ರಾಷ್ಟ್ರೀಯ

ಡಿಜಿಟಲ್ ಇಂಡಿಯಾ-ಇಂಟರ್ನೆಟ್ ಡಾಟ್‌ಆರ್ಗ್‌ಗೆ ಸಂಬಂಧವಿಲ್ಲ: ಫೇಸ್‌ಬುಕ್ ಸ್ಪಷ್ಟನೆ

Pinterest LinkedIn Tumblr

1facebook-icon-logo-vectorಹೊಸದಿಲ್ಲಿ, ಸೆ.29: ಭಾರತದ ‘ಡಿಜಿಟಲ್ ಇಂಡಿಯಾ’ ಅಭಿಯಾನವನ್ನು ನಾವು ಬೆಂಬಲಿಸುತ್ತಿದ್ದು, ಇದಕ್ಕೂ ಮತ್ತು ಕಂಪೆನಿಯ ‘ಇಂಟರ್ನೆಟ್‌ಡಾಟ್‌ಆರ್ಗ್’ಗೂ ಯಾವುದೇ ಸಂಬಂಧವಿಲ್ಲ ಎಂದು ಫೇಸ್‌ಬುಕ್ ಮಂಗಳವಾರ ಸ್ಪಷ್ಟನೆ ನೀಡಿದೆ.
ಅಲ್ಲದೆ, ಈ ಸಂಬಂಧವಾಗಿ ಸೃಷ್ಟಿಯಾಗಿರುವ ಗೊಂದಲವನ್ನು ಶೀಘ್ರದಲ್ಲೇ ಪರಿಹರಿಸುವುದಾಗಿ ಭರವಸೆ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಜೊತೆ ಫೇಸ್‌ಬುಕ್ ಮುಖ್ಯಸ್ಥ ಮಾರ್ಕ್ ಝುಕರ್‌ಬರ್ಗ್ ಭೇಟಿಗೆ ಮುನ್ನ ಭಾರತದ ಡಿಜಿಟಲ್ ಇಂಡಿಯಾ ಅಭಿಯಾನವನ್ನು ಬೆಂಬಲಿಸುವ ತ್ರಿವರ್ಣ ಧ್ವಜವುಳ್ಳ ಪ್ರೊಫೈಲ್ ಚಿತ್ರವನ್ನು ಝಕರ್‌ಬರ್ಗ್ ಹಾಕಿಕೊಂಡಿದ್ದರು. ಅಲ್ಲದೆ, ಭಾರತದ ಈ ಅಭಿಯಾನವನ್ನು ಬೆಂಬಲಿಸಿ ಗ್ರಾಹಕರು ತಮ್ಮ ಪ್ರೊಫೈಲ್ ಚಿತ್ರವನ್ನು ಬದಲಾಯಿಸಿಕೊಳ್ಳುವ ಸೌಲಭ್ಯವನ್ನು ಫೇಸ್‌ಬುಕ್ ಒದಗಿಸಿತ್ತು.
ಹೀಗೆ ತಮ್ಮ ಪ್ರೊಫೈಲ್ ಚಿತ್ರವನ್ನು ಬದಲಾಯಿಸಿಕೊಳ್ಳುವವರು ಫೇಸ್‌ಬುಕ್‌ನ ‘ಇಂಟರ್ನೆಟ್‌ಡಾಟ್‌ಆರ್ಗ್’ ಯೋಜನೆಯನ್ನು ಬೆಂಬಲಿಸಿದಂತಾಗುತ್ತದೆ ಎಂದು ಅಂತರ್ಜಾಲ ಕಾರ್ಯಕರ್ತರು ಹೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ವಿವಾದ ಸೃಷ್ಟಿಯಾಗಿತ್ತು.
ಈ ದೋಷಕ್ಕೆ ತನ್ನ ಇಂಜಿನಿಯರ್‌ವೊಬ್ಬರು ಕಾರಣವೆಂದು ಹೇಳಿಕೊಂಡಿರುವ ಫೇಸ್‌ಬುಕ್, ಈ ಸೌಲಭ್ಯವು ‘ಇಂಟರ್ನೆಟ್‌ಡಾಟ್‌ಆರ್ಗ್’ನೊಂದಿಗೆ ಸಂಪರ್ಕ ಪಡೆದುಕೊಳ್ಳುವುದಿಲ್ಲ ಇಲ್ಲವೇ ನೋಂದಣಿಯಾಗುವುದಿಲ್ಲ ಎಂದು ಸ್ಪಷ್ಟೀಕರಣ ನೀಡಿದೆ.
ಡಿಜಿಟಲ್ ಇಂಡಿಯಾ ಅಭಿಯಾನವನ್ನು ಬೆಂಬಲಿಸಿ ನಿಮ್ಮ ಪ್ರೊಫೈಲ್ ಚಿತ್ರವನ್ನು ಬದಲಾಯಿಸಿಕೊಳ್ಳುವುದಕ್ಕೂ ಮತ್ತು ‘ಇಂಟರ್ನೆಟ್‌ಡಾಟ್‌ಆರ್ಗ್’ ನೊಂದಿಗೆ ನೋಂದಣಿಯಾಗುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಫೇಸ್‌ಬುಕ್ ಹೇಳಿಕೆಯೊಂದರಲ್ಲಿ ಸ್ಪಷ್ಟೀಕರಣ ನೀಡಿದೆ.

