ಕನ್ನಡ ವಾರ್ತೆಗಳು

ಪಡೀಲ್‍ ರಾಷ್ಟ್ರೀಯ ಹೆದ್ದಾರಿಯ ಹೊಂಡ… ನಿತ್ಯವೂ ಪ್ರಯಾಣಿಕರ ಲೀಟರ್ ಇಂಧನ ದಂಡ

Pinterest LinkedIn Tumblr

ullal_trafic_jam

ಮಂಗಳೂರು, ಅ.6: ನಗರದ ಹೊರವಲಯ ಪಡೀಲ್ ಪರಿಸರದಲ್ಲಿ ದಿನನಿತ್ಯ ಬೆಳಗ್ಗೆ ಸಂಜೆ ವಿಪರೀತವಾಗಿ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ವಾಹನ ಸಂಚಾರಕ್ಕೆ ತೀವ್ರ ಸಂಕಷ್ಟ ಎದುರಾಗಿದೆ.

ಹಲವು ಸಮಯಗಳಿಂದ ಈ ಭಾಗದಲ್ಲಿ ಪದೇ ಪದೇ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದರೂ, ಸಂಬಂಧಪಟ್ಟ ಇಲಾಖೆಗಳು ಮಾತ್ರ ಮೌನಕ್ಕೆ ಶರಣಾಗಿವೆ. ಬೆಳಗ್ಗೆ ಹಾಗೂ ಸಂಜೆ ಹೊತ್ತಿನಲ್ಲಿ ಅಧಿಕವಾಗಿ ಕಾಣಿಸಿಕೊಳ್ಳುವ ಈ ಟ್ರಾಫಿಕ್ ಜಾಮ್‍ನಿಂದಾಗಿ ತಾಸುಗಟ್ಟಲೆ ವಾಹನಗಳು ಹೆದ್ದಾರಿಯಲ್ಲೇ ಕಾಯಬೇಕಾದ ಅನಿವಾರ್ಯತೆಗೊಳಗಾಗಿ ದಿನನಿತ್ಯ ಸಾವಿರಾರು ಮಂದಿ ಸಂಕಷ್ಟ ಎದುರಿಸುತ್ತಿದ್ದಾರೆ.

ಈ ಭಾಗದಲ್ಲಿ ಒಂದೆಡೆ ರೈಲ್ವೇ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದ್ದರೆ, ಇನ್ನೊಂದೆಡೆ ಹೆದ್ದಾರಿ ಮಧ್ಯೆಯೇ ಕಾಣಿಸಿಕೊಂಡಿರುವ ಬೃಹತ್ ಗಾತ್ರದ ಹೊಂಡಗಳಿಂದಾಗಿ ಸುಗಮ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಭಾರೀ ಸರಕುಗಳನ್ನು ಹೊತ್ತು ಬರುವ ಲಾರಿಗಳು ಈ ಭಾಗದಲ್ಲಿ ಸಂಚರಿಸುವ ವೇಳೆ ಹೊಂಡಗಳಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿರುವುದು ಈ ಟ್ರಾಫಿಕ್ ಜಾಮ್‍ಗೆ ಮೂಲ ಕಾರಣ ಎಂದು ವಾಹನ ಪ್ರಯಾಣಿಕರು ಆರೋಪಿಸಿದ್ದಾರೆ. ಈ ಹೊಂಡಗಳಿಗೆ ಕನಿಷ್ಟ ತೇಪೆ ಹಾಕುವ ಕಾರ್ಯಕ್ಕೂ ಮುಂದಾಗದಿರುವುದು ನಾಗರಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಕೇವಲ ಟ್ರಾಫಿಕ್ ಜಾಮ್ ಅಲ್ಲದೆ, ಸಣ್ಣಪುಟ್ಟ ಅಪಘಾತಗಳೂ ಇಲ್ಲಿ ಆಗಾಗ ನಡೆಯುತ್ತಿವೆ. ಈ ಹೊಂಡಗಳನ್ನು ಮುಚ್ಚುವ ಕಾರ್ಯ ಇತ್ತೀಚೆಗಷ್ಟೇ ನಡೆಸಲಾಗಿತ್ತಾದರೂ ಬಳಿಕ ಕಾಣಿಸಿಕೊಂಡ ಮಳೆಗೆ ಒಂದೆರಡು ದಿನಗಳ ಲ್ಲಿಯೇ ಡಾಮರು ಕಿತ್ತುಹೋಗಿ ಅಪಾಯಕರ ಹೊಂಡಗಳು ನಿರ್ಮಾಣಗೊಂಡಿವೆ. ಸಂಬಂಧಪಟ್ಟ ಇಲಾಖೆ ಈ ಬಗ್ಗೆ ತಕ್ಷಣವೇ ಗಮನಹರಿಸಿ ಪದೇ ಪದೇ ಉಂಟಾಗುತ್ತಿರುವ ಟ್ರಾಫಿಕ್ ಜಾಮ್ ಸಂಕಷ್ಟದಿಂದ ಪಾರು ಮಾಡುವಂತೆ ವಾಹನ ಪ್ರಯಾಣಿಕರು ಸಂಬಂಧಪಟ್ಟ ಇಲಾಖೆಯನ್ನು ಒತ್ತಾಯಿಸಿದ್ದಾರೆ.

Write A Comment