ಲಕ್ನೋ, ಅ.2: ತನ್ನ ಕುಟುಂಬದೊಂದಿಗೆ ದೇವಾಲಯವನ್ನು ಪ್ರವೇಶಿಸಲು ಯತ್ನಿಸಿದ ದಲಿತನೊಬ್ಬನನ್ನು ಜೀವಂತವಾಗಿ ದಹಿಸಿಕೊಂದ ಬರ್ಬರ ಘಟನೆ ಉತ್ತರಪ್ರದೇಶದ ಹಾಮೀರ್‌ಪುರ ಜಿಲ್ಲೆಯಲ್ಲಿ ವರದಿಯಾಗಿದೆ. ಬಿಲ್ಗಾಂವ್ ಗ್ರಾಮದಲ್ಲಿ ಬುಧವಾರ ಪ್ರಕರಣ ನಡೆದಿದ್ದು, ಕೊಲೆಯಾದ ದಲಿತನನ್ನು 90 ವರ್ಷ ವಯಸ್ಸಿನ ವಯೋವೃದ್ಧ ಚಿಮ್ಮಾ ಎಂದು ಗುರುತಿಸಲಾಗಿದೆ.
ಚಿಮ್ಮಾ ತನ್ನ ಪತ್ನಿ, ಪುತ್ರ ಹಾಗೂ ಸಹೋದರನ ಜೊತೆ ಗ್ರಾಮದಲ್ಲಿನ ಮೈದಾನಿ ಬಾಬಾ ದೇವಾಲಯಕ್ಕೆ ಆಗಮಿಸಿದ್ದ. ಆಗ ಆತನನ್ನು ದೇವಾಲಯದ ಪ್ರವೇಶದ್ವಾರದಲ್ಲಿ ಸಂಜಯ್ ತಿವಾರಿ ಎಂಬಾತ ತಡೆದು ನಿಲ್ಲಿಸಿದನೆನ್ನಲಾಗಿದೆ. ಪಾನಮತ್ತನಾಗಿದ್ದ ತಿವಾರಿ, ದೇವಾಲಯ ಪ್ರವೇಶಿಸದಂತೆ ಚಿಮ್ಮಾ ಹಾಗೂ ಆತನ ಕುಟುಂಬಕ್ಕೆ ಎಚ್ಚರಿಕೆ ನೀಡಿದ್ದ. ಆದರೆ ಚಿಮ್ಮಾ ಕಿವಿಗೊಡದಿದ್ದಾಗ ತಿವಾರಿ ಆಕ್ರೋಶಗೊಂಡು, ಕೊಡಲಿಯಿಂದ ಆತನ ಮೇಲೆ ದಾಳಿ ಮಾಡಿದ. ಆನಂತರ ಆತ ಇತರ ಭಕ್ತಾದಿಗಳು ನೋಡುತ್ತಿದ್ದಂತೆಯೇ, ಚಿಮ್ಮಾನ ಮೇಲೆ ಸೀಮೆ ಎಣ್ಣೆ ಸುರಿದು ಆತನನ್ನು ಜೀವಂತವಾಗಿ ದಹಿಸಿದನೆಂದು ವರದಿಗಳು ತಿಳಿಸಿವೆ.
ಈ ದಲಿತ ಕುಟುಂಬವು ಸಹಾಯಕ್ಕಾಗಿ ಮೊರೆಯಿಟ್ಟಾಗಲೂ ಯಾರೂ ಕೂಡಾ ರಕ್ಷಣೆಗೆ ಬರಲಿಲ್ಲವೆಂದು ವರದಿಗಳು ತಿಳಿಸಿವೆ. ಆನಂತರ ಹಳ್ಳಿಯ ಕೆಲವು ಯುವಕರು ತಿವಾರಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು. ತಿವಾರಿಯ ಇನ್ನಿಬ್ಬರು ಸಹಚರರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಕೇವಲ ಎರಡು ದಿನಗಳಲ್ಲಿ ಕೋಮು ಹಾಗೂ ಜಾತಿ ದ್ವೇಷದ ಹಿನ್ನೆಲೆಯಲ್ಲಿ ನಡೆದ ಎರಡನೆ ಅಪರಾಧ ಕೃತ್ಯ ಇದಾಗಿದೆ. ಈ ವಾರದ ಆರಂಭದಲ್ಲಿ ದಾದ್ರಿ ಗ್ರಾಮದಲ್ಲಿ ಇಖ್ಲಾಕ್ ಎಂಬ ಮುಸ್ಲಿಂ ವ್ಯಕ್ತಿಯನ್ನು ಗೋಮಾಂಸ ಸೇವಿಸಿದ್ದನೆಂಬ ಕಾರಣಕ್ಕಾಗಿ ಗುಂಪೊಂದು ಥಳಿಸಿ ಕೊಂದಿತ್ತು.
ಉತ್ತರಪ್ರದೇಶದಲ್ಲಿ ಕಳೆದ ಕೆಲವು ತಿಂಗಳುಗಳಲ್ಲಿ ದಲಿತರ ಮೇಲೆ ಭೀಕರ ದೌರ್ಜನ್ಯಗಳು ನಡೆದಿರುವ ಪ್ರಕರಣಗಳು ವರದಿಯಾಗಿವೆ. ಈ ವರ್ಷದ ಆರಂಭದಲ್ಲಿ ಶಾಹಜಾನ್‌ಪುರ ಜಿಲ್ಲೆಯ ಹರೇವಾ ಗ್ರಾಮದಲ್ಲಿ ದಲಿತ ಯುವಕನೊಬ್ಬ ಮೇಲ್ಜಾತಿಯ ಯುವತಿಯೊಂದಿಗೆ ಓಡಿಹೋದ ಘಟನೆಯ ಬಳಿಕ ಅಲ್ಲಿ ಐವರು ದಲಿತ ಮಹಿಳೆಯರನ್ನು ವಿವಸ್ತ್ರಗೊಳಿಸಿ, ಅವರನ್ನು ಬೀದಿಗಳಲ್ಲಿ ಮೆರವಣಿಗೆ ಮಾಡಲಾಗಿತ್ತು. ಜುಲೈನಲ್ಲಿ ಭಾಗಪತ್ ಜಿಲ್ಲೆಯಲ್ಲಿ ದಲಿತನೊಬ್ಬ ಜಾಟ್ ಸಮುದಾಯದ ವಿವಾಹಿತ ಮಹಿಳೆಯ ಜೊತೆ ಪರಾರಿಯಾದ ಘಟನೆಯ ಬಳಿಕ, ಆತನ ಸಹೋದರಿಯ ಮೇಲೆ ಅತ್ಯಾಚಾರ ನಡೆಸುವಂತೆ ಖಾಪ್ (ಸಾಮುದಾಯಿಕ) ಪಂಚಾಯತ್ ಆಜ್ಞೆ ಹೊರಡಿಸಿತ್ತು.