ಪುತ್ತೂರು, ಸೆ.8 ಮಳೆಗಾಲದಲ್ಲಿ ಹೆಚ್ಚುವರಿಯಾಗಿ ಹರಿದು ಹೋಗುತ್ತಿರುವ ನದಿ ನೀರನ್ನು ಉಪಯೋಗಿಸಿಕೊಳ್ಳುವ ಎತ್ತಿನ ಹೊಳೆ ಯೋಜನೆಯಿಂದಾಗಿ ದ.ಕ. ಜಿಲ್ಲೆಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಎಂದು ಗೃಹಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಪುತ್ತೂರು ನಗರ ಸಂಚಾರಿ ಠಾಣೆಯ ನೂತನ ಕಟ್ಟಡದ ಉದ್ಘಾಟನೆಗೆ ಸೋಮವಾರ ಪುತ್ತೂರಿಗೆ ಆಗಮಿಸಿದ್ದ ಸಂದರ್ಭ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ನೇತ್ರಾವತಿ ನದಿ ತಿರುವು ವಿಚಾರದಲ್ಲಿ ತಪ್ಪುಅಭಿಪ್ರಾಯ ಮೂಡಿಸಲಾಗಿದೆ. ಮಳೆಗಾಲದಲ್ಲಿ ಹೆಚ್ಚಿನ ನೀರು ಹರಿದು ಸಮುದ್ರ ಸೇರುತ್ತಿದ್ದು, ಹೆಚ್ಚುವರಿಯಾಗಿ ಹರಿದು ಹೋಗುವ ಈ ನೀರನ್ನು ಸಂಗ್ರಹಿಸಿ ಉಪಯೋಗಿಸುವ ಕೆಲಸ ಆಗುತ್ತಿದೆ. ಇದರಿಂದಾಗಿ ಜಿಲ್ಲೆಗೆ ಹಾಗೂ ಜಿಲ್ಲೆಯ ಜನತೆಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದವರು ಸ್ಪಷ್ಟಪಡಿಸಿದರು.
ಜಿಲ್ಲೆಯಲ್ಲಿ ನಡೆಯುತ್ತಿರುವ ಅನೈತಿಕ ಗೂಂಡಾಗಿರಿಯನ್ನು ನಾವು ಒಪ್ಪುವುದಿಲ್ಲ. ಮತೀಯವಾದಿಗಳು ಯಾರೇ ಇರಲಿ, ತಪ್ಪುಮಾಡಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳುತ್ತೇವೆ ಎಂದು ಸಚಿವರು ಎಚ್ಚರಿಸಿದರು.
ರಾಜ್ಯದ 20 ಜಿಲ್ಲೆಗಳಿಗೆ ಮಹಿಳಾ ಪೊಲೀಸ್ ಸ್ಟೇಷನ್ ಮಂಜೂರು ಮಾಡಲಾಗುವುದು. ಈ ಪೊಲೀಸ್ ಠಾಣೆಯನ್ನು ಎಲ್ಲಿ ಮಾಡಬೇಕೆಂಬ ವಿಚಾರದಲ್ಲಿ ಇಲ್ಲಿನ ಜನಪ್ರತಿನಿಧಿಗಳೇ ತೀರ್ಮಾನಿಸಲಿದ್ದಾರೆ ಎಂದು ಅವರು ತಿಳಿಸಿದರು.


