ತಡವಾಗಿ ಬಂದ ‘ಮಿ. ಐರಾವತ’ದಲ್ಲಿ ಹೊಸದೇನಿದೆ ಅಂತ ಹುಡುಕಿದರೆ, ಕಣ್ಣಿಗೆ ಬಹಳಷ್ಟು ಸಂಗತಿಗಳು ರಾಚುತ್ತವೆ. ದರ್ಶನ್ ಹಿಂದಿನ ಎಲ್ಲ ಚಿತ್ರಗಳಿಗಿಂತಲೂ ಇಲ್ಲಿ ಅತಿ ಎನಿಸುವಷ್ಟು ನಾಯಕನ ವೈಭವೀಕರಣವಿದೆೆ. ಭ್ರಷ್ಟ ಅಧಿಕಾರಿಗಳನ್ನು ಶಿಷ್ಟರನ್ನಾಗಿಸುವಾತನೇ ನಿಯಮ ಮುರಿಯುವ ದೃಶ್ಯಗಳು ಹೇರಳ. ಪೊಲೀಸ್ ಇಲಾಖೆ ಮತ್ತು ಇತಿಹಾಸದ ಬಗ್ಗೆ ನಿರ್ದೇಶಕರಿಗೆ ತಿಳಿವಳಿಕೆ ಕಮ್ಮಿ ಇರುವುದು ಗೋಚರ! ಐಪಿಎಸ್ ಅಧಿಕಾರಿ ಐರಾವತ (ದರ್ಶನ್), ಐದು ತಿಂಗಳಲ್ಲಿ ಇಡೀ ವ್ಯವಸ್ಥೆಯನ್ನು ಹಿಡಿತಕ್ಕೆ ತಂದುಕೊಳ್ಳುವ ಪ್ರಯತ್ನದಲ್ಲಿದ್ದಾಗಲೇ ನಕಲಿ ಪೊಲೀಸ್ ಎಂಬ ಅಸಲಿ ವಿಷಯ ಬಯಲಾಗುತ್ತದೆ. ನಂತರದ್ದು ಪಕ್ಕಾ ಮಾಸ್ ಶೈಲಿ. ಸರ್ಕಾರವೇ ಮುತುವರ್ಜಿ ವಹಿಸಿ ನಾಯಕನಿಗೆ ಐಪಿಎಸ್ ಪರೀಕ್ಷೆ ಬರೆಯಲು ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸುತ್ತದೆ! ಪರಿಣಾಮ, 38ನೇ ವಯಸ್ಸಿನಲ್ಲಿ ಹೀರೋ ಪರೀಕ್ಷೆ ಬರೆಯುತ್ತಾನೆ, ತೇರ್ಗಡೆ ಹೊಂದುತ್ತಾನೆ. ಮುಂದೆ? ಕುತೂಹಲವಿದ್ದರೆ, ಚಿತ್ರಮಂದಿರಕ್ಕೆ ಹೋಗಬಹುದು. ಫಟಾಫಟ್ ಡೈಲಾಗ್ ಹೇಳುವುದರಲ್ಲಿ ದರ್ಶನ್ ನಿಷ್ಣಾತರು. ‘ಎದುರಾಳಿ’ಯನ್ನು ಚಚ್ಚುವಾಗಲೂ ಅವರ ಏಕಾಗ್ರತೆ ಮುಂದುವರಿಕೆ. ಖಡಕ್ ಖಳನಾಗಿ ಪ್ರಕಾಶ್ ರೈ ‘ಸೂಪರ್ ಮಗಾ!’ ಎಂದಿನಂತೆ, ಇಲ್ಲೂ ನಾಯಕಿ (ಊರ್ವಶಿ) ನೆಪಮಾತ್ರಕ್ಕೆ! ಸಾಧು ಕೋಕಿಲ, ಚಿಕ್ಕಣ್ಣ, ಬುಲೆಟ್ ಪ್ರಕಾಶ್ ಇದ್ದರೂ ಕಾಮಿಡಿಗೆ ಬರ. ಸಿಕ್ಕ ಪಾತ್ರಕ್ಕೆ ಅನಂತ್ನಾಗ್ ಒಡ್ಡಿಕೊಂಡಿದ್ದಾರೆ. ಒಟ್ಟಾರೆ, ‘ಐರಾವತ’ ಆಕ್ಷನ್ಪ್ರಿಯರಿಗೆ ಹಬ್ಬದೂಟ. ಪದೇಪದೆ ‘ಪರ’ಭಾಷಾ ಚಿತ್ರಗಳನ್ನು ನೆನಪಿಸುವ ಈ ಚಿತ್ರಕ್ಕೆ ‘ವಿಜಯವಾಣಿ’ ಓದುಗ ವಿಮರ್ಶಕರು 10ಕ್ಕೆ ಸರಾಸರಿ 7 ಅಂಕ ದಯಪಾಲಿಸಿದ್ದಾರೆ. ಸ್ಟಾರ್ ಲೆಕ್ಕದಲ್ಲಿ **
————**———-
ಸ್ಟೈಲಿಷ್ ದರ್ಶನ್!
