ಹರಾರೆ, ಸೆ.16: ಝಿಂಬಾಬ್ವೆಯ ಅಧ್ಯಕ್ಷ 91ರ ಹರೆಯದ ರಾಬರ್ಟ್ ಮುಗಾಬೆ ಸಂಸತ್ತಿನ ಮೊದಲ ಅಧಿವೇಶನದ ವೇಳೆ ಬುಧವಾರ ಕಳೆದ ತಿಂಗಳು ಓದಿದ್ದ ಭಾಷಣವನ್ನೇ ಮತ್ತೊಮ್ಮೆ ಓದುವ ಮೂಲಕ ಸುದ್ದಿ ಮಾಡಿದ್ದಾರೆ.
ಸುಮಾರು 25 ನಿಮಿಷಗಳ ಅವಧಿಯ ಕಳೆದ ತಿಂಗಳು ಮಾಡಿದ್ದ ಭಾಷಣವನ್ನೇ ಅವರು ಪುನರುಚ್ಚರಿಸಿದ್ದಾರೆ ಎಂದು ವರದಿ ತಿಳಿಸಿದೆ. ಭಾಷಣವನ್ನು ಓದುವ ವೇಳೆ ಅವರಿಗೆ ತಾನು ಇದನ್ನು ಹಿಂದೊಮ್ಮೆ ಓದಿರುವ ಸಂಶಯದ ಸುಳಿವೂ ಗೋಚರಿಸಿಲ್ಲವೆನ್ನಲಾಗಿದೆ.
ಅಧ್ಯಕ್ಷರಿಗೆ ತೀರಾ ವಯಸ್ಸಾಗಿರುವುದಕ್ಕೆ ಮತ್ತು ಸ್ಮರಣಶಕ್ತಿ ಕಡಿಮೆಯಾಗಿರುವುದಕ್ಕೆ ಇದು ಸಾಕ್ಷಿಯಾಗಿದೆ ಎಂದಿರುವ ‘ಮೂವ್ಮೆಂಟ್ ಫಾರ್ ಡೆಮೊಕ್ರಾಟಿಕ್ ಚೇಂಜ್’ ಮುಗಾಬೆಯವರ ರಾಜೀನಾಮೆಗೆ ಒತ್ತಾಯಿಸಿದೆ.
ಇದಕ್ಕೂ ಮೊದಲೊಮ್ಮೆ ಮುಗಾಬೆಯವರು ಭಾಷಣ ಪೀಠದತ್ತ ತೆರಳುವ ವೇಳೆ ಜಾರಿ ಬಿದ್ದ ಘಟನೆಯೂ ಸಂಭವಿಸಿತ್ತು. ಆಗಿರುವ ಪ್ರಮಾದಕ್ಕೆ ವಿಷಾದ ವ್ಯಕ್ತಪಡಿಸಿರುವ ಅಧ್ಯಕ್ಷೀಯ ವಕ್ತಾರ, ಇಂತಹ ತಪ್ಪುಗಳು ಸಂಭವಿಸದಂತೆ ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿದ್ದಾರೆ.