ಮುಕ್ತ ಅಂತರ್ಜಾಲ ಕುರಿತು ಚರ್ಚೆ ನಡೆಯಲಿ: ಫೇಸ್‌ಬುಕ್
ನ್ಯೂಯಾರ್ಕ್, ಸೆ.29: ಭಾರತದಲ್ಲಿ ಅಂತರ್ಜಾಲ ಸಂಪರ್ಕ ಹೊಂದಿಲ್ಲದ ದೊಡ್ಡ ಪ್ರಮಾಣದ ಜನಸಂಖ್ಯೆ ಇರುವುದರಿಂದ ಮುಕ್ತ ಅಂತರ್ಜಾಲದ ಕುರಿತು ಚರ್ಚೆ ನಡೆಯುವುದು ಬಹಳ ಪ್ರಾಮುಖ್ಯವಾಗಿದೆ ಎಂದು ಫೇಸ್‌ಬುಕ್ ಹೇಳಿದೆ. ಫೇಸ್‌ಬುಕ್‌ನ ಅಂಗಸಂಸ್ಥೆ ‘ಇಂಟರ್ನೆಟ್‌ಡಾಟ್‌ಆರ್ಗ್’ನಿಂದ ಅಂತರ್ಜಾಲ ಸ್ವಾತಂತ್ರದ ಉಲ್ಲಂಘನೆಯಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಅಮೆರಿಕ ಮೂಲದ ಈ ಕಂಪೆನಿ ತೀವ್ರ ಟೀಕೆಯನ್ನು ಎದುರಿಸುತ್ತಿದೆ. ಭಾರತದಲ್ಲಿ ಸುಮಾರು ಎಂಟು ಲಕ್ಷಕ್ಕೂ ಹೆಚ್ಚು ಗ್ರಾಹಕರು ‘ಇಂಟರ್ನೆಟ್‌ಡಾಟ್‌ಆರ್ಗ್’ನ ಬಳಕೆ ಮಾಡುತ್ತಿದ್ದಾರೆ.
ಗ್ರಾಹಕರ ಅಂತರ್ಜಾಲ ಸ್ವಾತಂತ್ರವನ್ನು ಕಾಪಾಡಲು ನಿಯಂತ್ರಣಾ ವ್ಯವಸ್ಥೆಗಳಿರಬೇಕು. ಇದರ ಜೊತೆಗೆ, ಅಂತರ್ಜಾಲ ಸಂಪರ್ಕ ಸೌಲಭ್ಯಗಳನ್ನು ಹೆಚ್ಚಿಸುವ ದಿಸೆಯಲ್ಲಿ ಹೊಸಹೊಸ ಮಾದರಿಗಳ ಮೇಲೆ ಕೆಲಸ ಮಾಡಲು ಕಂಪೆನಿಗಳಿಗೆ ಅವಕಾಶವಿರಬೇಕು ಎಂದು ಫೇಸ್‌ಬುಕ್‌ನ ಮುಖ್ಯಸ್ಥ ಮಾರ್ಕ್ ಝುಕರ್‌ಬರ್ಗ್ ಹೇಳಿದ್ದಾರೆ.
ಈ ಎರಡು ವಿಷಯಗಳಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುವುದು ಹೇಗೆ ಎಂಬ ವಿಚಾರದಲ್ಲಿ ಭಾರತದಲ್ಲಿ ದೊಡ್ಡ ಹೋರಾಟ, ಚರ್ಚೆಗಳು ನಡೆದಿವೆ. ಭಾರತದಲ್ಲಿ ಅಂತರ್ಜಾಲ ಸಂಪರ್ಕ ಸೌಲಭ್ಯ ಹೊಂದಿಲ್ಲದ ದೊಡ್ಡ ಜನಸಂಖ್ಯೆ ಇರುವುದರಿಂದ ಇಂತಹ ಚರ್ಚೆ ನಡೆಯುವುದು ಬಹಳ ಪ್ರಾಮುಖ್ಯವಾಗಿದೆ ಎಂದು ಝಕರ್‌ಬರ್ಗ್ ಅಭಿಪ್ರಾಯಪಟ್ಟಿದ್ದಾರೆ.

