ಕುಂದಾಪುರ: ಪಂಚಾಯತ್ ವ್ಯಾಪ್ತಿಯ ಹಲವೆಡೆ ನಡೆಯುತ್ತಿರುವ ಕೃತಕ ನೆರೆ ಹಾವಳಿ ತಡೆಗಟ್ಟುವಿಕೆ, ಮುಂಜಾಗ್ರತಾ ಕ್ರಮ ಹಾಗೂ ಪರಿಹಾರ ಕ್ರಮದ ಕುರಿತು ಐದು ಪಂಚಾಯತಿಗಳ ಅಧ್ಯಕ್ಷ ಉಪಾಧ್ಯಕ್ಷರ ನೇತೃತ್ವದಲ್ಲಿ ಊರಿನ ಪ್ರಮುಖರು ಹಾಗೂ ಪಂಚಾಯತಿ ಸದಸ್ಯರ ಪಾಲ್ಘೊಳ್ಳುವಿಕೆಯಲ್ಲಿ ಕುಂಭಾಸಿ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಭಾರತೀಯ ಕಿಸಾನ್ ಸಂಘದ ಉಡುಪಿ ಜಿಲ್ಲಾ ಉಪಾಧ್ಯಕ್ಷ ಶೇಷಗಿರಿ ಗೋಟ ಬೀಜಾಡಿ ಅವರು, ಜನರು ಮನೆಯಲ್ಲಿ ತ್ಯಾಜ್ಯ ವಸ್ತುಗಳು, ಕಸದ ಪ್ಯಾಕೇಟುಗಳನ್ನು ಪ್ಲಾಸ್ಟಿಕ್‌ಗಳಲ್ಲಿ ತುಂಬಿಸಿ ಅದನ್ನು ತಂದು ಚರಂಡಿಗಳಿಗೆ ಎಸೆಯುವ ಕಾರ್ಯ ಮಾಡುತ್ತಿದ್ದು ಇದೇ ಸಮಸ್ಯೆಯಿಂದ ಹಲವೆಡೆ ಚರಂಡಿಯಲ್ಲಿ ಸರಾಗವಾಗಿ ನೀರು ಹರಿಯುವ ಪ್ರಕ್ರಿಯೆಗೆ ಸಮಸ್ಯೆಯಾಗುತ್ತಿದೆ ಈ ಬಗ್ಗೆ ಸ್ಥಳೀಯ ಪಂಚಾಯತಿಗಳು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದರೇ ಈ ಸಮಸ್ಯೆಗೆ ಕಡಿವಾಣ ಹಾಕಲು ಸಾಧ್ಯವಿದೆ ಎಂಬ ಅಭಿಪ್ರಾಯವನ್ನಿಟ್ಟರು.
ಗೋಪಾಡಿ ಪಂಚಾಯತ್ ಅಧ್ಯಕ್ಷೆ ಸರಸ್ವತಿ ಪುತ್ರನ್ ಮಾತನಾಡಿ, ಈ ಕಾರ್ಯವು ಎಲ್ಲರ ಸಂಘಟಿತ ಇಚ್ಚಾಶಕ್ತಿಯೊಂದಿಗೆ ನಡೆಯಬೇಕಿದೆ. ಸರಕಾರದ ಮತ್ತು ಇಲಾಖೆಯ ಜೊತೆಗೆ ಜನರು ಕೈ ಜೋಡಿಸಿದಾಗ ಇಂತಹ ಕೆಲಸಗಳು ಮುಂಚೂಣಿಯಲ್ಲಿ ಸಾಗುತ್ತದೆ. ಎಲ್ಲರೂ ಒಗ್ಗೂಡಿ ಶ್ರಮದಾನ ಮೊದಲಾದ ಕೆಲಸ ಕಾರ್ಯಗಳ ಮೂಲಕ ಜನರ ಹಲವು ವರ್ಷಗಳ ಸಮಸ್ಯೆಯನ್ನು ನಿವಾರಿಸಲು ಕಠಿಬದ್ಧರಾಗಬೇಕಿದೆ ಎಂದರು.
