ಅಂತರಾಷ್ಟ್ರೀಯ

ಉಗ್ರರ ಪೋಷಿಸುವ ನೀತಿಗೆ ಪಾಕ್ ಬಲಿಪಶು: ವಿಶ್ವಸಂಸ್ಥೆಯಲ್ಲಿ ಶರೀಫ್ ಹೇಳಿಕೆಗೆ ಭಾರತದ ತಿರುಗೇಟು

Pinterest LinkedIn Tumblr

3sushmaವಿಶ್ವಸಂಸ್ಥೆ, ಅ. 1: ಗಡಿಯಾಚೆಯ ಭಯೋತ್ಪಾದನೆಯನ್ನು ನಿಲ್ಲಿಸಿ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಪ್ರದೇಶಗಳನ್ನು ತೆರವುಗೊಳಿಸಿ ಎಂಬುದಾಗಿ ಭಾರತ ಕಟು ಮಾತುಗಳಲ್ಲಿ ಪಾಕಿಸ್ತಾನಕ್ಕೆ ಕರೆನೀಡಿದೆ.
ಬುಧವಾರ ರಾತ್ರಿ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಮಾಡಿದ ಭಾಷಣದ ವೇಳೆ ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿರುವ ಹಿನ್ನೆಲೆಯಲ್ಲಿ ಭಾರತ ಈ ರೀತಿಯಾಗಿ ತಿರುಗೇಟು ನೀಡಿದೆ.
ವಿಶ್ವಸಂಸ್ಥೆಯ 70ನೆ ಮಹಾಧಿವೇಶನದಲ್ಲಿ ಪಾಕ್ ಪ್ರಧಾನಿ ಮಾಡಿದ ಭಾಷಣಕ್ಕೆ ಉತ್ತರಿಸಲು ಅವಕಾಶ ಕೋರಿ, ವಿಶ್ವಸಂಸ್ಥೆಯಲ್ಲಿ ಭಾರತದ ಪ್ರಥಮ ಕಾರ್ಯದರ್ಶಿ ಅಭಿಶೇಕ್ ಸಿಂಗ್ ಉತ್ತರಿಸುವ ಹಕ್ಕನ್ನು ಚಲಾಯಿಸಿದರು ಹಾಗೂ ಗಡಿಯಾಚೆಯ ಭಯೋತ್ಪಾದನೆ ನೀತಿಯನ್ನು ಕೊನೆಗೊಳಿಸುವಂತೆ ಪಾಕಿಸ್ತಾನಕ್ಕೆ ಸೂಚಿಸಿದರು.
ಪಾಕಿಸ್ತಾನವು ಭಯೋತ್ಪಾದಕರನ್ನು ಉತ್ಪಾದಿಸುವ ಹಾಗೂ ಪೋಷಿಸುವ ತನ್ನದೇ ನೀತಿಗಳ ಬಲಿಪಶುವಾಗಿದೆ ಎಂದು ಅವರು ಬಣ್ಣಿಸಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಆಂತರಿಕ ಅತೃಪ್ತಿ ಇದೆ ಎಂಬ ಪಾಕಿಸ್ತಾನದ ಹೇಳಿಕೆಯಲ್ಲಿ ಯಾವುದೇ ವಿಶ್ವಾಸಾರ್ಹತೆ ಪ್ರಪಂಚಕ್ಕೆ ಕಾಣುತ್ತಿಲ್ಲ ಎಂದರು.
ಭಾರತ ಯುದ್ಧವಿರಾಮ ಉಲ್ಲಂಘನೆಗಳಲ್ಲಿ ತೊಡಗಿದೆ ಎಂಬ ಪಾಕಿಸ್ತಾನದ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಂಗ್, ಇಂಥ ಕೃತ್ಯಗಳಲ್ಲಿ ಪಾಕಿಸ್ತಾನ ತೊಡಗಿಸಿಕೊಂಡಿದೆ ಎಂದರು. ಭಯೋತ್ಪಾದಕರನ್ನು ಭಾರತದೊಳಕ್ಕೆ ಕಳುಹಿಸಲು ಅದು ಗಡಿಯಲ್ಲಿ ಅಶಾಂತಿಯ ಪರಿಸ್ಥಿತಿಯನ್ನು ನಿರ್ಮಿಸುತ್ತಿದೆ ಎಂದು ಆರೋಪಿಸಿದರು.
1972ರ ಶಿಮ್ಲಾ ಒಪ್ಪಂದದಿಂದ ಆರಂಭಿಸಿ 2004ರ ಭಯೋತ್ಪಾದನೆಯನ್ನು ಕೈಬಿಡುವ ಜಂಟಿ ಘೋಷಣೆ ಹಾಗೂ ಈ ವರ್ಷದ ಜುಲೈಯಲ್ಲಿ ರಶ್ಯದ ಉಫಾದಲ್ಲಿ ನವಾಝ್ ಶರೀಫ್ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವೆ ನಡೆದ ಮಾತುಕತೆಗಳವರೆಗೆ ಭಾರತ ಯಾವತ್ತೂ ಪಾಕಿಸ್ತಾನದತ್ತ ಸ್ನೇಹ ಹಸ್ತವನ್ನು ಚಾಚಿದೆ, ಆದರೆ ಪಾಕಿಸ್ತಾನ ಪ್ರತಿ ಬಾರಿಯೂ ತನ್ನ ಬದ್ಧತೆಯನ್ನು ಉಲ್ಲಂಘಿಸುತ್ತಲೇ ಬಂದಿದೆ ಎಂದು ಸಿಂಗ್ ಹೇಳಿದರು.
‘‘ಭಯೋತ್ಪಾದನೆ ಮತ್ತು ಹಿಂಸೆ ಮುಕ್ತ ವಾತಾವರಣದಲ್ಲಿ ಮಹತ್ವದ ವಿಷಯಗಳ ಬಗ್ಗೆ ಪಾಕಿಸ್ತಾನದೊಂದಿಗೆ ಸಮಾಲೋಚನೆಗಳನ್ನು ನಡೆಸಲು ಭಾರತ ಈಗಲೂ ಸಿದ್ಧವಿದೆ’ ಎಂದು ಸಿಂಗ್ ನೀಡಿದ ಹೇಳಿಕೆ ತಿಳಿಸಿದೆ.

