ಮಂಗಳೂರು, ಸೆ.20: ಸ್ಮಾರ್ಟ್ ಸಿಟಿ ಯೋಜನೆಗೆ ಸಂಬಂಧಿಸಿ ಪ್ರಥಮ ಹಂತಕ್ಕೆ ಮಂಗಳೂರು ಆಯ್ಕೆಯ ಪ್ರಯತ್ನವಾಗಿ ಒಂದು ವಾರದೊಳಗಾಗಿ ಮಂಗಳೂರು ನಗರವನ್ನು 3 ವಲಯವನ್ನಾಗಿ ವಿಭಾಗಿಸಿ ಜನಾಭಿಪ್ರಾಯ ಸಂಗ್ರಹಿಸಲಾಗುವುದು ಎಂದು ಮೇಯರ್ ಜೆಸಿಂತಾ ಆಲ್ಫ್ರೆಡ್ ತಿಳಿಸಿದ್ದಾರೆ.
ಸ್ಮಾರ್ಟ್ ಸಿಟಿ ಯೋಜನೆ ಕುರಿತಂತೆ ಶನಿವಾರ ಮಂಗಳೂರು ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ನಗರದ ಸಮಗ್ರ ಅಭಿವೃದ್ಧಿಗಾಗಿ ಜನತೆ ತಮ್ಮ ಅಭಿಪ್ರಾಯ ನೀಡಬೇಕು. ಯಾವ ರೀತಿಯ ಬದಲಾವಣೆಗಳಾಗಬೇಕು ಎಂಬ ಕುರಿತಂತೆ ಈಗಾಗಲೇ ಸಿದ್ಧತೆಗಳು ಆರಂಭವಾಗಿವೆ. ಇದಕ್ಕೆ ಜನತೆಯ ಸಹಕಾರವೂ ಅಗತ್ಯ ಎಂದರು.
ಪಾಲಿಕೆ ಆಯುಕ್ತ ಡಾ.ಎಚ್.ಎನ್.ಗೋಪಾಲಕೃಷ್ಣ ಮಾತ ನಾಡಿ, ಡಿಸೆಂಬರ್ 15ರ ಒಳಗೆ ಸ್ಮಾರ್ಟ್‌ಸಿಟಿ ಪ್ರಾಜೆಕ್ಟ್ (ಎಸ್‌ಸಿಪಿ) ವರದಿಯನ್ನು ಕೇಂದ್ರಕ್ಕೆ ಸಲ್ಲಿಸಬೇಕಿದೆ. ಈಗಾಗಲೇ ಮೂರು ಸಭೆಗಳು ನಡೆದಿದ್ದು, ಸಾಕಷ್ಟು ಮಾಹಿತಿ ಕಲೆ ಹಾಕಲಾ ಗಿದೆ. ನಾಗರಿಕರ ಬೇಡಿಕೆಯ ಮೇಲೆ ಯೋಜನೆ ಇದಕ್ಕಾಗಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿ ಸಬೇಕಾಗಿದೆ ಎಂದರು.
ಈಗಾಗಲೇ ಎಲ್ಲಾ ಇಲಾಖೆಗಳ ಟಾಸ್ಕ್ ಪೋರ್ಸ್ ಕಮಿಟಿ ಸಭೆ, ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದ ಸಭೆ ನಡೆಸಲಾಗಿದೆ. ವಿವಿಧ ಸಂಘ ಸಂಸ್ಥೆಗಳು, ಎನ್‌ಜಿಒಗಳ ಸಭೆಯನ್ನೂ ನಡೆಸ ಲಾಗುವುದು. ಅಕ್ಟೋಬರ್ 15ರ ಒಳಗೆ ಒಂದು ಸ್ಥೂಲ ವರದಿಯನ್ನು ಸಿದ್ಧ ಪಡಿಸಲಾಗುವುದು ಎಂದು ಆಯುಕ್ತರು ಹೇಳಿದರು.
ಸ್ಮಾರ್ಟ್ ಸಿಟಿ ಯೋಜನೆ ಕುರಿತು ಸವಿವರವನ್ನು ಮೊದಲು ಜನತೆಗೆ ತಿಳಿಯ ಪಡಿಸಬೇಕು ಈ ನೆಲೆಯಲ್ಲಿ, ಎಸ್ಸೆಮ್ಮೆಸ್, ಕರಪತ್ರ ಹಂಚಿ ಮಾಹಿತಿ ನೀಡುವುದು ಮುಂತಾದ ಕಾರ್ಯಗಳು ಶೀಘ್ರ ಆಗಬೇಕು ಎಂಬ ಸಲಹೆ ಸಭೆಯಲ್ಲಿ ಕೇಳಿಬಂತು. ಉಪಮೇಯರ್ ಪುರುಷೋತ್ತಮ ಚಿತ್ರಾಪುರ ವೇದಿಕೆಯಲ್ಲಿ ಉಪಸ್ಥಿತರಿದ್ದರು



