ಒಂದು ಬದುಕಿನ ಸಂಘರ್ಷ…ಒಂದು ಅಂತಿಮ ಸಮರ…-ಈ ಮೂರು ಪದಪುಂಜಗಳಲ್ಲಿ ‘ರಿಕ್ಕಿ’ ಚಿತ್ರದ ಕಥೆ ಅವಿತು ಕುಳಿತಿದೆ. ನಡೆದ ದುರಂತವಾದರೂ ಯಾವುದು? ಆ ದುರಂತಕ್ಕೆ ಪ್ರತಿಯಾಗಿ ಕೈಗೊಳ್ಳುವ ಹೋರಾಟವಾದರೂ ಎಂಥದ್ದು? ಹೋರಾಟಮಯ ಸಮರದಲ್ಲಿ ಸಿಗುವುದು ಗೆಲುವಾಗುತ್ತೋ ಅಥವಾ ಸೋಲು ಎರಗುತ್ತೋ? ಹೀಗೆ ಸವಾಲುಗಳು ಸಾಲುಗಟ್ಟುವಂತೆ ಮಾಡಿದ್ದಾರೆ ನಿರ್ದೇಶಕ ರಿಷಭ್ ಶೆಟ್ಟಿ. ‘ಉಳಿದವರು ಕಂಡಂತೆ’ ಚಿತ್ರದಲ್ಲಿ ನಟಿ ತಾರಾ ಪುತ್ರನಾಗಿ ಗಾಢ ಪಾತ್ರದ ಮೂಲಕ ಕನ್ನಡಿಗರ ಮನಸ್ಸಿನಲ್ಲಿ ಜಾಗ ಪಡೆದುಕೊಂಡ ರಿಷಭ್, ಈಗ ‘ರಿಕ್ಕಿ’ ಶೂಟಿಂಗ್ ಮುಗಿಸಿದ್ದಾರೆ. ಈಚೆಗೆ ಬಿಡುಗಡೆಗೊಂಡಿರುವ ಅದರ ಟ್ರೇಲರ್ನಲ್ಲಿ ಕಲಾವಿದರಿಂದ ಭರಪೂರ ‘ಲಾಲ್ ಸಲಾಮ್ ಹೊಡೆಸಿದ್ದಾರೆ. ತಾತ್ಪರ್ಯವಿಷ್ಟೇ, ‘ರಿಕ್ಕಿ’ಯದು ನಕ್ಸಲ್ವಾದದ ಸುತ್ತ ಗಿರಕಿ ಹೊಡೆಯುವ ಕಥೆ.
‘ರಿಕ್ಕಿ’ ಈಗ ಬೇರೊಂದು ಕಾರಣಕ್ಕಾಗಿಯೂ ಚರ್ಚೆಯಲ್ಲಿದೆ. ಅದು, ನಾಯಕಿ ಹರಿಪ್ರಿಯಾ ವಿಚಾರವಾಗಿ. ಹೀಗೆಂದಾಕ್ಷಣ, ಹರಿಪ್ರಿಯಾ ಹೊಸ ವಿವಾದಕ್ಕೇನಾದರೂ ಆಹಾರವಾಗಿಬಿಟ್ಟರಾ ಅಂದುಕೊಳ್ಳಬೇಡಿ. ‘ರಿಕ್ಕಿ’ಯಲ್ಲಿ ಈ ಮುದ್ದು ಮೊಗದ ಸ್ನಿಗ್ಧ ಸುಂದರಿ ಸಖತ್ತಾಗಿ ನಟಿಸಿದ್ದಾರಂತೆ! ಅವರಿಗೆ ಈ ಬಾರಿ ಪ್ರಶಸ್ತಿ ಬರುವುದು ಕಟ್ಟಿಟ್ಟ ಬುತ್ತಿಯಂತೆ!! ಹಾಗೆಂಬುದು ಚಿತ್ರತಂಡದ ಪ್ರತಿಯೊಬ್ಬರೂ ಅಭಿಮಾನದಿಂದ ಹೇಳಿಕೊಳ್ಳುವ ಮಾತು. ಟ್ರೇಲರ್ ಆ ಮಾತಿಗೆ ಸ್ಪಷ್ಟ ಸಬೂಬು. ನಕ್ಸಲೈಟ್ ಆಗಿ ಕೈಯಲ್ಲಿ ಕೋವಿ ಹಿಡಿದು ಸಹಚರರ ಜತೆ ‘ಲಾಲ್ ಸಲಾಮ್ ಎಂದು ಕೂಗುತ್ತ ಕಾರ್ಕಳದ ಕಾಡಿನಲ್ಲಿ ಓಡುವ ಹರಿಪ್ರಿಯಾ ಗತ್ತು ಗೈರತ್ತುಗಳು ಆಕರ್ಷಕವಾಗಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಹರಿಪ್ರಿಯಾ ಅಭಿನಯದ ಜತೆಗೆ ಶ್ರಮವಹಿಸಿ ಡಬ್ಬಿಂಗ್ ಮಾಡಿರುವ
ರೀತಿಯನ್ನು ನೋಡುತ್ತ ಚಿತ್ರದ ಸಂಕಲನಕಾರ ವಿಶ್ವ ಹಲವು ಬಾರಿ ಕಣ್ಣೀರಾಗಿದ್ದೂ ಇದೆಯಂತೆ! ನಾಯಕಿಗೆ ಬೇಕಾದ ಎಲ್ಲ ಕ್ವಾಲಿಟಿಗಳಿದ್ದರೂ ಹರಿಪ್ರಿಯಾ ಪ್ರತಿಭೆಗೆ ತಕ್ಕ ಅವಕಾಶಗಳಿಲ್ಲಿದೆ ಬಸವಳಿದಿದ್ದರು. ‘ಉಗ್ರಂ’ ಬಳಿಕ ಶುರುವಾದ ಶುಕ್ರದೆಸೆ ಈಗ ‘ರಿಕ್ಕಿ’ವರೆಗೆ ಬಂದಿದೆ. ಎಲ್ಲರೂ ಹೇಳುತ್ತಿರುವಂತೆ, ಹರಿಪ್ರಿಯಾಗೆ ಪ್ರಶಸ್ತಿ ಬಂದಿದ್ದೇ ಆದರೆ ಅವರ ಅಭಿಮಾನಿಗಳಿಗೆ ಅದಕ್ಕಿಂತ ಬೇರೆ ಖುಷಿ ಮತ್ತೇನಿದೆ?!