ಟೋಕಿಯೊ: ಪುರುಷರಿಗೂ ಗರ್ಭ ನಿರೋಧಕ ಮಾತ್ರೆಗಳು ಲಭ್ಯವಾಗುವ ದಿನಗಳು ದೂರವಿಲ್ಲ! ಜಪಾನ್ನ ವಿಜ್ಞಾನಿಗಳು ಈ ಔಷಧವನ್ನು ಸಂಶೋಧಿಸಿರುವುದಾಗಿ ಅಂತಾರಾಷ್ಟ್ರೀಯ ವಿಜ್ಞಾನ ನಿಯತಕಾಲಿಕೆಯೊಂದು ವರದಿ ಮಾಡಿದೆ.
ಒಸಾಕಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ಇಲಿಗಳ ಮೇಲೆ ಈ ಔಷಧ ಪ್ರಯೋಗಿಸಿ ಯಶಸ್ವಿಯಾಗಿದ್ದಾರೆ. ಇಮ್ಯುನೊಸಪ್ರೆಸ್ಸೆಂಟ್ ಎಂಬ ಔಷಧವನ್ನು ಇಲಿಗಳಿಗೆ ಇಂಜೆಕ್ಷನ್ ಮೂಲಕ ನೀಡಲಾಗಿತ್ತು. ವೀರ್ಯದಲ್ಲಿ ಅಧಿಕ ಪ್ರಮಾಣದಲ್ಲಿರುವ ಪ್ರೊಟೀನ್ ಅಂಶವನ್ನು ಈ ಔಷಧ ನಿಯಂತ್ರಿಸುತ್ತದೆ. ವೀರ್ಯದಲ್ಲಿನ ಪ್ರೊಟೀನ್ ಅಂಶವನ್ನು ಕಡಿಮೆ ಮಾಡಿದರೆ ಅದು ದುರ್ಬಲಗೊಂಡು ಗರ್ಭ ಧರಿಸಲು ಸಾಧ್ಯವಾಗುವುದಿಲ್ಲ. ಔಷಧ ನೀಡಲಾಗಿದ್ದ ಇಲಿಗಳು ಎರಡು ವಾರಗಳಲ್ಲಿ ಗರ್ಭ ಧರಿಸಿದ್ದರೆ, ಔಷಧ ನೀಡದ ಇಲಿಗಳು ಒಂದೇ ವಾರದಲ್ಲಿ ಗರ್ಭ ಧರಿಸಿದ್ದವು. ಮಹಿಳೆಯರ ಗರ್ಭನಿರೋಧಕ ಮಾತ್ರೆಗಳಿಗಿಂತ ಹೊಸ ಔಷಧ ಕಡಿಮೆ ಅಡ್ಡ ಪರಿಣಾಮ ಬೀರಲಿದೆ ಎಂದೂ ವಿಜ್ಞಾನಿಗಳು ತಿಳಿಸಿದ್ದಾರೆ.
