ವಾಶಿಂಗ್ಟನ್, ಸೆ. 30: ಪ್ರಪಂಚದ ಆಹಾರ, ಶುದ್ಧ ನೀರು ಮತ್ತು ಇಂಧನ ಅಗತ್ಯಕ್ಕೆ ನೂತನ ಪರಿಹಾರವೊಂದನ್ನು ಕಂಡುಹಿಡಿಯುವ ನಿಟ್ಟಿನಲ್ಲಿ ಕೆಲಸ ಮಾಡಿರುವುದಕ್ಕಾಗಿ ಭಾರತೀಯ ಅಮೆರಿಕನ್ ಪರಿಸರ ಎಂಜಿನಿಯರ್ ಕಾರ್ತಿಕ್ ಚಂದ್ರನ್ರನ್ನು 2015ರ ಮೆಕ್ಆರ್ಥರ್ ಫೆಲೊ ಎಂಬುದಾಗಿ ಹೆಸರಿಸಲಾಗಿದೆ ಹಾಗೂ ಅವರಿಗೆ 6,25,000 (ಸುಮಾರು 4.11 ಕೋಟಿ ಭಾರತೀಯ ರೂಪಾಯಿ) ಅಮೆರಿಕನ್ ಡಾಲರ್ ಮೊತ್ತದ ‘ಜೀನಿಯಸ್’ ಅನುದಾನ ನೀಡಲಾಗಿದೆ.
41 ವರ್ಷದ ಚಂದ್ರ ತ್ಯಾಜ್ಯ ನೀರನ್ನು ಸಂಸ್ಕರಿಸಿ ಶುದ್ಧ ನೀರು ಹಾಗೂ ರಸಗೊಬ್ಬರಗಳು, ರಾಸಾಯನಿಕಗಳು ಮತ್ತು ಇಂಧನ ಮೂಲಗಳು ಮುಂತಾದ ಉಪಯುಕ್ತ ಇತರ ಸಂಪನ್ಮೂಲಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಿದ್ದಾರೆ. ಈ ಸಂಸ್ಕರಣೆ ಪ್ರಕ್ರಿಯೆಯಲ್ಲಿ ಅವರು ಇಂದಿನ ಜಗತ್ತು ಎದುರಿಸುತ್ತಿರುವ ಪರಿಸರ, ಇಂಧನ ಮತ್ತು ಪೌಷ್ಟಿಕತೆ ಸವಾಲುಗಳನ್ನು ಗಣನೆಗೆ ತೆಗೆದುಕೊಂಡಿದ್ದಾರೆ.
ಐಐಟಿ ರೂರ್ಕಿಯ ಪದವೀಧರರಾಗಿರುವ ಚಂದ್ರನ್, ಮೆಕ್ಆರ್ಥರ್ ಫೆಲೊ ಆಗಿ ಆಯ್ಕೆಯಾದ 24 ಪ್ರತಿಭಾವಂತರ ಪೈಕಿ ಒಬ್ಬರು. ಈ 24 ಮಂದಿ ತಮಗೆ ನೀಡಲಾದ 4.11 ಕೋಟಿ ರೂ. ಅನುದಾನವನ್ನು ತಮಗೆ ಬೇಕಾದಂತೆ ಬಳಸಬಹುದಾಗಿದೆ. ‘‘ತ್ಯಾಜ್ಯ ನೀರನ್ನು ಸಾಂಪ್ರದಾಯಿಕವಾಗಿ ನಕಾರಾತ್ಮಕ ದೃಷ್ಟಿಯಿಂದ ಹಾಗೂ ಹೋಗಲಾಡಿಸಬೇಕಾದ ವಸ್ತು ಎಂಬುದಾಗಿ ನೋಡಲಾಗುತ್ತಿದೆ. ಆದರೆ, ನನಗೆ ಅದು ಬರಿಯ ತ್ಯಾಜ್ಯ ತೊರೆಯಲ್ಲ, ಸಂಪದ್ಭರಿತ ತೊರೆಗಳಾಗಿವೆ’’ ಎಂದು ಮೆಕ್ಆರ್ಥರ್ ಫೌಂಡೇಶನ್ನ ವೆಬ್ಸೈಟ್ನಲ್ಲಿ ಹಾಕಲಾದ ವೀಡಿಯೊವೊಂದರಲ್ಲಿ ಚಂದ್ರನ್ ಹೇಳಿದ್ದಾರೆ.