ಮಂಗಳೂರು, ಸೆ.27: ಕರ್ನಾಟಕ ರಕ್ಷಣಾ ವೇದಿಕೆಯ ಮಂಗಳೂರು ವಿಭಾಗದ ವಿದ್ಯಾರ್ಥಿ ಘಟಕದ ವತಿಯಿಂದ ಎತ್ತಿನಹೊಳೆ ಯೋಜನೆಯನ್ನು ಕೈಬಿಡುವಂತೆ ಆಗ್ರಹಿಸಿ ಶನಿವಾರ ಉಳ್ಳಾಲ – ತೊಕ್ಕೊಟ್ಟು ಸಮೀಪದ ಜಪ್ಪಿನಮೊಗರಿನ ಸೇತುವೆ ಬಳಿಯ ನೇತ್ರಾವತಿ ನದಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ನೇತ್ರಾವತಿ ನದಿಯಲ್ಲಿ ತುಸು ದೂರ ದೋಣಿಯಲ್ಲಿ ಸಾಗಿದ ಧರಣಿನಿರತರು ‘ನೇತ್ರಾವತಿ ನಮ್ಮವಳು’ ಎಂದು ಘೋಷಣೆ ಕೂಗಿದರು. ಕರ್ನಾಟಕ ರಕ್ಷಣಾ ವೇದಿಕೆಯ ಮಂಗಳೂರು ವಿಭಾಗದ ವಿದ್ಯಾರ್ಥಿ ಘಟಕದ ಅಧ್ಯಕ್ಷರನ್ನೇ ಧರಣಿಗೆ ಬಾರದಂತೆ ತಡೆಹಿಡಿಯುವ ಪ್ರಯತ್ನ ನಡೆದಿರುವುದು ದುರದೃಷ್ಟಕರ ಎಂದು ಹೇಳಿದ ಕರವೇ ಮುಖಂಡರು ಇದು ನಮ್ಮ ಪ್ರತಿಭಟನೆಯನ್ನು ಹತ್ತಿಕುವ ಪ್ರಯತ್ನ ಎಂದು ಆರೋಪಿಸಿದರು.
ಧರಣಿಯಲ್ಲಿ ಕರವೇ ಜಿಲ್ಲಾಧ್ಯಕ್ಷ ಜಗದೀಶ್ ಅರಸ್, ಮಧುಸೂದನ್, ರಿಯಾಝ್, ರಿಕ್ಷಾ ಘಟಕದ ಅರುಣ್, ಜಮಾಲ್, ವಿದ್ಯಾರ್ಥಿ ಘಟಕದ ಪ್ರಧಾನ ಕಾರ್ಯದರ್ಶಿ ರಿಹಾನ್ ಮೊದಲಾದವರು ಪಾಲ್ಗೊಂಡಿದ್ದರು.
