ಮಂಗಳೂರು:ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿ ಬೆಂಗಳೂರಿನಲ್ಲಿ ಉನ್ನತ ಮಟ್ಟದ ತಜ್ಞರ ಸಭೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ದಾರೆ ಎಂದು ರಾಜ್ಯಸಭಾ ಸದಸ್ಯ, ಕೇಂದ್ರದ ಮಾಜಿ ಸಚಿವ ಆಸ್ಕರ್ ಫೆರ್ನಾಂಡಿಸ್ ಹೇಳಿದ್ದಾರೆ.
ಬುಧವಾರ ಪಿಲಿಕುಳದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕರಾವಳಿ ಭಾಗದ ಜನರ ಅಭಿಪ್ರಾಯ ಪಡೆದು ಚರ್ಚೆಗೆ ಅವಕಾಶ ನೀಡಬೇಕೆಂದು ಮುಖ್ಯಮಂತ್ರಿಯವರಲ್ಲಿ ಕೋರಲಾಗಿತ್ತು. ಇದಕ್ಕೆ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎಂದರು.
ಈ ಯೋಜನೆಯಲ್ಲಿ ಇದುವರೆಗೆ ಅವ್ಯವಹಾರ ಆಗಿರುವ ಬಗ್ಗೆ ನನಗೆ ತಿಳಿದಿಲ್ಲ. ಈ ವಿಷಯವನ್ನು ನಾನು ಮುಖ್ಯಮಂತ್ರಿ ಗಮನಕ್ಕೆ ತರುತ್ತೇನೆ. ಅದು ಕೂಡಾ ಸಭೆಯಲ್ಲಿ ಚರ್ಚೆಯಾಗಲಿದೆ ಎಂದ ಅವರು, ಯೋಜನೆಗಾಗಿ ಈಗಾಗಲೇ 1,500 ಕೋ.ರೂ. ವಿನಿಯೋಗಿಸಲಾಗಿದ್ದು, ಯೋಜನೆಯ ಗುತ್ತಿಗೆಯನ್ನು ಭ್ರಷ್ಟಾಚಾರದಲ್ಲಿ ಗುರುತಿಸಿಕೊಂಡಿರುವ ಕಪಿಲ್ಮೋಹನ್ ಕಂಪೆನಿಗೆ ನೀಡಲಾಗಿದೆಯಲ್ಲಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಲಿಲ್ಲ.
ಎತ್ತಿನಹೊಳೆ ಯೋಜನೆಯ ವಿಷಯದಲ್ಲಿ ತಜ್ಞರು ತಮ್ಮ ಅಭಿಪ್ರಾಯ ಮಂಡಿಸಲಿದ್ದಾರೆ. ಈ ಬಗ್ಗೆ ನಾನು ಉತ್ತರಿಸಲಾಗದ ಪ್ರಶ್ನೆಯನ್ನು ನನ್ನಲ್ಲೇಕೆ ಕೇಳುವಿರಿ ಎಂದು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಸಚಿವ ರಮಾನಾಥ ರೈ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.


