ಹೊಸದಿಲ್ಲಿ,ಅ.1: ನೂತನ ಸಂಘಟನೆ ಅಖಿಲ ಭಾರತೀಯ ಪಟೇಲ್ ನವನಿರ್ಮಾಣ ಸೇನಾ(ಎಬಿಪಿಎನ್ಎಸ್)ದ ರಚನೆಯನ್ನು ಬುಧವಾರ ಇಲ್ಲಿ ಪ್ರಕಟಿಸಿದ ಪಾಟಿದಾರ ಅನಾಮತ್ ಆಂದೋಲನ ಸಮಿತಿಯ ನಾಯಕ ಹಾರ್ದಿಕ್ ಪಟೇಲ್ ಅವರು, ಜನರು ಬಯಸಿದರೆ ತಾನು ರಾಜಕೀಯ ರಂಗವನ್ನು ಪ್ರವೇಶಿಸುವುದಾಗಿ ಹೇಳಿದರು.
ಕಾಲ ಕೂಡಿ ಬಂದಾಗ ನಾವು ರಾಜಕೀಯ ಪ್ರವೇಶದ ಬಗ್ಗೆ ಚಿಂತಿಸಬಹುದಾಗಿದೆ. ಇದನ್ನು ನಾನೊಬ್ಬನೇ ನಿರ್ಧರಿಸುವಂತಿಲ್ಲ. ನಾವೆಲ್ಲರೂ ಸೇರಿಯೇ ನಿರ್ಧಾರವನ್ನು ಕೈಗೊಳ್ಳುತ್ತೇವೆ ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದರು.
ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಎಬಿಪಿಎನ್ಎಸ್ ಕುರ್ಮಿ,ಮರಾಠಾ,ಪಾಟಿದಾರ ಮತ್ತು ಗುಜ್ಜರ್ ಸಮುದಾಯಗಳನ್ನು ಒಗ್ಗೂಡಿಸುವ ಹಾಗೂ ರೈತರು,ಕಾರ್ಮಿಕರು,ಮಹಿಳೆಯರು ಮತ್ತು ಯುವಜನರಿಗಾಗಿ ಹೋರಾಡುವ ಉದ್ದೇಶವನ್ನು ಹೊಂದಿದೆ.
ಬಿಜೆಪಿ ನೇತೃತ್ವದ ಎನ್ಡಿಎ ಅಂಗಪಕ್ಷವಾಗಿರುವ ರಾಷ್ಟ್ರೀಯ ಲೋಕ ಸಮತಾ ಪಕ್ಷ(ಆರ್ಎಲ್ಎಸ್ಪಿ)ದೊಂದಿಗೆ ಗುರುತಿಸಿಕೊಂಡಿದ್ದ ಅಖಿಲೇಶ ಕಟಿಯಾರ್ ಅವರು ಎಬಿಪಿಎನ್ಎಸ್ನ ಪ್ರಧಾನ ಕಾರ್ಯದರ್ಶಿಯಾಗಲಿದ್ದಾರೆ ಎಂದು ಹಾರ್ದಿಕ್ ತಿಳಿಸಿದರು. ಕಟಿಯಾರ್ ದಿಲ್ಲಿಯಲ್ಲಿ ಹಾರ್ದಿಕ್ ಅವರ ಮೊದಲ ಸಭೆಯನ್ನು ಸಂಘಟಿಸಿದ ನಂತರ ಅವರನ್ನು ಆರ್ಎಲ್ಎಸ್ಪಿಯಿಂದ ಉಚ್ಚಾಟಿಸಲಾಗಿತ್ತು.
ಅಕ್ಟೋಬರ್ನಲ್ಲಿ ದಿಲ್ಲಿ,ರಾಜಸ್ಥಾನ ಮತ್ತು ನೆರೆಯ ರಾಜ್ಯಗಳ ಕುರ್ಮಿ,ಪಾಟಿದಾರ,ಮರಾಠಾ ಮತ್ತು ಗುಜ್ಜರ್ ಸಮುದಾಯಗಳ ರ್ಯಾಲಿಯೊಂದು ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ನಡೆಯಲಿದೆ ಎಂದು ಹಾರ್ದಿಕ್ ತಿಳಿಸಿದರು.