ಅಂತರ್ಜಾಲ ಸಂಪರ್ಕ ಸೌಲಭ್ಯವು ಉದ್ಯೋಗ ಸೃಷ್ಟಿಗೆ ಹಾಗೂ ಬಡತನದ ನಿರ್ಮೂಲನೆಗೆ ನೆರವಾಗುತ್ತವೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರನ್ನೂ ಅಂತರ್ಜಾಲ ಸಂಪರ್ಕ ಸೌಲಭ್ಯದ ವ್ಯಾಪ್ತಿಯೊಳಗೆ ತರುವುದು ರಾಷ್ಟ್ರೀಯ ಹಾಗೂ ಜಾಗತಿಕ ಆದ್ಯತೆಯಾಗಿದೆ ಎಂದು ಅವರು ಹೇಳಿದ್ದಾರೆ. ‘ಇಂಟರ್ನೆಟ್‌ಡಾಟ್‌ಆರ್ಗ್’ ಯೋಜನೆಯಡಿಯಲ್ಲಿ ಫೇಸ್‌ಬುಕ್, ರಿಲಯನ್ಸ್ ಕಮ್ಯುನಿಕೇಶನ್ಸ್ ನೊಂದಿಗೆ ಪಾಲುದಾರಿಕೆಯನ್ನು ಹೊಂದಿದೆ. ಗ್ರಾಹಕರಿಗೆ 30ಕ್ಕೂ ಮಿಕ್ಕಿ ವೆಬ್‌ಸೈಟ್‌ಗಳ ಜೊತೆಗೆ ಉಚಿತ ಸಂಪರ್ಕವನ್ನು ಒದಗಿಸಿದೆ.

‘ಇಂಟರ್ನೆಟ್‌ಡಾಟ್‌ಆರ್ಗ್’ನ್ನು ಇತ್ತೀಚೆಗೆ ‘ಫ್ರೀ ಬೇಸಿಕ್ಸ್’ ಎಂದು ಮರುನಾಮಕರಣ ಮಾಡಲಾಗಿದ್ದು, ಜಗತ್ತಿನ 20 ದೇಶಗಳಲ್ಲಿ ಸೇವೆಲಭ್ಯವಿದೆ.

Write A Comment