ರಾಷ್ಟ್ರೀಯ

ಕಡಿಮೆ ವೆಚ್ಚದ ಪ್ರವಾಸಿ ತಾಣವಾಗಿ ಭಾರತ: ಜೇಟ್ಲಿ ಕರೆ

Pinterest LinkedIn Tumblr

arun jetlyಹೊಸದಿಲ್ಲಿ, ಸೆ.27: ಅತ್ಯಾಧುನಿಕ ಮೂಲ ಸೌಕರ್ಯ ಹಾಗೂ ಅಂತರ್‌ದೇಶೀಯ ವಿಮಾನಯಾನ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಮೂಲಕ ಭಾರತವು ಕಡಿಮೆ ವೆಚ್ಚದ ಪ್ರವಾಸಿ ತಾಣವಾಗಿ ರೂಪುಗೊಳ್ಳಬೇಕಾದ ಅಗತ್ಯವನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಪ್ರತಿಪಾದಿಸಿದ್ದಾರೆ. ಪ್ರಸ್ತುತ ಭಾರತವು ವಾರ್ಷಿಕವಾಗಿ 70 ಲಕ್ಷ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ಆ ಸಂಖ್ಯೆಯನ್ನು 7 ಕೋಟಿಗೇರಿಸಬೇಕಾಗಿದೆಯೆಂದು ಅವರು ಹೇಳಿದ್ದಾರೆ.

ಹೊಸದಿಲ್ಲಿಯಲ್ಲಿ ‘ದೀನ್‌ದಯಾಳ್ ಉಪಾಧ್ಯಾಯ ಪರ್ಯಾವರಣ್’ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ದೇಶದಲ್ಲಿ ಪ್ರವಾಸೋದ್ಯಮ ಕ್ಕೆ ವಿಫುಲ ಅವಕಾಶಗಳಿದ್ದು, ಈ ವಲಯದಲ್ಲಿ ಭಾರೀ ಸಂಖ್ಯೆಯ ಉದ್ಯೋಗಗಳನ್ನು ಸೃಷ್ಟಿಸಲು ಹಾಗೂ ವಿದೇಶಿ ವಿನಿಮಯವನ್ನು ಸಂಪಾದಿಸಲು ಸಾಧ್ಯವಿದೆಯೆಂದರು. ಪ್ರವಾಸೋದ್ಯಮ ನೀತಿಯನ್ನು ರೂಪಿಸುವಲ್ಲಿ ರಾಜ್ಯಗಳೂ ಬಹುಮುಖ್ಯ ಪಾತ್ರ ವಹಿಸಬಹುದಾಗಿದೆಯೆಂದು ಹೇಳಿದ ಜೇಟ್ಲಿ, ದೇಶವನ್ನು ಪ್ರವಾಸಿ ಸ್ನೇಹಿ ತಾಣವಾಗಿ ರೂಪುಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಶ್ರಮಿಸುತ್ತಿದೆಯೆಂದರು.

ಭಾರತವು ವಾರ್ಷಿಕವಾಗಿ ಏಳು ಕೋಟಿ ಪ್ರವಾಸಿಗರನ್ನು ಆಕರ್ಷಿಸಲು ಸಾಧ್ಯವಾಗುವಂತೆ ಮಾಡಲು ಯೋಜನೆಗಳನ್ನು ಹಮ್ಮಿಕೊಳ್ಳುವಂತೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರವಾಸೋದ್ಯಮ ಸಚಿವ ಮಹೇಶ್ ಶರ್ಮಾ ಅವರಿಗೆ ಜೇಟ್ಲಿ ಸಲಹೆ ನೀಡಿದರು.

ಭಾರೀ ಸಂಖ್ಯೆಯ ವಿದೇಶಿ ಪ್ರವಾಸಿಗರು ಹಡಗುಗಳು ಹಾಗೂ ಕ್ರೂಸ್ ನೌಕೆಗಳ ಮೂಲಕ ಪ್ರಯಾಣಿಸುವುದರಿಂದ ಆ ವಲಯವನ್ನೂ ಅಭಿವೃದ್ಧಿಪಡಿಸಬೇಕಾದ ಅಗತ್ಯವನ್ನು ಜೇಟ್ಲಿ ಒತ್ತಿ ಹೇಳಿದರು.

ಪ್ರಸಿದ್ಧ ಸ್ಮಾರಕಗಳು ಧಾರ್ಮಿಕ ಕೇಂದ್ರಗಳು, ಅರಣ್ಯಗಳು ಹಾಗೂ ಪರ್ವತಗಳು ಸೇರಿದಂತೆ ದೇಶದಲ್ಲಿ ಪ್ರವಾಸಿಗರನ್ನು ಆಕರ್ಷಿಸುವಂತಹ ಅನೇಕ ತಾಣಗಳಿವೆಯೆಂದರು.
‘ದೀನದಯಾಳ್ ಪರ್ಯಾವರಣ್ ಭವನ’ದ ಬಗ್ಗೆ ಮಾತನಾಡಿದ ಅವರು, ಈ ನೂತನ ಕಟ್ಟಡವು ಅತ್ಯಾಧುನಿಕ ಸೌಕರ್ಯಗಳನ್ನು ಹೊಂದಿದ್ದು, ಪ್ರವಾಸಿಗರಿಗೆ ಸಂಬಂಧಿಸಿದ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಲಿದೆಯೆಂದರು. 125 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಸಂಕೀರ್ಣವು ಮುಂದಿನ ಎರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ.

Write A Comment