ಗಣೇಶ್ ಚತುರ್ಥಿ ಸ್ಪೆಶಲ್ ರಿಪೋರ್ಟ್- 3
ಕುಂದಾಪುರ: ಪರಶುರಾಮ ಸೃಷ್ಟಿಯ ಸಪ್ತ ಕ್ಷೇತ್ರಗಳಲ್ಲಿ ಒಂದಾಗಿರುವ ಪುರಾಣ ಪ್ರಸಿದ್ಧ ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ಕ್ಷೇತ್ರದಲ್ಲಿ ಹಿಂದೆ ಗೌತಮರು ತಪಸ್ಸು ಮಾಡುತ್ತಿದ್ದರು. ಕುಂಭಾಸುರ ಎನ್ನುವ ಧೈತ್ಯನ ಉಪಟಳವನ್ನು ನಿವಾರಿಸಬೇಕೆಂದು ಅವರು ಇಲ್ಲಿಗೆ ವನವಾಸ ಕಾಲದಲ್ಲಿ ಬಂದ ಭೀಮ ಸೇನನ ಹತ್ತಿರ ಹೇಳಿದ್ದು ಭೀಮ ಸೇನನು ಅಶರೀರವಾಣಿಯಂತೆ ಶಕ್ತಿಯಿಂದ ಅಸುರನ್ನು ಸಂಹಾರ ಮಾಡಿದ್ದರಿಂದ ಕುಂಭ+ಅಸಿ= ಕುಂಭಾಸಿ ಎಂಬ ಹೆಸರು ಬಂದಿತೆಂದು ಪುರಾಣ ಕತೆಯಿಂದ ತಿಳಿದು ಬರುತ್ತದೆ.
ಕುಂಭಾಶಿ ಕ್ಷೇತ್ರವನ್ನು, ಕುಂಭಾಶಿ ಮಠದ ಶ್ರೀ ವಾದಿರಾಜ ಯತಿಗಳು ಕ್ಷೇತ್ರ ರಾಜನೆಂದು ವರ್ಣಿಸಿರುವರು. ಈ ಕ್ಷೇತ್ರದ ಮೇಲ್ಗಡೆಯಲ್ಲಿ ಇರುವ ಗುಹೆಗಳೇ ಕ್ಷೇತ್ರ ರಾಜನ ಮುಖವಾಗಿದೆ. ಸೂರ್ಯ ಮತ್ತು ಚಂದ್ರ ಪುಷ್ಕರಣೆ ತೀರ್ಥ ಕ್ಷೇತ್ರ ರಾಜನ ಕಣ್ಣುಗಳಾಗಿವೆ ಎಂದು ಈ ಕ್ಷೇತ್ರವನ್ನು ಪುರುಷಾ ಕೃತಿಯಲ್ಲಿ ವರ್ಣಿಸಿರುವರು.
ಆನೆಗುಡ್ಡೆಯ ಶ್ರೀ ವಿನಾಯಕ ದೇವಸ್ಥಾನ ಈ ದೇವಸ್ಥಾನದಲ್ಲಿ ನಿತ್ಯವೂ ಸಾವಿರಾರು ಜನರಿಗೆ ಅನ್ನದಾನ ನಡೆಯುತ್ತಿರುತ್ತದೆ. ಇದಕ್ಕಾಗಿಯೇ ಒಂದು ಭವ್ಯವಾದ ಭೋಜನ ಶಾಲೆ ಇದೆ. ಕೋಟ್ಯಾಂತರ ರೂಪಾಯಿಗಳ ವೆಚ್ಚದಿಂದ ಈ ಭವನವು ನಿರ್ಮಾಣಗೊಂಡಿದೆ. ಅಲ್ಲದೆ ಬರುವ ಭಕ್ತಾದಿಗಳಿಗಾಗಿ ವಸತಿ ಗೃಹಗಳು ಕಲ್ಯಾಣ ಮಂಟಪ ಇವುಗಳಿಂದ ಆನೆಗುಡ್ಡೆಯು ಸುಪ್ರಸಿಧ್ಧವಾಗಿದೆ
ಚೌತಿ ಹಬ್ಬದ ದಿನ, ಸಂಕಷ್ಟಹರ ಚತುರ್ಥಿಯ ದಿನ, ಸಂಕ್ರಾತಿಯಂತಹ ಪರ್ವ ದಿನಗಳಲ್ಲಿ ಆನೆಗುಡ್ಡೆಯಲ್ಲಿ ವಿಶೇಷವಾಗಿ ಭಕ್ತರ ಸಮೂಹ ಸೇರುತ್ತದೆ. ಆನೆಗುಡ್ಡೆಗೆ ತಮ್ಮ ತಮ್ಮ ವಾಹನಗಳನ್ನು ತಂದು ಜನರು ಪೂಜೆ ಮಾಡಿಸಿಕೊಂಡು ಹೋಗುತ್ತಾರೆ. ಗಣಪತಿ ದೇವರ ಕಾರಣೀಕದ ಕುರಿತು ಅನೇಕ ಆಖ್ಯಾಯಿಕೆಗಳ ಇರುವುದರಿಂದ ಈ ಗಣಪತಿಯು ಮಾತನಾಡುವ ಗಣಪತಿಯೊಂದು ಪ್ರಸಿದ್ಧವಾಗಿದೆ.
ಶುದ್ಧ ಚತುರ್ಥಿಯಂದು ಆನೆಗುಡ್ಡೆ ದೇವಸ್ಥಾನದಲ್ಲಿ ಗಣೇಶ ಚತುರ್ಥಿಯನ್ನು ವಿಶೇಷವಾಗಿ ಆಯೋಜಿಸಲಾಗುತ್ತದೆ. ಅಷ್ಟೋತ್ತರ ಸಹಸ್ರ ನಾರೀಕೇರ ಗಣಯಾಗ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸಿದ್ಧಿವಿನಾಯಕನ ಸನ್ನಿಧಿಯಲ್ಲಿ ಜರುಗುತ್ತದೆ




