ಬ್ರಿಸ್ಬೆನ್: ಕಾರು ಅಪಘಾತ, ಘಟನಾ ಸ್ಥಳ ರಕ್ತಮಯ, ಕಾರಿನಲ್ಲಿದ್ದ ತಾಯಿ ಹಾಗೂ ಇಬ್ಬರು ಪುಟ್ಟಕಂದಮ್ಮಗಳ ಸ್ಥಿತಿ ಗಂಭಿರ, ಅದರಲ್ಲೂ ಒಂದು ವರ್ಷದ ಎಳೆಯ ಹಸುಗೂಸಿನ ರುಂಡಮುಂಡದಿಂದ ಬೇರ್ಪಟ್ಟಿದೆ. ರಕ್ಷಣಾ ಕಾರ್ಯಾಚರಣೆಗೆ ಬಂದ ಪೊಲೀಸರಿಂದ ಹಿಡಿದು ಎಲ್ಲರದ್ದೂ ಒಂದೇ ಅಭಿಪ್ರಾಯ ಮಗು ಉಳಿಯೋದಿಲ್ಲ.
ಆದರೆ ಈ ಪುಟ್ಟ ಪೋರನ ಗಟ್ಟಿ ಹೃದಯಕ್ಕೊಂದು ಸಲಾಂ ಹೇಳಲೇಬೇಕು. ಮುಂಡದಿಂದ ರುಂಡ ಬೇರ್ಪಟ್ಟರೂ ಜೀವವನ್ನು ಗಟ್ಟಿಯಾಗಿ ಹಿಡಿದಿಟ್ಟ ಒಂದು ವರ್ಷದ ಪೋರ, ಸತತ ಆರು ಗಂಟೆಗಳ ಶಸ್ತ್ರಚಿಕಿತ್ಸೆ ಬಳಿಕ ಸಾವನ್ನು ಗೆದ್ದು ನಗು ಬೀರಿದ್ದಾನೆ. ಆಸ್ಟ್ರೆಲೀಯಾದ ಬ್ರಿಸ್ಬೆನ್ನಲ್ಲಿ ನಡೆದ ಈ ಘಟನೆ ವೈದ್ಯಲೋಕದಲ್ಲೊಂದು ಅಚ್ಚರಿ ಹಾಗೂ ಅಚ್ಚಳಿಯದ ಸಾಧನೆಗೆ ಸಾಕ್ಷಿಯೂ ಆಗಿದೆ.
ಕಳೆದ ಸೆಪ್ಟೆಂಬರ್ನಲ್ಲಿ ಜಾಕ್ಸನ್ ಟೇಲರ್ ಎಂಬ ಒಂದು ವರ್ಷದ ಪೋರ ತನ್ನ ತಾಯಿ ಹಾಗೂ ಒಂಬತ್ತು ವರ್ಷದ ತನ್ನ ಸಹೋದರಿ ಶ್ಯಾನೆ ಜೊತೆ ಕಾರಿನಲ್ಲಿ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ತಾಯಿ ಹಾಗೂ ಶ್ಯಾನೆಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಅಂತೆಯೇ ಜಾಕ್ಸನ್ನನ್ನೂ ಕೂಡ ಆಸ್ಪತ್ರೆಗೆ ಸೇರಿಸಲಾಗಿತ್ತು.
ಆದರೆ ಮಗು ಉಳಿಯೋದು ಸಾಧ್ಯವೇ ಇಲ್ಲ ಅನ್ನೋದೇ ಎಲ್ಲರ ಅಭಿಪ್ರಾಯ ಆಗಿತ್ತು. ಕಾರಣ ಜಾಕ್ಸನ್ ರುಂಡ ಆತನ ದೇಹದಿಂದ ಬೇರ್ಪಟ್ಟಿತ್ತು. ಆದರೆ ಮಗುವನ್ನು ಉಳಿಸಲೇಬೇಕು ಎಂದು ಪಣತೊಟ್ಟ ವೈದ್ಯ ಡಾ. ಆಸ್ಕಿನ್, ಸತತ ಆರು ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಿ ಬೇರ್ಪಟ್ಟ ಜಾಕ್ಸನ್ ರುಂಡವನ್ನು ಆತನ ದೇಹದೊಂದಿಗೆ ಸೇರಿಸಿ ವೈದ್ಯಲೋಕದಲ್ಲಿ ಹೊಸ ಸಾಧನೆ ಮಾಡಿದ್ದಾರೆ.
ಈ ಕುರಿತು ಮಾಹಿತಿ ನೀಡುವ ಡಾ. ಆಸ್ಕಿನ್, ಒಂದು ವರ್ಷದ ಪೋರ ಜಾಕ್ಸನ್ನ್ನು ನಿಜವಾಗಲೂ ಗಟ್ಟಿಹೃದಯ ಅಂತಾರೆ. ಇಷ್ಟೊಂದು ಗಂಭಿರ ಸ್ಥೀತಿಯಲ್ಲಿ ಬೇರೆ ಯಾರೇ ಆಗಿದ್ದರೂ ಬದುಕುವ ಆಸೆಯನ್ನೇ ತ್ಯಜಿಸುತ್ತಿದ್ದರು. ಆದರೆ ಜಾಕ್ಸನ್ ನಿಜವಾಗಲೂ ಚಿಕಿತ್ಸೆಗೆ ಸೂಕ್ತವಾಗಿ ಸ್ಪಂದಿಸಿ ಸಂಪೂರ್ಣ ಗುಣಮುಖನಾಗಿದ್ದಾನೆ ಅಂತಾರೆ ಆಸ್ಕಿನ್.
ದೇಹದಿಂದ ತನ್ನ ರುಂಡ ಬೇರ್ಪಟ್ಟರೂ ಬದುಕುಳಿದ ಜಾಕ್ಸನ್, ಇದೀಗ ತನ್ನ ಅಮ್ಮನ ತೋಳಿನಲ್ಲಿ ಆಟವಾಡುತ್ತಾ ಏನೂ ಆಗಿಯೇ ಇಲ್ಲ ಎಂಬಂತೆ ನಗು ಬೀರುತ್ತಿದ್ದಾನೆ.
