ವರದಿ : ಈಶ್ವರ ಎಂ. ಐಲ್/ ಚಿತ್ರ,: ದಿನೇಶ್ ಕುಲಾಲ್
ಮುಂಬಯಿ : ಕರ್ನಾಟಕದವರು, ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯವರು ಎಲ್ಲಿ ಹೋದರೂ ಹೆಸರು ಗಳಿಸುದರೊಂದಿಗೆ ಅಭಿವೃದ್ದಿಯಾಗುತ್ತಾರೆ ಕಾರಣ ದೇವರ ಅನುಗ್ರಹ. ದೇವರ ಪೂಜೆಯಿಂದ ನೀವೆಲ್ಲ ಒಂದಾಗಿದ್ದೀರಿ. ನಮ್ಮ ಬಾಷೆ, ಸಂಸ್ಕೃತಿ, ಆಚಾರ ವಿಚಾರದ ಬಗ್ಗೆ ನಮಗೆ ಅಭಿಮಾನವಿದೆ. ಶಾಂತಿ ಪ್ರಿಯರಾದ ದ. ಕನ್ನಡ ಜಿಲ್ಲೆಯವರು ಧರ್ಮದ ಹೆಸರಲ್ಲಿ ಒಂದಾಗುತ್ತಿದ್ದಾರೆ. ಇದರಿಂದ ನಮ್ಮವರು ಜೀವನದಲ್ಲಿ ಅಭಿವೃದ್ದಿಯಾಗುತ್ತಾರೆ ಎಂದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ನುಡಿದರು.
ಆ. 30 ರಂದು ಮಲಾಡ್ ಪೂರ್ವ ಕುರಾರ್ ವಿಲೇಜ್ ಅಪ್ಪಾವಾಡಿ ಜೀಜಾಮಾತ ಶಾಲೆಯ ಆವರಣದಲ್ಲಿ ಮಲಾಡ್ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯ ವತಿಯಿಂದ ಪತ್ರಕರ್ತ ಬೊಕ್ಕಪಟ್ಣ ದಿನೇಶ್ ಕುಲಾಲ್ ಅವರ ಸಾರಥ್ಯದಲ್ಲಿ ಜರಗಿದ 6ನೇ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆಗೆ ಆಗಮಿಸಿದ ಶ್ರೀಗಳು ಆಶೀರ್ವಚನ ನೀಡುತ್ತಾ ನಮ್ಮ ದೇಶದಲ್ಲಿ ವಿವಿಧತೆಯಿಂದ ಏಕತೆಯನ್ನು ಕಾಣಬಹುದು. ಪ್ರತೀ ಹತ್ತು ಕಿಲೋ ಮೀಟರಿಗೆ ಬಾಷೆ ಬದಲಾಗುತ್ತದೆ. ಉಡುಗೆ ತೊಡುಗೆಗಳು ಬದಲಾಗುತ್ತದೆ. ಆದರೂ ಭಾರತ ಒಂದಾಗಿದೆ. ಇದಕ್ಕೆ ಕಾರಣ ನಮ್ಮಲ್ಲಿನ ಧಾರ್ಮಿಕ ಶ್ರದ್ದೆ. ಧರ್ಮ ಯಾವಾಗಲೂ ನಮ್ಮನ್ನು ಒಂದು ಮಾಡುತ್ತದೆ. ದೂರದ ಮುಂಬಯಿಯಲ್ಲಿ ನೀವಿದ್ದರೂ ಮನಸ್ಸು ಊರಿನಲ್ಲಿದೆ. ಜೀವನ ಶ್ರೇಷ್ಠವಾಗಲು ಮೂಲ ಸ್ಥಾನವು ಒಳ್ಳೆಯದಾಗಬೇಕು. ಪತ್ರಕರ್ತರ ಬಗ್ಗೆ ಮಾತನಾಡಿದ ಸ್ವಾಮೀಜಿಯವರು ಪತ್ರಕರ್ತರೊಬ್ಬರು ಈ ಕಾರ್ಯಕ್ರಮದ ಸಾರಥ್ಯವನ್ನು ವಹಿಸಿದ್ದು ಪತ್ರಕರ್ತರು ಕೇವಲ ಪತ್ರಿಕೆಗೆ ಮಾತ್ರ ಸೀಮಿತವಾಗಿರದೆ ಸಮಾಜಸೇವೆಯನ್ನೂ ಮಾಡಬೇಕೆಂದರು.
