ರಾಷ್ಟ್ರೀಯ

ಸಂಸದರ ವೇತನ-ಭತ್ತೆ ನಿರ್ಧರಿಸಲು ತ್ರಿಸದಸ್ಯ ಸಮಿತಿ ರಚನೆ

Pinterest LinkedIn Tumblr

parliamentಹೊಸದಿಲ್ಲಿ, ಸೆ.27: ಸಂಸದರಿಗೆ ತಮ್ಮ ವೇತನವನ್ನು ತಾವೇ ನಿರ್ಧರಿಸಲು ಅವಕಾಶ ನೀಡಬಾರದೆಂಬ ಆಗ್ರಹದ ನಡುವೆಯೇ, ಕಾನೂನು ನಿರ್ಮಾತೃಗಳ ವೇತನ ಹಾಗೂ ಭತ್ತೆಗಳನ್ನು ಶಿಫಾರಸು ಮಾಡಲು ತ್ರಿಸದಸ್ಯ ಸಮಿತಿಯೊಂದನ್ನು ರಚಿಸಲು ಸರಕಾರ ಉದ್ದೇಶಿಸಿದೆ.
ಸಂಸತ್ ಸದಸ್ಯರ ವೇತನ ಹಾಗೂ ಭತ್ತೆಗಳ ಬಗ್ಗೆ ಶಿಫಾರಸು ಮಾಡಲು ತ್ರಿಸದಸ್ಯ ಸ್ವತಂತ್ರ ವೇತನ ಆಯೋಗವನ್ನು ಸಂಸದೀಯ ವ್ಯವಹಾರ ಸಚಿವಾಲಯ ಪ್ರಸ್ತಾಪಿಸಿದೆ. ಈ ಪ್ರಸ್ತಾಪವು ಮುಂದಿನ ತಿಂಗಳು ವಿಶಾಖಪಟ್ಟಣದಲ್ಲಿ ನಡೆಯಲಿರುವ ಎರಡು ದಿನಗಳ ಅಖಿಲ ಭಾರತ ಸಚೇತಕರ ಸಮ್ಮೇಳನಕ್ಕಾಗಿ ಸಿದ್ಧಪಡಿಸಲಾಗಿರುವ ಕಾರ್ಯಸೂಚಿ ಟಿಪ್ಪಣಿಯ ಭಾಗವಾಗಿದೆ.
ಸಂಸತ್ತನ್ನು ಪೂರ್ಣಕಾಲಿಕ ವೃತ್ತಿಯಾಗಿ ಆರಿಸಿಕೊಳ್ಳುವವರಿಗೆ, ಅವರ ಹೊಣೆಗಾರಿಕೆಯನ್ನು ಬಿಂಬಿಸಲು ಸಾಕಷ್ಟು ಅನುಕೂಲ ಕಲ್ಪಿಸಬೇಕೆಂಬುದು ಸಲಹೆ ನೀಡಲಾದ ಒಂದು ಸಿದ್ಧಾಂತವಾಗಿದೆ.
ಇಂತಹ ಸ್ವತಂತ್ರ ಸಮಿತಿಯ ರಚನೆಯಿಂದ, ಸಂಸದರು ತಮ್ಮ ಸಂಬಳವನ್ನು ತಾವೇ ನಿರ್ಧರಿಸುತ್ತಾರೆಂಬ ಸಾರ್ವಜನಿಕ ಬೊಬ್ಬೆ ಹಾಗೂ ಮಾಧ್ಯಮಗಳ ಟೀಕೆಗಳಿಗೆ ವಿರಾಮ ನೀಡಿದಂತಾಗುತ್ತದೆ.
