ಫ್ಯಾಮಿಲಿ ಪ್ರೇಕ್ಷಕರಿಗೆ ಹಾಕಿರುವ ಗಾಳವನ್ನು ಸಲ್ಮಾನ್ ಖಾನ್ ಮತ್ತಷ್ಟು ಬಿಗಿಗೊಳಿಸಿದ್ದಾರೆ. ಪುಟಾಣಿ ಪ್ರತಿಭೆ ಹರ್ಷಾಲಿ ಮಲ್ಹೋತ್ರಾ ಜತೆಗೆ ‘ಬಜರಂಗಿ ಭಾಯಿಜಾನ್’ನಲ್ಲಿ ಅಪಾರ ಮನ್ನಣೆಗೆ ಪಾತ್ರವಾದ ಬೆನ್ನಲ್ಲಿ ಸಲ್ಲೂ ‘ಪ್ರೇಮ’ಕ್ಕೆ ಪ್ರತಿರೂಪದಂತೆ ಭಾಸವಾಗತೊಡಗಿದ್ದಾರೆ, ‘ಪ್ರೇಮ್ ರತನ್ ಧನ್ ಪಾಯೋ’ ಮೂಲಕ. ಮುಂದಿನ ತಿಂಗಳು ದೀವಳಿಗೆ ಬೆಳಕಿಗೆ ವಿನೂತನ ರಂಗು ತುಂಬುತ್ತ ಥಿಯೇಟರ್ಗಳಿಗೆ ಅಪ್ಪಳಿಸಲಿರುವ (ನ. 12) ಸೂರಜ್ ಬರ್ಜಾತ್ಯ ನಿರ್ದೇಶನದ ಈ ಚಿತ್ರವೀಗ ಟ್ರೇಲರ್ ಬಿಡುಗಡೆಗೊಳಿಸಿದೆ. ಜಾಲತಾಣಗಳಲ್ಲಿ ನಿರೀಕ್ಷೆಯಂತೆಯೇ ಸೂಪರ್ ಹಿಟ್ ಆಗಿದೆ. ಸದ್ಯ ಸಿಕ್ಕಿರುವ ಅಂಕಿಅಂಶಗಳ ಪ್ರಕಾರ, ‘ಪ್ರೇಮ್..’ ಟ್ರೇಲರ್ ಕೇವಲ 24 ಗಂಟೆ ಅವಧಿಯಲ್ಲಿ 50 ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರಿಂದ ಕ್ಲಿಕ್ಕಿಸಿಕೊಂಡಿದೆ!!
ಕೌಟುಂಬಿಕ ಪ್ರೇಮ, ಸಾಮರಸ್ಯ ಹಾಗೂ ಹಿರಿಮೆ- ಇವು ಸಲ್ಮಾನ್ ಅವರ ಹೊಸ ಚಿತ್ರದ ಆಯಸ್ಕಾಂತೀಯ ಶಕ್ತಿಗಳು. ಫ್ಯಾಮಿಲಿ ಸಿನಿಮಾಗಳಿಗೆ ಹೆಸರಾಗಿರುವ ಸೂರಜ್ ಪುನಃ ತಮ್ಮ ಬ್ರಾಂಡ್ ಎತ್ತಿಹಿಡಿದಿದ್ದಾರೆ. ‘ಪ್ರತಿ ಕುಟುಂಬಗಳೂ ಪ್ರೀತಿಯೊಂದಿಗೆ ಇರಬೇಕು’ ಎಂಬ ಸಂದೇಶ ಸಾರುತ್ತ ಶುರುವಾಗಿ, ಹೀರೊಯಿಸಂ ಅನ್ನು ಬಹಳ ಸಭ್ಯವಾಗಿ ಕಟ್ಟಿಕೊಡುತ್ತ, ‘ಗೆಳೆಯ… ನೀನೊಂದು ಅಚ್ಚರಿ, ನಿನ್ನ ಮಾತುಗಳಲ್ಲೂ ಅಚ್ಚರಿ’ ಅನ್ನುವ ಸಾಲುಗಳೊಂದಿಗೆ ಮುಗಿಯುತ್ತದೆ ಟ್ರೇಲರ್. ಜತೆಗೆ, ‘ಪ್ರೇಮ್ ಈಸ್ ಬ್ಯಾಕ್’ ಅನ್ನುವ ಸಾಲು!
ಹೌದು, ‘ಪ್ರೇಮ್ ರತನ್ ಧನ್ ಪಾಯೊ’ ಚಿತ್ರದಲ್ಲೂ ಸಲ್ಲೂ ನಾಮಧೇಯ ಪ್ರೇಮ್ ಇದು ಅವರಿಗೆ ಒಂಥರಾ ಲಕ್ಕಿ ನೇಮ್ (ಶಾರುಖ್ಗೆ ‘ರಾಹುಲ್’ ಇದ್ದಹಾಗೆ!). ಮೈನೆ ಪ್ಯಾರ್ ಕಿಯಾ, ಹಮ್ ಆಪ್ ಕೆ ಹೈ ಕೌನ್, ದೀವಾನಾ ಮಸ್ತಾನಾ, ಸಿರ್ಫ್ ತುಮ್ ಬೀವಿ ನಂ. 1, ಹಮ್ ಸಾಥ್ ಸಾಥ್ ಹೈ, ನೋ ಎಂಟ್ರಿ- ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಪ್ರೇಮ್ ಎಂಬ ಹೆಸರಿನಲ್ಲಿ ಸಲ್ಮಾನ್ ಮಿಂಚಿದ್ದಾರೆ. ಈಗ ಪ್ರೇಮ್ ರತನ್ ಅವತಾರ!