ಉಳ್ಳಾಲ,ಆಗಸ್ಟ್.22: ಬಸ್ಸಿನಲ್ಲಿ ಮಹಿಳೆಯರ ಜೊತೆ ಕುಳಿತುಕೊಂಡು ಮಹಿಳಾ ಪ್ರಯಾಣಿಕರ ಜೊತೆ ಅಸಭ್ಯವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಬಸ್ಸಿನ ಸಿಬ್ಬಂದಿಗಳ ಗೆಳೆಯರು ಎನ್ನಲಾದ ಮೂವರು ಪ್ರಯಾಣಿಕರನ್ನು ಹಿಂಬಂದಿ ಸಿಟಿಗೆ ಕಳಿಸಿದ ವ್ಯಕ್ತಿಗೆ ಹಲ್ಲೆ ನಡೆಸಿದ ಘಟನೆ ಶನಿವಾರ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿ ಉಳ್ಳಾಲ ಪೊಲೀಸರು ಬಸ್ ನಿರ್ವಾಹಕನನ್ನು ವಶಕ್ಕೆ ಪಡೆದುಕೊಂಡ ಹಿನ್ನೆಲೆಯಲ್ಲಿ ಮಂಗಳೂರು-ಎಲಿಯಾರುಪದವು ನಡುವೆ ಸಂಚರಿಸುವ ಬಸ್ ಸಿಬ್ಬಂದಿ ಕರ್ತವ್ಯ ನಡೆಸದೆ ಬಸ್ ಬಂದ್ ನಡೆಸಿದ ಪರಿಣಾಮ ಪ್ರಯಾಣಿಕರು ಪರದಾಡಬೇಕಾಯಿತು.
ಸುಕೆರವಾರಎಲಿಯಾರುಪದವಿನಿಂದ ಮಂಗಳೂರಿಗೆ ಹೋಗುತ್ತಿದ್ದ ಬಾಯಾರ್ ಹೆಸರಿನ ಬಸ್ಸಿನಲ್ಲಿ ಚಾಲಕನ ಬದಿಯಲ್ಲಿರುವ ಉದ್ದದ ಸೀಟಿನಲ್ಲಿ ಮೂವರು ಬಸ್ ಸಿಬ್ಬಂದಿಯ ತಂಡ ಕುಳಿತಿತ್ತು. ಅದೇ ಸೀಟಿನಲ್ಲಿ ಎರಡು ಮಹಿಳೆಯರು ಇದ್ದರು. ಮೂವರು ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದಾರೆಂದು ಅಂಬ್ಲಮೊಗರು ತಮ್ಮಣ ಕಟ್ಟೆ ನಿವಾಸಿ ನವೀನ್ ಕುಮಾರ್ ಎಂಬವರು ಅದೇ ಬಸ್ಸಿನ ನಿರ್ವಾಹಕನಲ್ಲಿ ವಿಷಯ ತಿಳಿಸಿದ್ದರು.
ಈ ಹಿನ್ನೆಲೆಯಲ್ಲಿ ನಿರ್ವಾಹಕ ಮೂವರನ್ನು ಎಬ್ಬಿಸಿ ಬಸ್ಸಿನ ಹಿಂಬದಿಗೆ ಕಳುಹಿಸಿದ್ದಾರೆ. ಇದರಿಂದ ನವೀನ್ ವಿರುದ್ಧ ಧ್ವೇಷ ಇಟ್ಟುಕೊಂಡ ತಂಡ ಇಂದು ದೇಸೋಡಿ ಎಂಬಲ್ಲಿ ಅದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ನವೀನ್ ಅವರಿಗೆ ಅಂಬ್ಲಮೊಗರು ನಿವಾಸಿಗಳಾದ ಇಮ್ರಾನ್, ಅನ್ಸಾರ್, ಶರೀಫ್, ರಿಝ್ವಾನ್, ಅಮೀರ್ ಎಂಬವರು ಸೇರಿಕೊಂಡು ಕೈ ಹಾಗೂ ಕಾಲಿನಿಂದ ಒದ್ದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಅವರು ಉಳ್ಳಾಲ ಠಾಣೆಯಲ್ಲಿ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಎಲಿಯಾರುಪದವು ಕಡೆಗೆ ಬರುತ್ತಿದ್ದ ಅಶ್ವಿನಿ ಹೆಸರಿನ ಖಾಸಗಿ ಬಸ್ಸಿನ ನಿರ್ವಾಹಕ ಅನ್ಸಾರ್ ಮತ್ತು ಚಾಲಕ ಜುನೈದ್ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕರ್ತವ್ಯದಲ್ಲಿರುವಾಗಲೇ ಪೊಲೀಸರು ಬಸ್ ಸಿಬ್ಬಂದಿಯನ್ನು ವಶಕ್ಕೆ ತೆಗೆದುಕೊಂಡಿರುವುದು ಖಂಡನೀಯ ಎಂದು ಆರೋಪಿಸಿ ಪೊಲೀಸರ ಈ ಕ್ರಮವನ್ನು ಖಂಡಿಸಿ ಬಸ್ ಸಿಬ್ಬಂದಿ ಬಸ್ ಬಂದ್ ನಡೆಸಿ ಪ್ರತಿಭಟನೆಗೆ ಇಳಿದಿದ್ದಾರೆ.
ಅನಿರೀಕ್ಷಿತ ಬಸ್ ಬಂದ್ ನಿಂದಾಗಿ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ಕರ್ತವ್ಯಕ್ಕೆ ಹಾಜಾರಾಗಲು ತೆರಳುತ್ತಿದ್ದವರು ಪರದಾಡಬೇಕಾಯಿತು.
ಇದೇ ಸಂದರ್ಭ ಬಸ್ ಬಂದ್ ನಡೆದು ಒಂದು ಗಂಟೆಯಾದರೂ ಸಂಬಂಧ ಪಟ್ಟ ಕೊಣಾಜೆ ಪೊಲೀಸರು ಸ್ಥಳಕ್ಕೆ ಬಾರದೇ ಇರುವುದು ಸಾರ್ವಜನಿಕರ ಆಕ್ರೋಷಕ್ಕೆ ಕಾರಣವಾಗಿಯಿತು.



