ಶ್ರೀನಗರ ,ಅ.5-ಜಮ್ಮುಕಾಶ್ಮೀರದ ಹಂದ್ವಾರ ಸೆಕ್ಟರ್ನಲ್ಲಿ ಇಂದು ಮುಂಜಾನೆ ಉಗ್ರರೊಂದಿಗೆ ನಡೆದ ಎರಡು ಪ್ರತ್ಯೇಕ ಗುಂಡಿನ ಚಕಮಕಿಯಲ್ಲಿ ಗಡಿಭದ್ರತಾ ಪಡೆಯ(ಬಿಎಸ್ಎಫ್) ನಾಲ್ವರು ಯೋಧರು ಹುತಾತ್ಮರಾಗಿದ್ದು, ಮೂವರು ಲಷ್ಕರ್-ಎ-ತೊಯ್ಬಾ(ಎಲ್ಇಟಿ) ಉಗ್ರರೂ ಕೂಡ ಹತರಾಗಿದ್ದಾರೆ.
ತಮಗೆ ದೊರೆತ ಸುಳಿವಿನ ಹಿನ್ನೆಲೆಯಲ್ಲಿ ಹಂದ್ವಾರ ಸೆಕ್ಟರ್ನ ಹಂಪ್ರೂಡ ಅರಣ್ಯ ಪ್ರದೇಶದಲ್ಲಿ ಡಿಎಸ್ಎಫ್ ಪಡೆ ಯೋಧರು ಉಗ್ರರಿಗಾಗಿ ಶೋಧ ಕಾರ್ಯ ಆರಂಭಿಸಿದ್ದರು.
ಈ ವೇಳೆ ಸೈನಿಕರತ್ತ ಎಲ್ಇಟಿ ಉಗ್ರರು ಗುಂಡು ಹಾರಿಸಲಾರಂಭಿಸಿದರು. ಆಗ ಬಿಎಸ್ಎಫ್ ಯೋಧರು ಕೂಡ ಗುಂಡು ಹಾರಿಸಿದರು. ಉಗ್ರರು ಮತ್ತು ಸೈನಿಕರ ನಡುವೆ ನಡೆದ ಈ ಕಾಳಗದಲ್ಲಿ ನಾಲ್ವರು ಯೋಧರು ಬಲಿಯಾದರು.
ಇನ್ನೂ ಕೂಡ ಗುಂಡಿನ ಕಾಳಗ ಮುಂದುವರೆದಿದೆ ಎಂದು ಸೇನಾ ವಕ್ತಾರರೊಬ್ಬರು ತಿಳಿಸಿದ್ದಾರೆ.
ಈ ಕಾಳಗದಲ್ಲಿ ಇಬ್ಬರೂ ಉಗ್ರರು ಹತರಾದರೆ ಇದಕ್ಕೂ ಮುನ್ನ ಲೋಲಾಬ್ ಪ್ರದೇಶದಲ್ಲಿ ನಡೆದ ಉಗ್ರರು ಮತ್ತು ಸೈನಿಕರ ಗುಂಡಿನ ಕಾಳಗದಲ್ಲಿ ಒಬ್ಬ ಉಗ್ರ ಹತನಾಗಿದ್ದಾನೆ.
ನಿನ್ನೆ ಸಂಜೆ ಪುಲ್ವಾಮ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಬಳಿ ನಡೆದಿದ್ದ ಗುಂಡಿನ ಕಾಳಗದಲ್ಲಿ ಇಬ್ಬರು ಜೈಶ್ ಇ ಮೊಹಮ್ಮದ್(ಜೆಇಎಂ) ಉಗ್ರರು ಹತರಾಗಿದ್ದರು.
ಈ ಉಗ್ರರು ಪುಲ್ವಾಮ ಮತ್ತು ಕುಪ್ವಾರ ಜಿಲ್ಲೆಗಳಲ್ಲಿ ಯುವಕರನ್ನು ತಮ್ಮ ಸಂಘಟನೆಗೆ ಸೇರ್ಪಡೆ ಮಾಡಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದ್ದರು. ಈ ಸಂದರ್ಭ ಗಡಿಭದ್ರತಾ ಪಡೆಯ ಸೈನಿಕರು ಇವರನ್ನು ಬಂಧಿಸಲು ಬೆನ್ನತ್ತಿ ಹೋದರು. ಆಗ ಉಗ್ರರು ಯೋಧರತ್ತ ಗುಂಡು ಹಾರಿಸಿದರು.
ಯೋಧರು ಮತ್ತು ಉಗ್ರರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಮೂವರು ಉಗ್ರರು ಹತರಾಗಿದ್ದರು. ಈ ಎಲ್ಲ ಉಗ್ರರು ಪಾಕಿಸ್ತಾನ ಮೂಲದವರೆಂದು ದೃಢಪಟ್ಟಿದೆ. ಪಾಕಿಸ್ತಾನ ಮೂಲದ ಆದಿಲ್ ಪಠಾಣ್, ಅಲಿಯಾಸ್ ಸಲೀಂ ಮತ್ತು ರೆಹಮಾನ್ ಅಲಿಯಾಸ್ ಬುರ್ಮಿ ಎಂಬ ಉಗ್ರರಿಬ್ಬರು ಜಮ್ಮುಕಾಶ್ಮೀರದ ಗಡಿ ಜಿಲ್ಲೆಗಳ ಯುವಕರನ್ನು ಉಗ್ರ ಸಂಘಟನೆಗೆ ಸೇರ್ಪಡೆ ಮಾಡಿಕೊಳ್ಳಲು ಕದ್ದುಮುಚ್ಚಿ ಪ್ರಯತ್ನ ನಡೆಸುತ್ತಲೇ ಇದ್ದಾರೆ. ಕಳೆದ ಹಲವು ದಿನಗಳಿಂದಲೂ ಪಾಕಿಸ್ತಾನ ಮೂಲದ ಲಷ್ಕರ್-ಇ-ತೊಯ್ಬಾ ಮತ್ತು ಜೈಶ್ ಇ ಮೊಹಮ್ಮದ್ ಸಂಘಟನೆಗಳ ಉಗ್ರರು ಯುವಜನರನ್ನು ತಮ್ಮ ಸೆಳೆಯಲು ಪ್ರಯತ್ನಗಳನ್ನು ನಡೆಸಿದ್ದಾರೆ.
ಇದುವರೆಗೆ ಇದೇ ಸಂಘಟನೆಗಳ ಉಗ್ರರು ರಾಜಧಾನಿ ದೆಹಲಿ ಸೇರಿದಂತೆ ಹಲವೆಡೆ ವಿಧ್ವಂಸಕ ಕೃತ್ಯಗಳನ್ನು ನಡೆಸಿದ್ದಾರೆ.
2001ರ ಡಿಸೆಂಬರ್ 13ರಂದು ಸಂಸತ್ ಭವನದ ಮೇಲೆ ದಾಳಿ ನಡೆಸಿದ್ದು ಕೂಡ ಇದೇ ಉಗ್ರರು ಎಂದು ವಕ್ತಾರರು ತಿಳಿಸಿದ್ದಾರೆ.