ಕನ್ನಡ ವಾರ್ತೆಗಳು

ಕುಂದಾಪುರದಲ್ಲಿ ಅಪರಾಧ ತಡೆ ಜಾಗೃತಿ ರೆಡ್ ಸುರಕ್ಷಾ ಅಭಿಯಾನ

Pinterest LinkedIn Tumblr

ಕುಂದಾಪುರ: ಉಡುಪಿ ಜಿಲ್ಲಾ ಪೊಲೀಸ್ ಹಾಗೂ ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ಮಂಗಳೂರಿನ ರೆಡ್ ಎಫ್.ಎಮ್ ೯೩.೫ ಆಯೋಜಿಸಿರುವ ಕುಂದಾಪುರದ ಹೋಟೆಲ್ ಪಾರಿಜಾತದ ಪ್ರಸ್ತುತ ಪಡಿಸಿರುವ ರೆಡ್ ಸುರಕ್ಷಾ ಅಭಿಯಾನ ಸೀಸನ್-2 ಅಪರಾಧ ತಡೆ ಕುರಿತು ಜಾಗೃತಿ ಮೂಡಿಸುವಂತಹ ಉಡುಪಿ ಜಿಲ್ಲಾ ಮಟ್ಟದ ಅಂತರ್‌ಕಾಲೇಜು ಸ್ಕಿಟ್ ಕಾಂಪಿಟೇಶನ್ ಕುಂದಾಪುರದ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ನಡೆಯಿತು.

Red Suraksha_Abhiyan_Kundapur (2) Red Suraksha_Abhiyan_Kundapur (6) Red Suraksha_Abhiyan_Kundapur (1) Red Suraksha_Abhiyan_Kundapur (7) Red Suraksha_Abhiyan_Kundapur (8) Red Suraksha_Abhiyan_Kundapur (3) Red Suraksha_Abhiyan_Kundapur (5) Red Suraksha_Abhiyan_Kundapur (4)

ಕಾರ್ಯಕ್ರಮವನ್ನು ಉಡುಪಿ ಜಿಲ್ಲೆಯ ಹೆಚ್ಚುವರಿ ಜಿಲ್ಲಾ ಪೋಲಿಸ್ ಅಧೀಕ್ಷಕರಾದ ಸಂತೋಷ ಕುಮಾರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ವಿದ್ಯಾರ್ಥಿಗಳು ತಮ್ಮ ಹುಡುಗಾಟಿಕೆ ಬುದ್ದಿಯಿಂದ ಅಪರಾಧ ಕೃತ್ಯದಲ್ಲಿ ತೊಡಗುವುದರಿಂದ ಅವರ ಸಂಪೂರ್ಣ ಭವಿಷ್ಯ ಹಾಳಾಗುತ್ತದೆ. ಒಂದು ಅಪರಾಧ ಚಟುವಟಿಕೆಯಲ್ಲಿ ಆತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡರೇ ಆತನಿಗೆ ಉದ್ಯೋಗ, ಪಾಸ್‌ಪೋರ್ಟ್ ಯಾವುದೂ ಸಿಗುವುದಿಲ್ಲ. ವಾಹನ ಅಪಘಾತ ನಡೆದ ತಕ್ಷಣ ಗಾಯಾಳುವನ್ನು ರಕ್ಷಿಸಿ ಆತನನ್ನು ಆಸ್ಪತ್ರೆಗೆ ದಾಖಲಿಸುವ ಬಗ್ಗೆಯೂ ಸಾರ್ವಜನಿಕರು ಪೊಲೀಸರೊಂದಿಗೆ ಸಹಕಾರ ನೀಡಬೇಕು. ಅಪರಾಧ ಮುಕ್ತ ಸಮಾಜ ನಿರ್ಮಾಣದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಪಾತ್ರವೂ ಮಹತ್ತರವಾಗಿದೆ. ವಿದ್ಯಾರ್ಥಿಗಳು ಕೇವಲ ಇಲ್ಲಿ ಸ್ಕಿಟ್‌ನಲ್ಲಿ ಭಾಗವಹಿಸಿ ಸಂದೇಶ ನೀಡುವುದು ಮಾತ್ರವಲ್ಲದೇ ನಿತ್ಯ ಜೀವನದಲ್ಲಿಯೂ ಇದನ್ನು ಅಳವಡಿಸಿಕೊಂಡು ಅಪರಾಧ ತಡೆಯುವಲ್ಲಿ ಯಶಸ್ವಿಯಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಕೊಲ್ಲೂರು ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ ಅಡ್ಯಂತಾಯ ಮಾತನಾಡಿ ಅಪರಾಧ ತಡೆಯಲ್ಲಿ ಪ್ರತಿಯೊಬ್ಬ ನಾಗರೀಕನು ತನ್ನ ಜವಬ್ದಾರಿಯನ್ನು ಅರಿತು ಮುನ್ನಡೆಯುವುದರಿಂದ ಅಪರಾಧಗಳು ತನ್ನಿಂದ ತಾನೇ ಕಡಿಮೆಯಾಗುವ ಜೊತೆಗೆ ಸ್ವಸ್ಥ ಸಮಾಜ ನಿರ್ಮಾವೂ ಸಾಧ್ಯ ಎಂದರು.

ಕುಂದಾಪುರ ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಅವರು ಮಾತನಾಡಿ, ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು.

ಕಾನೂನು ಸುವ್ಯವಸ್ಥೆ ಹಾಗೂ ಪಾಲನೆಯ ಅಗತ್ಯತೆಯ ಅರಿವು, ಮಾಹಿತಿ ನೀಡುವ ಈ ಉಪಯುಕ್ತ ಮಾಹಿತಿ ಕಾರ್ಯಕ್ರಮದಲ್ಲಿ 25ಕ್ಕೂ ಅಧಿಕ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಕುಂದಾಪುರ ಡಿವೈ‌ಎಸ್ಪಿ ಮಂಜುನಾಥ ಶೆಟ್ಟಿ, ಕುಂದಾಪುರ ಪುರಸಭೆ ಉಪಾಧ್ಯಕ್ಷ ನಾಗರಾಜ ಕಾಮಧೇನು, ಪಾರಿಜಾತ ಹೊಟೇಲ್ ಆಡಳಿತ ನಿರ್ದೇಶಕ ಗಣೇಶ್ ಭಟ್, ರೆಡ್ ಎಫ್.ಎಂ. ೯೩.೫ ಇದರ ಮುಖ್ಯಸ್ಥ ಶೋಭಿತ್ ಶೆಟ್ಟಿ, ಕುಂದಾಪುರ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸುಬ್ರಮಣ್ಯ ಜೋಷಿ, ಕಾರ್ಯಕ್ರಮ ಸಂಯೋಜಕ ಪ್ರವೀಣ ಟಿ., ಕುಂದಾಪುರ ರೋಟರಿ ಕ್ಲಬ್ ಕಾರ್ಯದರ್ಶಿ ಸಂತೋಷ್ ಕೋಣಿ ಮೊದಲಾದವರು ಉಪಸ್ಥಿತರಿದ್ದರು.

ಆರ್.ಜೆ. ಪ್ರಸನ್ನ ಸ್ವಾಗತಿಸಿ, ಆರ್.ಜೆ. ಅನುರಾಗ್, ಆರ್.ಜೆ. ನಯನಾ ಕಾರ್ಯಕ್ರಮ ನಿರ್ವಹಿಸಿ, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿಯ ಸಿಬ್ಬಂದಿ ಶಿವಾನಂದ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸ್ಕಿಟ್ ಸ್ಪರ್ದೆ ನಡೆಯಿತು.

Write A Comment