ವಡೋದರಾ: ನಗರದಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಗುಜರಾತ್ನ ಖ್ಯಾತ ಗಾಯಕ ಕಿರ್ತಿದನ್ ಗಾಢ್ವಿ ಅವರ ಮೇಲೆ ಬಕೆಟ್ನಿಂದ ಸುಮಾರು ಮೂರು ಲಕ್ಷ ರೂಪಾಯಿಗಳನ್ನು ಸುರಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಪಟೇಲ್ ವರ್ತನೆ ರಾಜಕೀಯ ವಲಯದಲ್ಲಿ ಕೋಲಾಹಲ ಮೂಡಿಸಿದೆ.
ಗಣೇಶ್ ಪೂಜಾ ಅಂಗವಾಗಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಪಟೇಲ್, ಖ್ಯಾತ ಗಾಯಕ ಗಾಡ್ವಿ ಮೇಲೆ ಬಕೆಟ್ನಲ್ಲಿದ್ದ ಮೂರು ಲಕ್ಷ ರೂಪಾಯಿಗಳನ್ನು ಸುರಿದಿದ್ದಾರೆ. ಇಂತಹ ಮತ್ತೊಂದು ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಬಿಜೆಪಿ ಸಂಸದ ರಾಜೇಶ್ ಚುಡಾಸ್ಮಾ ಕೂಡಾ ಇದೇ ವರ್ತನೆ ತೋರಿರುವುದು ಬಿಜೆಪಿ ಹೈಕಮಾಂಡ್ ಅಸಮಾಧಾನಕ್ಕೆ ಕಾರಣವಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಪಟೇಲ್, ಗುಜರಾತಿಗಳ ಘೇರ್ ಸಾಂಪ್ರದಾಯಕದಂತೆ ಗೋ ರಕ್ಷಣೆಗಾಗಿ ಹಣವನ್ನು ಸಂಗ್ರಹಿಸಲಾಗಿತ್ತು. ಸಂಗ್ರಹಿಸಲಾದ ಹಣವನ್ನು ನೀಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಗಾಯಕ ಕಿರ್ತಿದನ್ ಗಾಡ್ವಿ ಸಂಗೀತ ಕಾರ್ಯಕ್ರಮ ನೀಡುತ್ತಿರುವ ಸಂದರ್ಭದಲ್ಲಿ ಯುವಕರು ಪ್ರೇಕ್ಷಕರಿಂದ ಹಣವನ್ನು ಸಂಗ್ರಹಿಸಿ ಬಕೆಟ್ಗೆ ಹಾಕಿದ್ದಾರೆ. ನಂತರ ಬಕೆಟ್ನಲ್ಲಿದ್ದ ಹಣವನ್ನು ಗಾಯಕನ ಮೇಲೆ ಸುರಿಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇಂತಹ ಸಾಂಸ್ಕ್ರತಿಕ ಕಾರ್ಯಕ್ರಮಕ್ಕೆ ಗುಜರಾತಿ ಭಾಷೆಯಲ್ಲಿ ಘೇರ್ ಎನ್ನುತ್ತಾರೆ. ಕಾರ್ಯಕ್ರಮವನ್ನು ಆಯೋಜಿಸಿ ಪ್ರೇಕ್ಷಕರಿಂದ ಹಣವನ್ನು ಸಂಗ್ರಹಿಸಿ ಒಳ್ಳೆಯ ಕಾರ್ಯಕ್ಕಾಗಿ ಬಳಸಲಾಗುತ್ತದೆ. ಗೋ ಮಾತೆಯ ರಕ್ಷಣೆಗಾಗಿ ಹಣವನ್ನು ಸಂಗ್ರಹಿಸಲಾಗಿತ್ತು ಎಂದು ಆಯೋಜಕರು ತಿಳಿಸಿದ್ದಾರೆ.