ಭಾ ರತದ ಸಂಸದನೊಬ್ಬ ತಿಂಗಳಿಗೆ ರೂ.50 ಸಾವಿರ ವೇತನ ಪಡೆಯುತ್ತಾನೆ. ಇದಲ್ಲದೆ, ಸಂಸದನೊಬ್ಬ ಸಂಸತ್ ಅಧಿವೇಶನ ಅಥವಾ ಸದನ ಸಮಿತಿಯ ಸಭೆಗಳಿಗೆ ಹಾಜರಾದ ಬಗ್ಗೆ ರಿಜಿಸ್ಟರ್‌ನಲ್ಲಿ ಸಹಿ ಹಾಕಿದರೆ, ರೂ.2 ಸಾವಿರ ದಿನ ಭತ್ತೆ ನೀಡಲಾಗುತ್ತದೆ. ಪ್ರತಿ ತಿಂಗಳು ಸಂಸದನೊಬ್ಬ ರೂ. 45 ಸಾವಿರ ಕ್ಷೇತ್ರ ಭತ್ತೆ ಪಡೆಯಲು ಅರ್ಹನಾಗಿರುತ್ತಾನೆ. ಇದರಲ್ಲಿ ರೂ. 15 ಸಾವಿರ ಸ್ಟೇಶನರಿಗೆ ಹಾಗೂ ರೂ. 30 ಸಾವಿರ ಕಾರ್ಯದರ್ಶಿ ಸಹಾಯಕ ಸಿಬ್ಬಂದಿಯನ್ನು ನೇಮಿಸಿಕೊಳ್ಳುವುದಕ್ಕಿರುತ್ತದೆ. ಸಂಸದರು ಸರಕಾರಿ ವಸತಿ, ವಿಮಾನ ಹಾಗೂ ರೈಲು ಪ್ರಯಾಣ ಸೌಲಭ್ಯ, 3 ಸ್ಥಿರ ಹಾಗೂ 2 ಮೊಬೈಲ್ ದೂರವಾಣಿಗಳನ್ನು ಪಡೆಯಲು ಅರ್ಹರಿರುತ್ತಾರೆ.
ವಾಹನ ಖರೀದಿಗಾಗಿ ರೂ. 4 ಲಕ್ಷ ಸಾಲವೂ ಅವರಿಗೆ ದೊರೆಯುತ್ತದೆ.
ಅಲ್ಲದೆ ನಮ್ಮ ್ರತಿನಿಧಿ ್ರಜಾಪ್ರಭುತ್ವದಲ್ಲಿ ಸಂಸದರ ಅಗಾಧ ಹೊಣೆಗಾರಿಕೆ ಹಾಗೂ ಅವರು ವಹಿಸುವ ಪ್ರಮುಖ ಪಾತ್ರಗಳನ್ನು ಪರಿಗಣನೆಗೆ ತೆಗೆದುಕೊಳ್ಳಲು ಸೂಕ್ತ ಅವಕಾಶ ದೊರೆಯುತ್ತವೆ. ಸಂಸದೀಯ ವೇತನವು ನ್ಯಾಯೋಚಿತವಾಗಿ, ಪಾರದರ್ಶಕವಾಗಿ ಹಾಗೂ ಸಮಾನ ರೀತಿಯಲ್ಲಿ ತಲುಪುತ್ತವೆಯೆಂಬ ಶಿಫಾರಸನ್ನು ಖಚಿತಪಡಿಸುತ್ತದೆಂದು ಸಂಸದೀಯ ವ್ಯವಹಾರ ಸಚಿವಾಲಯ ಹೇಳಿದೆ.
ಆಯೋಗದ ರಚನೆಯ ಬಗ್ಗೆ ಏಕಾಭಿಪ್ರಾಯ ಮೂಡಿದೊಡನೆ ಸಂಸತ್ ಸದಸ್ಯರ ಸಂಬಳ, ಭತ್ತೆ ಮತ್ತು ಪಿಂಚಣಿ ಕಾಯ್ದೆ-1954ಕ್ಕೆ ಸೂಕ್ತ ತಿದ್ದುಪಡಿ ತರಲಾಗುವುದೆಂದು ಅದು ತಿಳಿಸಿದೆ.
ವೇತನ ನಿರ್ಧಾರಕ್ಕೆ ಸಚಿವಾಲಯ ಸಲಹೆ ಮಾಡಿರುವ ಸಾಮಾನ್ಯ ಸಿದ್ಧಾಂತಗಳು ಈ ಮುಂದಿನಂತಿವೆ: ಅದು ಸೂಕ್ತ ಅಭ್ಯರ್ಥಿ ಹಿಂಜರಿಯುವಷ್ಟು ಕಡಿಮೆ ಇರಬಾರದು ಹಾಗೂ ವೇತನವೇ ಈ ಉದ್ಯೋಗದ ಪ್ರಾಥಮಿಕ ಆಕರ್ಷಣೆಯಾಗುವಷ್ಟು ಹೆಚ್ಚೂ ಇರಬಾರದು. ವೇತನವು ಹೊಣೆಗಾರಿಕೆಯ ಮಟ್ಟವನ್ನು ಬಿಂಬಿಸುವಂತಿರಬೇಕು ಹಾಗೂ ಬಾಹ್ಯ ಹಿತಾಸಕ್ತಿಯಿರುವವರು ಸಂಸತ್ತನ್ನು ಪ್ರವೇಶಿಸಲು ಹಿಂಜರಿಯುವಂತಿರಬಾರದು.