ಬಳಿಕ ಮಾತನಾಡಿದ ಕೋಟೇಶ್ವರ ಪಂಚಾಯತ್ ಉಪಾಧ್ಯಕ್ಷ ಉದಯ್ ನಾಯ್ಕ್, ಹಿಂದಿನ ಪಂಚಾಯತ್ ಆಡಳಿತ ವೈಖರಿಯ ಬಗ್ಗೆ ಮಾತನಾಡುವುದಿಲ್ಲ, ಬದಲಾಗಿ ಮುಂದಿನ ದಿನಗಳಲ್ಲಿ ಸಮಸ್ಯೆ ಪರಿಹಾರಕ್ಕೆ ವಿಶೇಷ ಗಮನ ನೀಡಲಾಗುತ್ತದೆ. ಹಿಂದಿನಿಂದಲೂ ಇದ್ದ ಹಳೆಯ ಪ್ರಮುಖ ತೋಡುಗಳನ್ನು ಉಳಿಸಿಕೊಳ್ಳುವ ಮೂಲಕ ಅದರಲ್ಲಿ ನೀರು ಹರಿಯಲು ಸೂಕ್ತ ಅವಕಾಶ ಕಲ್ಪಿಸುವ ಕಾರ್ಯವನ್ನು ಮಾಡಬೇಕಿದೆ. ಇನ್ನು ನೂತನ ಮನೆಗಳನ್ನು ನಿರ್ಮಿಸುವಾಗಲೂ ಮನೆಯ ಕಾಂಪೌಂಡ್ ಗೋಡೆಯನ್ನು ಚರಂಡಿ ವ್ಯವಸ್ಥೆ ಹಾಳಾಗದಂತೆ ನಿರ್ಮಿಸುವ ಬಗ್ಗೆ ಮನೆಯವರು ಗಮನವಹಿಸಬೇಕಿದೆ. ಇದೇ ಮೊದಲಾದ ಸಮಸ್ಯೆಗಳಿಂದ ಕೃಷಿಭೂಮಿ ಕಡಿಮೆಯಾಗುತ್ತಿದೆ. ಈ ಬಗ್ಗೆ ಪಂಚಾಯತ್ ವ್ಯವಸ್ಥೆಯಲ್ಲಿಯೂ ಕಟ್ಟುನಿಟ್ಟಿನ ಕ್ರಮವಾಗಬೇಕೆಂದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಕುಂಭಾಸಿ ಗ್ರಾ.ಪಂ. ಅಧ್ಯಕ್ಷೆ ಶ್ರೀವಾಣಿ ಅಡಿಗ ಮಾತನಾಡಿ, ಚರಂಡಿ ಹಾಗೂ ತೋಡುಗಳಲ್ಲಿ ಹೂಳಿನ ಪ್ರಮಾಣ ಜಾಸ್ಥಿಯಾದ ಕಾರಣದಿಂದಾಗಿ ನೀರಿನ ಹರಿಯುವಿಕೆಯಲ್ಲಿ ವತ್ಯಗೊಂಡು ಈ ಕೃತಕ ನೆರೆ ಸೃಷ್ಟಿಯಾಗುವ ಸಮಸ್ಯೆ ವರ್ಷಂಪ್ರತಿ ಜಾಸ್ಥಿಯಾಗುತ್ತಿದೆ. ಕಸ ತ್ಯಾಜ್ಯ ವಿಲೆವಾರಿ ಬಗ್ಗೆ ಜನರಲ್ಲಿ ಜನಜಾಗೃತಿ ಮೂಡಿಸುವ ಕೆಲಸವೂ ಆಗಬೇಕಿದೆ ಎಂದರು.