ನಕಲಿ ಪೊಲೀಸ್ ಅಧಿಕಾರಿಯಾಗಿ ಶತ್ರುಗಳನ್ನು ಹಿಮ್ಮೆಟ್ಟಿಸುವ ದರ್ಶನ್ ಅಭಿನಯ ಸಖತ್ ಸ್ಟೈಲಿಷ್ಲುಕ್, ಪಂಚ್ ಡೈಲಾಗ್ ಹಾಗೂ ಸಿಕ್ಸ್ ಪ್ಯಾಕ್ ದೇಹ… ಎಲ್ಲವೂ ಚೆನ್ನಾಗಿವೆ. ಕ್ಲೈಮ್ಯಾಕ್ಸ್ನಲ್ಲಿ ದರ್ಶನ್ ಪುತ್ರ ವಿನೀಶ್ನ ಎಂಟ್ರಿ ಅಭಿಮಾನಿಗಳಿಗೆ ಖುಷಿ ಕೊಡುತ್ತದೆ. ನಾಯಕಿ ಆಟಕ್ಕುಂಟು ಲೆಕ್ಕಕ್ಕಿಲ್ಲ.
| ಧನಂಜಯ್ ಮಂಗಳೂರು
**
ಮತ್ತಷ್ಟು ಶ್ರಮ ವಹಿಸಬೇಕಿತ್ತು…
ಮೊದಲಾರ್ಧದಲ್ಲಿ ಹೀರೋಯಿಸಂ ಬೋರ್ ಹೊಡೆಸಿದರೂ ದ್ವಿತಿಯಾರ್ಧ ದಲ್ಲಿ ಕಥೆ ತೆರೆದು ಕೊಳ್ಳುತ್ತದೆ. ಜಬರ್ದಸ್ತ್ ಡೈಲಾಗ್ಗಳದೇ ಅಬ್ಬರ. ಸಾಮಾನ್ಯ ರೈತನ ಮಗ ಹೇಗೆ ಪೊಲೀಸ್ ಅಧಿಕಾರಿ ಆಗುತ್ತಾನೆ ಎಂಬುದನ್ನು ತೋರಿಸುವಲ್ಲಿ ನಿರ್ದೇಶಕರು ಇನ್ನಷ್ಟು ಶ್ರಮ ವಹಿಸಬೇಕಿತ್ತು.
| ಪದ್ಮ ನವೀನ್ ಹೊಸಪೇಟೆ
**
ಐರಾವತಕ್ಕೆ ಪ್ರಕಾಶ್ ರೈ ಮಾವುತ!