ಸಂವಿಧಾನದ 106ನೆ ಪರಿಚ್ಛೇದದಂತೆ ಸಂಸದರ ವೇತನವು, ಕಾಲಕಾಲಕ್ಕೆ ತಿದ್ದುಪಡಿಯಾಗಿರುವ 1954ರ ಕಾಯ್ದೆಯ ಮೂಲಕ ನಿರ್ಧರಿಸಲಾಗುವುದು. ಯುಪಿಎ-2 ಸರಕಾರದ ಆಡಳಿತದ ಕಾಲದಲ್ಲಿ-2010ರಲ್ಲಿ ಕೊನೆಯ ಬಾರಿ ಸಂಸದರ ವೇತನ ಪರಿಷ್ಕರಿಸಲ್ಪಟ್ಟಿತ್ತು. ಸಂಸದರು ಪ್ರಕೃತ ತಿಂಗಳಿಗೆ ರೂ. 50 ಸಾವಿರ ಮೂಲ ವೇತನ ಪಡೆಯುತ್ತಿದ್ದಾರೆ. ರಾಜ್ಯಗಳ ಶಾಸಕಾಂಗ ಸದಸ್ಯರ ವೇತನವನ್ನು ಸಂವಿಧಾನದ 195ನೆ ಪರಿಚ್ಛೇದದನ್ವಯ ನಿರ್ಧರಿಸಲಾಗುವುದು.
37 ಅಭಿವೃದ್ಧಿಶೀಲ ಹಾಗೂ ಅಭಿವೃದ್ಧಿ ಹೊಂದಿರುವ ದೇಶಗಳಿಗೆ ಹೋಲಿಸಿ ವಿಶ್ಲೇಷಣೆ ಮಾಡಿದರೆ, ಸಂಸದರ ಮೂಲ ವೇತನವು ಟ್ಯುನಿಶಿಯದಲ್ಲಿ ಕನಿಷ್ಠ(ರೂ.7,952) ಹಾಗೂ ಇಸ್ರೇಲ್‌ನಲ್ಲಿ ಗರಿಷ್ಠವಿದೆ(ರೂ.6,16,675). ಕೇವಲ ಟ್ಯುನಿಶಿಯ, ವೆನಿಜುವೆಲ, ಶ್ರೀಲಂಕಾ, ನೇಪಾಳ, ಹೈಟಿ ಹಾಗೂ ಪನಾಮ- ಈ ಆರು ರಾಷ್ಟ್ರಗಳಲ್ಲಿ ಮಾತ್ರ ಸಂಸದರ ವೇತವು ಭಾರತದ ಸಂಸದರಿಗಿಂತ ಕಡಿಮೆಯಿದೆ.
138 ಛೇಂಬರ್‌ಗಳ ಅಂತಃಸಂಸದೀಯ ಒಕ್ಕೂಟವು(ಐಪಿಯು) 104 ಸಂಸತ್‌ಗಳಲ್ಲಿ ಕೈಗೊಂಡ ಸಮೀಕ್ಷೆಯೊಂದರಲ್ಲಿ ತನ್ನ ಸದಸ್ಯರ ವೇತನವನ್ನು ಸಂಸತ್ತೇ ನಿರ್ಧರಿಸುತ್ತದೆಂದು 69 ಛೇಂಬರ್‌ಗಳು ಸೂಚಿಸಿದೆ. ಸಂಸದರ ವೇತನವನ್ನು ನಾಗರಿಕ ಸೇವಾ ವೇತನ ಮಟ್ಟದ ಆಧಾರದಲ್ಲಿ ನಿರ್ಧರಿಸಲಾಗುವುದೆಂದು 31 ಛೇಂಬರ್‌ಗಳು ಹೇಳಿವೆ. ಭೂತಾನ್, ನಮೀಬಿಯ ಹಾಗೂ ಬ್ರಿಟನ್‌ನ ಹೌಸ್ ಆಫ್ ಕಾಮನ್ಸ್‌ಗಳಲ್ಲಿ ಸ್ವತಂತ್ರ ಸಮಿತಿಗಳು ವೇತನವನ್ನು ನಿರ್ಧರಿಸುತ್ತವೆ.

Write A Comment