಭಿಸಿದ್ದಾರೆ. ನಂತರ ಇತರ ಶಾಸಕರು ಅವರನ್ನು ಕೂಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಎನ್ಸಿ ಹಾಗೂ ಕಾಂಗ್ರೆಸ್ ಶಾಸಕರು ರಶೀದ್ ಅವರ ರಕ್ಷಣೆಗೆ ಧಾವಿಸಿದ್ದಾರೆ. ಆನಂತರ ಭದ್ರತಾ ಪಡೆ ರಶೀದ್ ಅವರನ್ನು ರಕ್ಷಿಸಿ ಹೊರಗೆ ಕರೆದುಕೊಂಡು ಹೋಗಿದೆ.
ನಾವಿಲ್ಲಿ ಬರುವುದು ಚರ್ಚಿಸುವುದಕ್ಕೆ, ಒಬ್ಬರನ್ನೊಬ್ಬರು ಹೊಡೆಯುವುದಕ್ಕಲ್ಲ. ನಮ್ಮ ಧರ್ಮದ ಪ್ರಕಾರ ಮದ್ಯ ಸೇವಿಸುವುದು ಅಪರಾಧ, ಹಾಗೆಂದು ನಾವು ಇಲ್ಲಿ ಕುಡಿಯುವವರನ್ನು ಹಿಡಿದು ಹೊಡೆಯಬಹುದೆ? ನಮ್ಮ ಧಾರ್ಮಿಕ ನಂಬಿಕೆಗಳನ್ನು ಇನ್ನೊಬ್ಬರ ಮೇಲೆ ಹೇರುವ ಪ್ರಯತ್ನ ಮಾಡಬಾರದು ಎಂದು ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಬಿಜೆಪಿ ಶಾಸಕರ ವರ್ತನೆಯನ್ನು ಖಂಡಿಸಿದ್ದಾರೆ.
ಈ ಘಟನೆಯನ್ನು ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಓರ್ವ ಗೌರವಾನ್ವಿತ ಶಾಸಕನ ಮೇಲೆ ಹಲ್ಲೆ ನಡೆಸಿರುವುದು ಸರಿಯಲ್ಲ. ಅವರನ್ನು ಕೊಲ್ಲಬೇಕೆಂದು ಬಿಜೆಪಿ ಶಾಸಕರು ಹೊರಟಂತಿದ್ದರು. ಇದನ್ನು ವಿಧಾನಸಭೆ ಕಡತಗಳಲ್ಲಿ ದಾಖಲಿಸಬೇಕು ಎಂದು ತಿಳಿಸಿದ್ದಾರೆ.
ಬಿಜೆಪಿ ಶಾಸಕರ ವರ್ತನೆಯನ್ನು ಮುಖ್ಯಮಂತ್ರಿ ಮುಫ್ತಿ ಮಹಮ್ಮದ್ ಸಯೀದ್ ಅವರು ಖಂಡಿಸಿದ್ದಾರೆ. ವಿಧಾನಸಭೆಗೆ ತನ್ನದೇ ಆದ ಪರಂಪರೆಯಿದೆ. ಭಾವನೆಗಳನ್ನು ನಿಯಂತ್ರಣಗೊಳಿಸಿಕೊಳ್ಳಬೇಕು. ಬಿಜೆಪಿ ಶಾಸಕರ ದುರ್ವರ್ತನೆಗೆ ಕ್ಷಮೆಯಾಚಿಸಬೇಕೆಂದು ಉಪಮುಖ್ಯಮಂತ್ರಿ ನಿರ್ಮಲ್ ಸಿಂಗ್ ಅವರಿಗೆ ತಿಳಿಸುವುದಾಗಿ ಹೇಳಿದರು.
ನಾವು ನಮ್ಮ ಶಾಸಕರ ವರ್ತನೆಯನ್ನು ಸಮರ್ಥಿಸುವುದಿಲ್ಲ. ಅದೇ ರೀತಿ ನಿನ್ನೆ ರಾತ್ರಿ ಶಾಸಕರ ಭವನದಲ್ಲಿ ನಡೆದ ಘಟನೆಯನ್ನೂ ಒಪ್ಪುವುದಿಲ್ಲ ಎಂದು ಉಪಮುಖ್ಯಮಂತ್ರಿ ನಿರ್ಮಲ್ ಸಿಂಗ್ ತಿಳಿಸಿದ್ದಾರೆ.
ಸರ್ಕಾರಕ್ಕೆ ಸಂದೇಶ ಕಳುಹಿಸುವುದು ನನ್ನ ಗುರಿಯಾಗಿತ್ತು. ನೀವು ಗೋಹತ್ಯೆ ನಿಷೇಧ ಜಾರಿ ಮಾಡಿ ಅಥವಾ ಬಿಡಿ. ಅದರ ಬಗ್ಗೆ ಚರ್ಚಿಸಿ ಇಲ್ಲವೇ ಚರ್ಚಿಸದಿರಿ. ನಾವು ನಿಷೇಧದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಇದು ನಮಗೆ ಸಲ್ಲುವುದಿಲ್ಲ ಎಂದು ರಶೀದ್ ತಿಳಿಸಿದ್ದಾರೆ.