ಸಿನಿಮಾ ಬಗ್ಗೆ ಇಟ್ಟಿದ್ದ ನಿರೀಕ್ಷೆ ಬುಡಮೇಲಾಗಿದೆ. ಕಥೆೆಯೇ ಇಲ್ಲದ ಸಿನಿಮಾದಲ್ಲಿ ಡೈಲಾಗ್ ಅಬ್ಬರ, ಫೈಟಿಂಗ್ ಚಿಂದಿ ಚಿತ್ರಾನ್ನ. ರೈತರ ಸಮಸ್ಯೆಗಳಿಗೆ ಕೈಗನ್ನಡಿ ಆಗಬಹುದಾಗಿದ್ದ ಚಿತ್ರವೊಂದು ಕಮರ್ಷಿಯಲ್ ಚೌಕಟ್ಟಿನ ಖಾಕಿ ಅಬ್ಬರದಲ್ಲಿ ಮಂಕಾಗಿದೆ. ಒಂದು ಹಾಡು ಬಿಟ್ಟರೆ ಉಳಿದವು ಲೆಕ್ಕಕ್ಕಿಲ್ಲ. ಕ್ಯಾಮರಾ ಅಲ್ಲಲ್ಲಿ ಕಣ್ಣು ತೆರೆಸುತ್ತದೆ. ಆದರೆ ಪೂರ್ತಿ ಸಿನಿಮಾದಲ್ಲಿ ಪ್ರಕಾಶ್ ರೈ ‘ಕೆಮ್ಮಂಗಿಲ್ಲ’ ಅನ್ನೋ ತರಹ ಆರ್ಭಟಿಸಿದ್ದಾರೆ. ಸಹಜ ಮ್ಯಾನರಿಸಂ ಆವಾಹಿಸಿಕೊಂಡು ಡೈಲಾಗ್ ಡೆಲಿವರಿ ಮಾಡುವ ಅವರ ಅಭಿನಯಕ್ಕೆ ಭರ್ತಿ ಶಿಳ್ಳೆ ಬಿದ್ದಿವೆ. ಒಂದರ್ಥದಲ್ಲಿ ಐರಾವತನಿಗೆ ಇವರೇ ಮಾವುತ! ದಿಕ್ಕೆಟ್ಟು ಓಡುವ ಐರಾವತನನ್ನು ಹಿಡಿದು ಸರಿದಾರಿಗೆ ತಂದು ನೋಡುಗರನ್ನು ಕಾಪಾಡೋದು ಅವರೇ. ಇನ್ನುಳಿದಂತೆ ಇತರೆ ಪಾತ್ರಗಳಿಗೆ ಹೆಚ್ಚು ಕೆಲಸವಿಲ್ಲ. ವಿಪರೀತ ಹೀರೋಯಿಸಂ ಕೂಡ ಚಿತ್ರದ ಮೈನಸ್ ಪಾಯಿಂಟ್.
| ವಿಠಲ ಶಿಂತ್ರೆ ಬೆಳಗಾವಿ
**
ಮಾಸ್ಗೆ ಮಾತ್ರ!
ಮಾಸ್ ಪ್ರೇಕ್ಷಕರನ್ನು ಗಮನದಲ್ಲಿಟ್ಟು ಕೊಂಡು ಬಂದಿರುವ ಚಿತ್ರದಲ್ಲಿ ಸಾಹಸ ದೃಶ್ಯಗಳಿಗೆ ಕೊರತೆ ಯಿಲ್ಲ. ತೆಲುಗು ಚಿತ್ರಗಳ ಛಾಯೆ ಎದ್ದು ಕಾಣುತ್ತದೆ. ಒಂದೆರಡು ಹಾಡುಗಳು ಎಲ್ಲೋ ಕೇಳಿದಂತಿವೆ. ಛಾಯಾಗ್ರಹಣ ಉತ್ತಮ, ಕ್ಲೈಮ್ಯಾಕ್ಸ್ ಚೆನ್ನಾಗಿದೆ.
| ನವೀನ್ ಶಿವಮೊಗ್ಗ
**
ಕೊಟ್ಟ ದುಡ್ಡಿಗೆ ಮೋಸವಿಲ್ಲ
ಚಿತ್ರದಲ್ಲಿ ಸಾಮಾಜಿಕ ಕಳಕಳಿ ಇದೆ. ಪೊಲೀಸ್ ಅಧಿಕಾರಿಗಳು ಹೇಗೆ ಕರ್ತವ್ಯ ನಿರ್ವಹಿಸಬೇಕು ಎಂಬುದು ಹೈಲೈಟ್. ಇದೊಂದು ಕೌಟುಂಬಿಕ ಚಿತ್ರವಾಗಿದ್ದು, ದರ್ಶನ್ ಮತ್ತು ನಿರ್ದೇಶಕ ಅರ್ಜುನ್ ಜೋಡಿ ವರ್ಕೌಟ್ ಆಗಿದೆ. ಹರಿಕೃಷ್ಣ ಸಂಗೀತ ತಲೆದೂಗಿಸುತ್ತದೆ. ಕೊಟ್ಟ ದುಡ್ಡಿಗೆ ಮೋಸವಿಲ್ಲ.
