ಹೊಸದಿಲ್ಲಿ, ಸೆ.8: ಪ್ರಧಾನಿ ನರೇಂದ್ರ ಮೋದಿಯವರ ಮಾತುಗಳು ಅಭಿರುಚಿಯನ್ನು ಕಳೆದುಕೊಂಡಂತೆ ಕಾಣುತ್ತಿವೆ. ಅವರ ಬಹುತೇಕ ಚುನಾವಣಾ ಆಶ್ವಾಸನೆಗಳು ‘ಬೊಗಳೆ’ ಮಾತಿನಂತಾಗಿವೆ (ಹವಾಬಾಝಿ) ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತೀವ್ರ ಟೀಕೆ ಮಾಡಿದ್ದಾರೆ.
ಭೂಸ್ವಾಧೀನ ಮಸೂದೆಯ ಸುಗ್ರೀವಾಜ್ಞೆಯನ್ನು ಕೈಬಿಟ್ಟಿರುವ ಕೇಂದ್ರ ಸರಕಾರದ ಕ್ರಮವು ಕಾಂಗ್ರೆಸ್ಗೆ ಬಹಳ ಸಂತೋಷವನ್ನುಂಟು ಮಾಡಿರುವುದು ಮಂಗಳವಾರ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಸೋನಿಯಾ ಗಾಂಧಿಯವರು ಆಡಿರುವ ಮಾತಿನಿಂದ ಬಹಳ ಸ್ಪಷ್ಟವಾಗಿ ಕಾಣುತ್ತಿತ್ತು.
ರಾಹುಲ್ ಗಾಂಧಿಯವರ ಕ್ರಿಯಾಶೀಲ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಹೋರಾಟದಿಂದ ಈ ಗೆಲುವು ಲಭಿಸಿದೆ ಎಂದು ಅವರು ಹೇಳಿದರು. ಜೊತೆಗೆ, ಕಾರ್ಮಿಕ ಸುಧಾರಣೆಗಳು, ಮಹಿಳಾ ಮತ್ತು ಶಿಶು ಅಭಿವೃದ್ಧಿ, ಆರ್ಟಿಐ ಮತ್ತು ನರೇಗಾ ಕಾಯ್ದೆಗಳ ಮೇಲೆ ಕೇಂದ್ರ ಸರಕಾರದ ‘ಪ್ರಹಾರ’ದ ವಿರುದ್ಧವೂ ಇಂತಹದೇ ಹೋರಾಟ ಆರಂಭಿಸುವ ಮಾತುಗಳನ್ನು ಅವರು ಆಡಿದರು.
ಮೋದಿ ಸರಕಾರದ ಮಾತು ಮತ್ತು ಕೃತಿಗಳನ್ನು ಪರಸ್ಪರ ಹೋಲಿಸಿ ನೋಡಿದಲ್ಲಿ, ಅದು ‘ಭಾರೀ ವೈಫಲ್ಯ’ವನ್ನು ಕಂಡಿರುವುದು ಸ್ಪಷ್ಟವಾಗಿದೆ ಎಂದು ಅವರು ಆರೋಪಿಸಿದರು.
ಭೂಸ್ವಾಧೀನ ಮಸೂದೆಯ ಸುಗ್ರೀವಾಜ್ಞೆಯ ವಿಚಾರದಲ್ಲಿ ಸರಕಾರದ ತಿರುವು-ಮುರುವು ನಡೆಯನ್ನು ನೋಡಿದಲ್ಲಿ, ಮೋದಿ ಸರಕಾರಕ್ಕೆ ನೈಜ ಪರಿಸ್ಥಿತಿಯ ಅರಿವು ಇದ್ದಂತಿಲ್ಲ. ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿಯವರು ನೀಡಿದ್ದ ಬಹುತೇಕ ಆಶ್ವಾಸನೆಗಳು ‘ಹವಾಬಾಝಿ’ಯಲ್ಲದೆ ಬೇರೇನೂ ಅಲ್ಲ ಎಂಬುದು ಈಗ ಸ್ಪಷ್ಟವಾಗುತ್ತಿದೆ ಎಂದು ಸೋನಿಯಾ ಗಾಂಧಿ ಹೇಳಿದರು.
ಕಾಂಗ್ರೆಸ್ ಪಕ್ಷದ ಸತತ ಹೋರಾಟದಿಂದಾಗಿ ಭೂಸ್ವಾಧೀನ ಮಸೂದೆಯ ‘ರೈತ ವಿರೋಧಿ’ ತಿದ್ದುಪಡಿಗಳನ್ನು ಸರಕಾರ ಕೈಬಿಡುವಂತಾಯಿತು. ರಾಹುಲ್ ಗಾಂಧಿಯವರ ಕ್ರಿಯಾಶೀಲ ಮಾರ್ಗದರ್ಶನದಲ್ಲಿ ಹೋರಾಟ ಕೈಗೊಂಡ ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನಿಗೂ ಇದರ ಶ್ರೇಯಸ್ಸು ಲಭಿಸಬೇಕು ಎಂದು ಅವರು ಶ್ಲಾಘಿಸಿದರು.
ಕಾಂಗ್ರೆಸ್ ಪಕ್ಷದ ಹೋರಾಟದಲ್ಲಿ ಸಮಾನ ಮನಸ್ಕ ರಾಜಕೀಯ ಪಕ್ಷಗಳು ಮತ್ತು ನಾಗರಿಕ ಸಮಾಜದ ಸದಸ್ಯರು ಕೈಜೋಡಿಸಿದ ಕಾರಣದಿಂದ ಈ ಗೆಲುವು ಸಾಧ್ಯವಾಗಿದೆ ಎಂದು ಅವರು ತಿಳಿಸಿದರು.
ದೇಶದ ಪ್ರಮುಖ ಸಂಸ್ಥೆಗಳ ಸ್ವಾಯತ್ತೆ ಮತ್ತು ಸಮಗ್ರತೆಯನ್ನು ಸರಕಾರವು ವ್ಯವಸ್ಥಿತವಾಗಿ ಹಾಳುಗೆಡಹುತ್ತಿದೆ. ಬರಹಗಾರರು ಮತ್ತು ಪ್ರಗತಿಪರ ಚಿಂತಕರನ್ನು ದೈಹಿಕವಾಗಿ ಕೊನೆಗಾಣಿಸಲಾಗುತ್ತಿದೆ ಎಂದು ಸೋನಿಯಾ ಗಾಂಧಿ ಆರೋಪಿಸಿದರು. ಇತ್ತೀಚೆಗೆ ಹತ್ಯೆಗೀಡಾದ ಗೋವಿಂದ ಪನ್ಸಾರೆ ಮತ್ತು ಎಂ.ಎಂ.ಕಲಬುರ್ಗಿ ಪ್ರಕರಣಗಳನ್ನು ಸೂಕ್ಷ್ಮವಾಗಿ ಪ್ರಸ್ತಾಪಿಸುತ್ತ ಅವರು ಈ ಮೇಲಿನ ಮಾತುಗಳನ್ನು ಆಡಿದರು.
ರಾಷ್ಟ್ರೀಯ