ಮಂಗಳೂರು, ಸೆ.27: ಕಳಸಾ ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಶನಿವಾರ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಕರಾವಳಿಯಲ್ಲಿ ಯಾವೂದೇ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸರಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು, ಅಂಗಡಿ ಮುಂಗಟ್ಟುಗಳು ಎಂದಿನಂತೆ ತೆರೆದಿದ್ದವು.
ಜಿಲ್ಲೆಯಿಂದ ಹೊರ ಜಿಲ್ಲೆಗಳಿಗೆ ತೆರಳುವ ಕೆಲವು ಸರಕಾರಿ ಬಸ್‌ಗಳು ಮಾತ್ರ ಓಡಾಟವನ್ನು ಸ್ಥಗಿತಗೊಳಿಸಿದ್ದರೆ, ಖಾಸಗಿ ಬಸ್‌ಗಳ ಓಡಾಟ ಮಾತ್ರ ನಿರಾತಂಕವಾಗಿ ಸಾಗಿತ್ತು. ಕೇವಲ ಸರಕಾರಿ ಬಸ್‌ಗಳನ್ನೇ ಆಶ್ರಯಿಸಿದ್ದ ಗ್ರಾಮೀಣ ಪ್ರದೇಶದ ಜನರು ಹಾಗೂ ದೂರದೂರಿಗೆ ತೆರಳುವವರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸಿದರು.
ಮಂಗಳೂರಿನಿಂದ ಉಡುಪಿ, ಕಾರ್ಕಳ, ಬೆಳ್ತಂಗಡಿ, ಧರ್ಮಸ್ಥಳ, ಉಳ್ಳಾಲ, ಕಾಸರಗೋಡು ಮೊದಲಾದೆಡೆ ತೆರಳುವ ಖಾಸಗಿ ಸರ್ವಿಸ್ ಹಾಗೂ ನಗರದಿಂದ ಪಟ್ಟಣ ಪ್ರದೇಶಗಳಿಗೆ ತೆರಳುವ ಸಿಟಿ ಬಸ್ಸುಗಳು ಎಂದಿನಂತೆ ಓಡಾಟ ನಡೆಸಿದವು. ಜಿಲ್ಲೆಯಲ್ಲಿ, ಯಾವುದೇ ರೀತಿಯ ಅಹಿತಕರ ಘಟನೆಯಾಗಲಿ, ರಸ್ತೆ ತಡೆಯಾಗಲಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ಪುತ್ತೂರು, ಸುಳ್ಯ, ಬಂಟ್ವಾಳದಲ್ಲೂ ಶೂನ್ಯ ಪ್ರತಿಕ್ರಿಯೆ
ಪುತ್ತೂರಿನಲ್ಲಿ ಶಾಲಾ ಕಾಲೇಜುಗಳು ಎಂದಿನಂತೆ ತೆರೆದಿದ್ದವು. ಕೆಎಸ್ಸಾರ್ಟಿಸಿ ಬಸ್‌ಗಳು ಬೆಳಗ್ಗೆ ಸುಮಾರು 8ರ ತನಕ ಓಡಾಟ ನಡೆಸಿ ಬಳಿಕ 11:30ರವರೆಗೆ ಸಂಚಾರ ಸ್ಥಗಿತಗೊಳಿಸಿತ್ತು. ಆ ಬಳಿಕ ಪುನರಾರಂಭಿಸಿತು. ರೈತಸಂಘ ಹಸಿರು ಸೇನೆ, ಜಯ ಕರ್ನಾಟಕ ಸಂಘಟನೆ ಮತ್ತು ರಾಜ್ಯ ಸರಕಾರಿ ನೌಕರರ ಸಂಘ ಗಳು ತಾಲೂಕಿನಲ್ಲಿ ಬಂದ್‌ಗೆ ಬೆಂಬಲ ಸೂಚಿಸಿದ್ದರೂ ಜನ ಬೆಂಬಲ ವಿಲ್ಲದ ಕಾರಣ ಬಂದ್‌ಗೆ ಒತ್ತಾಯಿಸದೆ ಸುಮ್ಮನಾಗಿದ್ದವು.
ಪೊಲೀಸ್ ಇಲಾಖೆ ಸಾಕಷ್ಟು ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದು, ಬಿಗು ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿತ್ತು. ಸುಳ್ಯದಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ ಲಭಿಸಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ಬಸ್ ಸಂಚಾರ ಮಧ್ಯಾಹ್ನದವರೆಗೆ ಸ್ಥಗಿತಗೊಂಡಿತ್ತು. ಉಳಿದಂತೆ ಖಾಸಗಿ ಬಸ್, ವ್ಯಾನ್, ರಿಕ್ಷಾಗಳು ಎಂದಿನಂತೆ ಸಂಚಾರ ನಡೆಸಿದವು. ಅಂಗಡಿ ಮುಂಗಟ್ಟುಗಳು ತೆರೆದಿದ್ದು, ಜನ ಜೀವನಕ್ಕೆ ಹೆಚ್ಚಿನ ಸಮಸ್ಯೆ ಆಗಿಲ್ಲ.
ಬಂಟ್ವಾಳದಲ್ಲೂ ಇದೇ ಪರಿಸ್ಥಿತಿಯಿ ಗೋಚರವಾಗಿದ್ದು, ಬಂದ್‌ಗೆ ಪೂರಕ ಪ್ರತಿಕ್ರಿಯೆ ಕಂಡುಬಂದಿಲ್ಲ.



