ಬೆಂಗಳೂರು,ಅ.5: ನಗರದ ಏಳೆಂಟು ಕಡೆಗಳಲ್ಲಿ ನಿನ್ನೆ ತಡರಾತ್ರಿ ಸಾರ್ವಜನಿಕರಿಗೆ ಚಾಕು ತೋರಿಸಿ ಬೆದರಿಸಿ ಹಣ ದೋಚಿ ಮಲ್ಲೇಶ್ವರಂನ 15ನೇ ಕ್ರಾಸ್‍ನಲ್ಲಿ ಹೊಟೇಲ್‍ನಲ್ಲಿ ಕೆಲಸ ಮುಗಿಸಿ ಮನೆಗೆ ನಡೆದು ಹೋಗುತ್ತಿದ್ದ ಮಾಡುತ್ತಿದ್ದ ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಕೊಲೆಗೈದು ಪರಾರಿಯಾಗುತ್ತಿದ್ದ ನಾಲ್ವರು ದುಷ್ಕರ್ಮಿಗಳನ್ನು ಕೃತ್ಯ ನಡೆದ ಕೇವಲ 3 ಗಂಟೆಗಳಲ್ಲಿ ಮಲ್ಲೇಶ್ವರಂ ಪೊಲೀಸರು ಬಂಧಿಸಿದ್ದಾರೆ.
ಮಲ್ಲೇಶ್ವರಂನ 15ನೇ ಕ್ರಾಸ್‍ನ 1947 ಹೊಟೇಲ್‍ನಲ್ಲಿ ಕೆಲಸ ಮುಗಿಸಿಕೊಂಡು ರಾತ್ರಿ 11.30ರಲ್ಲಿ 10ನೇ ಕ್ರಾಸ್‍ನ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಪಶ್ಚಿಮಬಂಗಾಳ ಮೂಲದ ಆಶಿಶ್‍ಪಾಲ್(32)ಎಂಬ ಯುವಕನನ್ನು ಕೊಲೆಗೈದು ಪರಾರಿಯಾಗುತ್ತಿದ್ದ ದುಷ್ಕರ್ಮಿಗಳು ವಾಹನ ತಪಾಸಣೆ ನಡೆಸುತ್ತಿದ್ದ ಮಲ್ಲೇಶ್ವರಂ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಶ್ರೀರಾಂಪರದ ಶಿವು ಅಲಿಯಾಸ್ ಪೊರ್ಕಿ(21)ಮಣಿಕಂಠ ಅಲಿಯಾಸ್ ಸ್ಟೇಷನ್‍ಮಣಿ(20)ಲಿಖಿತ್(20)ಹಾಗೂ ರಾಜಗೋಪಾಲನಗರದ ಸಂತೋಷ್(20) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಟಿ.ಆರ್.ಸುರೇಶ್ ತಿಳಿಸಿದ್ದಾರೆ.
ಹಣ ಕುಡಲು ನಿರಾಕರಿಸಿದ್ದಕ್ಕೆ ಆಕ್ರೋಶಗೊಂಡು ಆಶಿಶ್‍ನನ್ನು ಚಾಕುವಿನಿಂದ ಇರಿದು ಪರಾರಿಯಾಗುತ್ತಿದ್ದ ಆರೋಪಿಗಳು ಇದಕ್ಕೂ ಮುನ್ನ ತಾವರಕೆರೆ ಬಳಿ ವ್ಯಕ್ತಿಯೊಬ್ಬರನ್ನು ಸುಲಿಗೆ ಮಾಡಿದ್ದು ಆ ಸಂಬಂಧ ಮಾಹಿತಿ ಪಡೆದ ಮಲ್ಲೇಶ್ವರಂ ಪೊಲೀಸರಿಗೆ ಬಿಳಿಬಣ್ಣದ ಆರೋಪಿಗಳ ಬಗ್ಗೆ ಮಾಹಿತಿ ರವಾನೆಯಾಗಿತ್ತು.
ರಾತ್ರಿ ಗಸ್ತಿನಲ್ಲಿದ್ದ ಪೇದೆ ಧನಂಜಯ ಅವರು ದೇವಯ್ಯ ಪಾರ್ಕ್‍ನ ಟೀ ಅಂಗಡಿ ಬಳಿ ನಂಬರ್ ಪ್ಲೇಟ್ ಇಲ್ಲದ ಬಿಳಿಬಣ್ಣದ ಹೊಂಡಾ ಅಕ್ಟಿವಾ ಸ್ಕೂಟರ್‍ನಲ್ಲಿಸಿಕೊಂಡು ಇಬ್ಬರು ಆರೋಪಿಗಳು ನಿಂತಿರುವುದು ಅವರ ಅಂಗಿಯ ಮೇಲೆ ರಕ್ತದ ಕಲೆ ಇರುವುದು ಕಂಡು ಬಂದಿದೆ.
ತಕ್ಷಣವೇ ಹೆಚ್ಚಿನ ಸಿಬ್ಬಂದಿಯನ್ನು ಕರೆಸಿಕೊಂಡು ಅವರಿಬ್ಬರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಆರೋಪಿಗಳು ಕೊಲೆ ಮಾಡಿರುವ ವಿಷಯವನ್ನು ತಿಲೀಸಿದ್ದು ಅವರು ನೀಡಿದ ಮಾಹಿತಿ ಆಧರಿಸಿ ಉಳಿದಿಬ್ಬರನ್ನು ಬಂಧಿಸಲಾಯಿತು ಎಂದು ಸುರೇಶ್ ತಿಳಿಸಿದರು.
ಆರೋಪಿಗಳಿಂದ 1,500 ನಗದು,ಚಾಕು,ಸ್ಕೂಟರ್‍ನ್ನು ವಶಪಡಿಸಲಾಗಿದೆ.ವಿಚಾರಣೆಯಲ್ಲಿ ಆರೋಪಿಗಳು ಕೇವಲ ನೂರು ಇನ್ನೂರು ರೂಗಳಿಗೆ ಚಾಕು ತೋರಿಸಿ ಬೆದರಿಸಿ ದೋಚಿರುವುದು ಪತ್ತೆಯಾಗಿದೆ ನಿನ್ನೆ ರಾತ್ರಿ ಏಳೆಂಟು ಕಡೆಗಳಲ್ಲಿ ಹಣ ದೋಚಿರುವುದನ್ನು ಬಾಯ್ಬಿಟ್ಟಿದ್ದಾರೆ.ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಮಲ್ಲೇಶ್ವರಂ ಪೊಲೀಸ್ ಇನ್ಸ್‍ಪೆಕ್ಟರ್ ವೆಂಕಟಾಚಲಯ್ಯ ತಿಳಿಸಿದ್ದಾರೆ.