ಕಾಶ್ಮೀರವನ್ನು ಸೇನಾಮುಕ್ತಗೊಳಿಸಲು ಶರೀಫ್ ಕರೆ
ವಿಶ್ವಸಂಸ್ಥೆ, ಅ. 1: ಕಾಶ್ಮೀರ ವಿವಾದ ಬಗೆಹರಿಯದಿರುವುದು ವಿಶ್ವಸಂಸ್ಥೆಯ ವೈಫಲ್ಯವನ್ನು ಬಿಂಬಿಸಿದೆ ಎಂದು ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಬುಧವಾರ ಹೇಳಿದರು ಹಾಗೂ ಕಾಶ್ಮೀರವನ್ನು ಸೇನಾಮುಕ್ತಗೊಳಿಸುವುದು ಹಾಗೂ ಸಿಯಾಚಿನ್‌ನಿಂದ ಬೇಷರತ್ತಾಗಿ ಸೈನಿಕರನ್ನು ಹಿಂದಕ್ಕೆ ಪಡೆದುಕೊಳ್ಳುವುದು ಸೇರಿದಂತೆ ನಾಲ್ಕು ಅಂಶಗಳ ‘‘ಶಾಂತಿ ಉಪಕ್ರಮ’’ವನ್ನು ಮುಂದಿಟ್ಟರು.
ಯಾವುದೇ ಸನ್ನಿವೇಶದಲ್ಲಿ ಬಲ ಪ್ರಯೋಗ ನಡೆಸದಂತೆ ಅಥವಾ ಬಲ ಪ್ರಯೋಗದ ಬೆದರಿಕೆ ಹಾಕದಂತೆ ಉಭಯ ದೇಶಗಳು ಸಂಯಮ ವಹಿಸಬೇಕು ಹಾಗೂ ಎರಡು ಪರಮಾಣು ಶಕ್ತ ದೇಶಗಳ ನಡುವೆ ಉತ್ತಮ ಬಾಂಧವ್ಯವನ್ನು ಖಾತರಿಪಡಿಸುವುದಕ್ಕಾಗಿ 2003ರ ಗಡಿ ಯುದ್ಧವಿರಾಮ ಒಪ್ಪಂದವನ್ನು ಅಧಿಕೃತಗೊಳಿಸಬೇಕು ಎಂದು ಪಾಕ್ ಪ್ರಧಾನಿ ಕರೆ ನೀಡಿದರು.
‘‘ಸಹಕಾರ ನಮ್ಮ ಬಾಂಧವ್ಯವನ್ನು ನಿರೂಪಿಸಬೇಕೇ ಹೊರತು, ಸಂಘರ್ಷವಲ್ಲ’’ ಎಂದು ಹೇಳಿದ ಅವರು, ಭಾರತ ಮತ್ತು ಪಾಕಿಸ್ತಾನಗಳ ನಡುವೆ ಇರುವ ಕಾಶ್ಮೀರ ಮತ್ತು ಶಾಂತಿ ಮತ್ತು ಭದ್ರತೆಯ ವಿಷಯಗಳನ್ನು ಪರಿಹರಿಸುವ ಪ್ರಾಥಮಿಕ ಹಾಗೂ ತುರ್ತು ಆವಶ್ಯಕತೆಯಿದೆ ಎಂದರು.
ಅದೇ ವೇಳೆ, ವಿವಾದದ ಅವಿಭಾಜ್ಯ ಅಂಗವಾಗಿರುವ ಕಾಶ್ಮೀರಿಗಳ ಜೊತೆ ಸಮಾಲೋಚನೆ ನಡೆಸುವುದು ಶಾಂತಿಯುತ ಪರಿಹಾರಕ್ಕೆ ಅಗತ್ಯವಾಗಿದೆ ಎಂದು ಅವರು ಒತ್ತಿ ಹೇಳಿದರು.

Write A Comment