ಸಭೆಯಲ್ಲಿ ಗೋಪಾಡಿ ಪಂಚಾಯತ್ ಅಧ್ಯಕ್ಷೆ ಸರಸ್ವತಿ ಪುತ್ರನ್, ಉಪಾಧ್ಯಕ್ಷೆ ವೈಲೆಟ್ ಬೆರೆಟ್ಟೋ, ಹಂಗಳೂರು ಪಂಚಾಯತ್ ಅಧ್ಯಕ್ಷೆ ಜಲಜಾ ಚಂದನ್, ಉಪಾಧ್ಯಕ್ಷ ಸ್ಟೀವನ್ ಡಿಕಾಸ್ತಾ , ಕೋಟೇಶ್ವರ ಪಂಚಾಯತ್ ಅಧ್ಯಕ್ಷೆ ಜಾನಕಿ ಬಿಲ್ಲವ, ಉಪಾಧ್ಯಕ್ಷ ಉದಯ ನಾಯ್ಕ್, ಕುಂಭಾಸಿ ಗ್ರಾ.ಪಂ. ಅಧ್ಯಕ್ಷೆ ಶ್ರೀವಾಣಿ ಅಡಿಗ, ಉಪಾಧ್ಯಕ್ಷ ಮಹಾಬಲ ಆಚಾರ್ಯ, ತೆಕ್ಕಟ್ಟೆ ಗ್ರಾ.ಪಂ. ಅಧ್ಯಕ್ಷ ಶೇಖರ ಕಾಂಚನ್, ಬೀಜಾಡಿ ಗ್ರಾ.ಪಂ. ಸದಸ್ಯರಾದ ರವೀಂದ್ರ ದೊಡ್ಮನೆ,ಶೇಖರ್ ಚಾತ್ರಬೆಟ್ಟು, ವಾದಿರಾಜ್ ಹೆಬ್ಬಾರ್, ಜೆಸಿಂತಾ ಡಿಮೆಲ್ಲೋ, ಹಂಗಳೂರು ಗ್ರಾ.ಪಂ. ಸದಸ್ಯ ಸುಧಾಕರ್, ಗೋಪಾಡಿ ಗ್ರಾ.ಪಂ. ಸದಸ್ಯರಾದ ರಮೇಶ್ ಸುವರ್ಣ, ರಾಘವೇಂದ್ರ, ಸರೋಜಾ ಪೂಜಾರಿ, ವಿವಿಧ ಗ್ರಾ.ಪಂ. ವ್ಯಾಪ್ತಿಯ ಪ್ರಮುಖರಾದ ವಾಸುದೇವ್ ಪ್ರಭು, ರಾಮ ಗುರಿಕಾರ ಕುಂಭಾಸಿ, ಬೀಜಾಡಿ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಗೋಪಾಡಿ ಶೀನ ಮೊಗವೀರ, ಕುಂಭಾಸಿ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಅಣ್ಣಯ್ಯ ಪುತ್ರನ್ ಮೊದಲಾದವರು ಸಭೆಯಲ್ಲಿ ತಮ್ಮ ಅನುಭವ ಹಂಚಿಕೊಂಡು ಮುಂದಿನ ಕಾರ್ಯವೈಖರಿ ಬಗ್ಗೆ ಚರ್ಚಿಸಿದರು. ಈ ಸಮಸ್ಯೆ ಬಗ್ಗೆ ಅತೀ ಶೀಘ್ರವೇ ಕುಂದಾಪುರ ಶಾಸಕರು ಸೇರಿದಂತೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಬಂದಪಟ್ಟ ಅಧಿಕಾರಿಗಳಿಗೂ ನಿಯೋಗದೊಂದಿಗೆ ತೆರಳಿ ಮನವಿ ನೀಡುವ ಕುರಿತು ನಿರ್ಣಯ ಕೈಗೊಳ್ಳಲಾಯಿತು.
ಸಮಾಜಸೇವಕ ಗಣೇಶ ಪುತ್ರನ್ ಕಾರ್ಯಕ್ರಮವನ್ನು ಸಂಯೋಜಿಸಿದ್ದರು. ಗೋಪಾಡಿ ಗ್ರಾ.ಪಂ. ಸದಸ್ಯ ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ, ಕುಂಭಾಸಿ ಗ್ರಾ.ಪಂ. ಸದಸ್ಯ ಕಮಲಾಕ್ಷ ಪೈ ವಂದಿಸಿದರು.