ಸಮಿತಿಯ ಅಧ್ಯಕ್ಷ ನ್ಯಾಯವಾದಿ ಜಗನ್ನಾಥ ಎನ್. ಶೆಟ್ಟಿಯವರು ಪ್ರಾಸ್ತಾವಿಕ ನುಡುಗಳನ್ನಾಡಿದರು. ದುಖವನ್ನು ಮರೆಯಲು ಉತ್ಸವದಲ್ಲಿ ಭಾಗವಹಿಸಿರಿ. ಪರಿಸರದ ಮಕ್ಕಳು ತಮ್ಮ ಪ್ರತಿಭೆಯನ್ನು ಪ್ರದರ್ಶಿದಿದ್ದಾರೆ. ಅವರಿಗೆ ನಾವು ಅವಕಾಶ ನೀಡಿ ಲಕ್ಷೀ ಪೂಜೆಯೊಂದಿಗೆ ಸರಸ್ವತಿಯ ಪೂಜೆಯನ್ನು ಮಾಡಿರುವೆವು. ದೇವರ ಸೇವೆಯೊಂದಿಗೆ ಈ ಸಮಿತಿಯು ಜನ ಸೇವೆಯನ್ನು ಮಾಡುತ್ತಿದೆ. ಎಂದರು.
ಮೊಗವೀರ ಬ್ಯಾಂಕಿನ ಕಾರ್ಯಧ್ಯಕ್ಷ ಸದಾನಂದ ಕೋಟ್ಯಾನ್ ಅವರು ಉಪಸ್ಥಿತರಿದ್ದು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ , ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯ ನಿರ್ವಹಿಸುತ್ತಿರುವುದು ಉತ್ತಮ ಕೆಲಸ. ಇದರಿಂದ ಮಹಾಲಕ್ಷಿಯ ಆಶೀರ್ವಾದ ದೊರಕುತ್ತದೆ. ಕಷ್ಟ ಕಾಲದಲ್ಲಿ ಇತರರಿಗೆ ಸಹಕರಿಸುವುದು ನಮ್ಮ ಜೀವನದ ಲಕ್ಷಣವಾಗಲಿ. ಮಕ್ಕಳನ್ನು ಪ್ರೋತ್ಸಾಹಿಸುದೆಂದರೆ ಶಿಲೆಯಲ್ಲಿನ ಶಿಲ್ಪವನ್ನು ಹೊರತಂದಂತೆ. ಎಂದರು. ಮೊಗವೀರ ಬ್ಯಾಂಕಿನ ಉಪ ಕಾರ್ಯಧ್ಯಕ್ಷ ಸುರೇಶ್ ಕಾಂಚನ್ ಅವರು ಮಾತನಾಡುತ್ತಾ ಇಂದಿಲ್ಲಿ ಸೇರಿದ ಜನಸಂಖ್ಯೆಯನ್ನು ನೋಡುವಾಗ ಈ ಮಹಾನಗರದಲ್ಲಿ ತುಳು ಕನ್ನಡಿಗರು ಬಹಳಷ್ಟು ಸಂಖ್ಯಯಲ್ಲಿರಬಹುದು ಎಂದು ಅರಿವಾಗುತ್ತದೆ. ಇಂದಿಲ್ಲಿ ಎಲ್ಲಾ ಸಮುದಾಯದರವು ಒಂದಾಗಿದ್ದು ಸ್ವಾಮೀಜಿಯವರ ಪದಾರ್ಪಣೆಯಿಂದ ಕುರಾರ್ ವಿಲೇಜ್ ಇನ್ನಷ್ಟು ಪವಿತ್ರವಾಗಿದೆ ಎಂದರು.
ಯಕ್ಷಗಾನ ಸಂಘಟಕ ವಿಕ್ರೋಲಿ ಆನಂದ ಶೆಟ್ಟಿಯವರು ಮತನಾಡಿ, ಇಂದಿನ ಕಾರ್ಯಕ್ರಮವನ್ನು ನೋಡಿದಾಗ ಪ್ರಯತ್ನ ಪಟ್ಟಲ್ಲಿ ಏನನ್ನೂ ಸಾಧಿಸಲು ಸಾದ್ಯ. ಇಲ್ಲಿನ ಕಾರ್ಯಕ್ರಮದ ರೀತಿ ನೀತಿ ಇತರರಿಗೂ ಮಾರ್ಗದರ್ಶನ ನೀಡುವಂತಾಗಿದೆ ಎಂದರು.
ಕುಲಾಲ ಸಂಘದ ಅಧ್ಯಕ್ಷ ಗಿರೀಶ್ ಬಿ. ಸಾಲ್ಯಾನ್ ಆವರು ಗೌರವ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡುತ್ತಾ ಮಲಾಡ್ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯಿಂದ ಉತ್ತಮ ಕಾರ್ಯ ನಡೆಯುತ್ತಿದ್ದು ಇದು ಇನ್ನೂ ವಿಜ್ರಂಭಣೆಯಿಂದ ಮುಂದುವರಿಯುತ್ತಿರಲಿ ಎಂದು ಅಭಿನಂದಿಸಿದರು. ಗೌರವ ಅತಿಥಿ ಯಕ್ಷ ಕಲಾತರಂಗ ದಶಾವಾತಾರ ಯಕ್ಷಗಾನ ಮಂಡಳಿಯ ಅಧ್ಯಕ್ಷ ಕುಕ್ಕೆಹಳ್ಳಿ ವಿಠಲ ಪ್ರಭು ಅವರು ಈ ಪೂಜೆಯ ಮಹತ್ವವನ್ನು ಬಣ್ಣಿಸಿದರು.
ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಸ್ವಾಮೀಜಿಯವರ ಆಶ್ರೀರ್ವಾದದೊಂದಿಗೆ ಬಂಟರ ಸಂಘದ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿಯವರ ಅನುಪಸ್ಥಿತಿಯಲ್ಲಿ ಪತ್ನಿ ಲತಾ ವಿಶ್ವನಾಥ ಶೆಟ್ಟಿ ಮತ್ತು ಪುತ್ರಿಯನ್ನು ಸನ್ಮಾನಿಸಲಾಯಿತು. ಇತರ ಸನ್ಮಾನಿತರಾದ ಇರಾನಿ ಕಾಲನಿ ಶನಿ ಮಹಾತ್ಮ ಪೂಜಾ ಸಮಿತಿಯ ಅಧ್ಯಕ್ಷ ಬಿ. ದಿವಾಕರ ಡಿ. ಶೆಟ್ಟಿ, ಮೂಡಬಿದ್ರೆ ಹೇಮಾ ಸಭಾಭವನದ ಮಾಲಕ ಕೆ. ಕೆ. ಪೂಜಾರಿ ದಂಪತಿ, ಶನಿಪೂಜಾ ಸಮಿತಿ ಮಲಾಡ್ ನ ನಾರಾಯಣ ಶೆಟ್ಟಿ, ಜಯ ವಡಾಪಾವ್ ಮಲಾಡ್ ನ ಮಾಲಕ ಜಯಾನಂದ ಎಸ್ ಕೋಟ್ಯಾನ್, ಶ್ರೀ ಭವಾನಿ ಶಂಕರ ಮಂದಿರದ ಸಂಧ್ಯಾ ಜನಾರ್ಧನ ಭಟ್ ಅವರನ್ನೂ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಸನ್ಮಾನಿಸಿದರು.
ನೃತ್ಯ ವೈಭವ ದಿಂದ ರಂಜಿಸಿದ ಮಲಾಡ್ ಪರಿಸರದ ಪ್ರತಿಭಾವಂತ ಮಕ್ಕಳನ್ನು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕನ್ನಡ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯವನ್ನು ವಿತರಿಸಲಾಯಿತು.
ಮೊಗವೀರ ಬ್ಯಾಂಕಿನ ನಿರ್ದೇಶಕ ಗೋಪಾಲ ಪುತ್ರನ್, ದಹಿಸರ್ ಶ್ರೀ ದುರ್ಗಾಪರಮೇಶ್ವರಿ ಶನೀಶ್ವರ ಸಮಿತಿ ಅಧ್ಯಕ್ಷ ಶೇಖರ ಶೆಟ್ಟಿಯವರು ಈ ಸಮಾರಂಭಕ್ಕೆ ಗೌರವ ಅತಿಥಿಯಾಗಿ ಆಗಮಿಸಿದ್ದರು. ವೇದಿಕೆಯಲ್ಲಿ ಸಮಿತಿಯ ಗೌ. ಕಾರ್ಯದರ್ಶಿ ಗಣೇಶ್ ಎಲ್. ಕುಂದರ್, ಕೋಶಾಧಿಕಾರಿ ಜಗನ್ನಾಥ ಎಚ್. ಮೆಂಡನ್, ಸಂತೋಷ್ ಪೂಜಾರಿ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಮಿತಿಯ ಸಲಹೆಗಾರರಾದ ಪರಮಾನಂದ ಭಟ್, ರವಿ ಸ್ವಾಮೀಜಿ, ಶ್ರೀನಿವಾಸ ಸಾಫಲ್ಯ, ಎಸ್. ಬಿ. ಕೋಟ್ಯಾನ್, ಹರೀಶ್ ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ಸಂಚಾಲಕ ಸುಂದರ ಪೂಜಾರಿ, ಮಹಾಬಲ ಪೂಜಾರಿ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ದಿನೇಶ್ ಕುಲಾಲ್, ಶ್ರೀಮತಿ ಆಚಾರ್ಯ, ಪ್ರಣಿತಾ ಶೆಟ್ಟಿ, ಸುಂದರ ಪೂಜಾರಿ, ರತ್ನ ಕುಲಾಲ್ ಮೊದಲಾದವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಸಹಕರಿಸಿದರು.
ಮೀರಾರೋಡ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಸಾಣೂರು ಸಾಂತಿಂಜ ಜನಾರ್ಧನ ಭಟ್ ಅವರ ಪೌರೋಹಿತ್ಯದಲ್ಲಿ ಸುಮಂಗಲೆಯರಿಂದ ವರಮಹಾಲಕ್ಷ್ಮೀ ಪೂಜೆಯು ನಡೆಯಿತು.