| ಕೃಷ್ಣಾ ಬೆಣ್ಣೂರ ಬಾಗಲಕೋಟೆ
**
ಖುಷಿಯಾಯ್ತು…
ಮಾಸ್ ಪ್ರೇಕ್ಷಕರಿಗೆ ಬೇಕಾದ ಎಲ್ಲ ಅಂಶಗಳನ್ನು ಕೊಂಚ ಅಧಿಕ ಎನ್ನುವಂತೆ ಕಟ್ಟಿಕೊಡಲಾಗಿದೆ. ದರ್ಶನ್ ಅವರನ್ನು ತೆರೆಯ ಮೇಲೆ ಮತ್ತೊಮ್ಮೆ ಪೊಲೀಸ್ ಅಧಿಕಾರಿಯಾಗಿ ನೋಡಲು ಖುಷಿಯಾಗುತ್ತದೆ.
| ಮಧುಸೂದನ್ ಮೈಸೂರು
**
ಜನಸ್ನೇಹಿ ಪೊಲೀಸ್
ಜನಸ್ನೇಹಿ ಪೊಲೀಸ್ ಪರಿಕಲ್ಪನೆ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಪೊಲೀಸ್ ಅಧಿಕಾರಿ ಮತ್ತು ಸಾಮಾನ್ಯ ಯುವಕನಾಗಿ ದರ್ಶನ್, ಅಭಿಮಾನಿಗಳಿಗೆ ಫುಲ್ ಥ್ರಿಲ್ ನೀಡುತ್ತಾರೆ. ರೈತ ಹಾಗೂ ಸಣ್ಣ ವ್ಯಾಪಾರಿಗಳ ಬವಣೆಯನ್ನು ನಿರ್ದೇಶಕರು ಚೆನ್ನಾಗಿ ನಿರೂಪಿಸಿದ್ದಾರೆ.
| ಶ್ರೀಕಾಂತ ಮಾಜೋಜಿ ಹುಬ್ಬಳ್ಳಿ
**
ಆಕ್ಟಿಂಗ್ ಸೂಪರ್
ದರ್ಶನ್ ಖಡಕ್ ಪೊಲೀಸ್ ಪಾತ್ರದಲ್ಲಿ ಅದ್ಭುತವಾಗಿ ನಟನೆ ಮಾಡಿದ್ದು, ಹಿಂದಿನ ಎಲ್ಲ ಚಿತ್ರಗಳಿಗಿಂತ ಸ್ಟೈಲಿಷ್ ಆಗಿ ಕಾಣಿಸುತ್ತಾರೆ. ಪ್ರಕಾಶ್ ರೈ ನಟನೆ
ಗಮನ ಸೆಳೆಯುವಂತಿದ್ದು, ಇವರೇ ಚಿತ್ರದ ಜೀವಾಳ!
| ಪ್ರತಾಪ್ ರಾಮನಗರ
**
ಅದ್ದೂರಿತನವಿದೆ…
ಪ್ರತಿ ದೃಶ್ಯದಲ್ಲೂ ಅದ್ದೂರಿತನವಿದೆ. ಹಲವು ದಿನಗಳ ನಂತರ ದರ್ಶನ್ ಚಿತ್ರವೊಂದು ತೆರೆಗೆ ಬಂದಿದ್ದು, ಅವರ ಅಭಿಮಾನಿಗಳಿಗೆ ಹಬ್ಬದೂಟ ಸಿಕ್ಕಂತಾಗಿದೆಯಷ್ಟೇ.
| ವಿವೇಕ ಗಡಾಳೆ ಕಲಬುರಗಿ
****
ಚಿತ್ರ: ಮಿಸ್ಟರ್ ಐರಾವತ | ನಿರ್ವಣ: ಎನ್. ಸಂದೇಶ್ |
ನಿರ್ದೇಶಕ: ಎ.ಪಿ. ಅರ್ಜುನ್ | ಪಾತ್ರವರ್ಗ: ದರ್ಶನ್, ಊರ್ವಶಿ ರೌಟೆಲ, ಪ್ರಕಾಶ್ ರೈ, ಅನಂತ್ ನಾಗ್, ಸಾಧು ಕೋಕಿಲ ಮತ್ತಿತರರು