ಕರ್ನಾಟಕ

ರಾಜ್ಯಕ್ಕೆ ಯೋಗ್ಯ ಮುಖ್ಯಮಂತ್ರಿಯ ಅವಶ್ಯಕತೆ ಇದೆ : ದೇವೇಗೌಡ

Pinterest LinkedIn Tumblr

deveಬೆಂಗಳೂರು, ಆ.2- ರೈತರು, ಕಾರ್ಮಿಕರು ಹಾಗೂ ಜನರ ನೋವಿಗೆ ಸ್ಪಂದಿಸುವಂತಹ ಯೋಗ್ಯ ಮುಖ್ಯಮಂತ್ರಿಯ ಅವಶ್ಯಕತೆ ರಾಜ್ಯಕ್ಕಿದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಇಂದಿಲ್ಲಿ ತಿಳಿಸಿದರು. ಕೆಂಗೇರಿ ಉಪನಗರದಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಗೌಡರು, ಈಗಿನ ಮುಖ್ಯಮಂತ್ರಿಯಿಂದ ರೈತರು ಹಾಗೂ ಜನಸಾಮಾನ್ಯರ ಸಮಸ್ಯೆಗೆ ಪರಿಹಾರ ಸಾಧ್ಯವಾಗಿಲ್ಲ ಎಂದು ಟೀಕಿಸಿದರು.

ಆಕಾಶದಲ್ಲಿ ಅಭಿವೃದ್ದಿ ಮಾಡಲು ಸಾಧ್ಯವಿಲ್ಲ. ರೈತರ ಜಮೀನನ್ನೇ ಅಭಿವೃದ್ದಿ ಪಡಿಸುವ ಮೂಲಕ ರಾಜ್ಯದ ಅಭಿವೃದ್ಧಿ ಮಾಡಬೇಕಾಗಿದೆ ಎಂದರು.  ರಾಜ್ಯದಲ್ಲಿ 213 ರೈತರು ಇದುವರೆಗೆ ಆತ್ಮಹತ್ಯೆ ಮಾಡಿಕೊಂಡಿದ್ದು, ಸೂಕ್ತ ಪರಿಹಾರ ನೀಡುತ್ತಿಲ್ಲ ಎಂದು ರಾಜ್ಯಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಅವರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರ ಬೇಕೇ ಎಂದು ಪ್ರಶ್ನಿಸಿದ ಗೌಡರು, ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಪರಿಹಾರ ನೀಡುವ ವಿಚಾರದಲ್ಲೂ ಸರ್ಕಾರ ನಾಟಕವಾಡುತ್ತಿದೆ.

ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯ ಮರೆತು ಎಲ್ಲರೂ ಒಗ್ಗೂಡಿ ಶ್ರಮವಹಿಸಿ  ಕಲಸ ಮಾಡಿದರೆ ಬಿಬಿಎಂಪಿ ಚುನಾವಣೆಯಲ್ಲಿ ಪಕ್ಷಕ್ಕೆ ಉತ್ತಮ ಗೆಲುವು ಸಾಧ್ಯವಾಗುತ್ತದೆ. ಯಶವಂತಪುರ ಕ್ಷೇತ್ರದ ಎಲ್ಲಾ ಮುಖಂಡರು, ಕಾರ್ಯಕರ್ತರು ಭಿನ್ನಾಭಿಪ್ರಾಯ ಮರೆತು ಚುನಾವಣೆಯಲ್ಲಿ ಸ್ಪಂದಿಸಿದರೆ ಜೆಡಿಎಸ್ ಅಭ್ಯರ್ಥಿಗಳ ಗೆಲುವಿನ ಹಾದಿ ಸುಗಮವಾಗಲಿದೆ ಎಂದರು. ಎಲ್ಲಾ ವರ್ಗದವರಿಗೂ ಮೀಸಲಾತಿ ಸೌಲಭ್ಯ ಕಲ್ಪಿಸಿದ್ದು, ತಮ್ಮ ಸರ್ಕಾರದ ಆಡಳಿತಾವಧಿಯಲ್ಲಿಯೇ ಎಂದ ಗೌಡರು, ಪಕ್ಷದ ರಾಜ್ಯಾಧ್ಯಕ್ಷರಾದ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಗ್ರಾಮ ವಾಸ್ತವ್ಯದ ಮೂಲಕ ಬಡ ಜನರ ನೋವನ್ನು ಅರಿಯುವ ಪ್ರಯತ್ನ ಮಾಡಿದ್ದರು ಎಂದು ಈ ಸಂದರ್ಭದಲ್ಲಿ ತಿಳಿಸಿದರು.  ಇದೇ ಸಮಾರಂಭದಲ್ಲಿ ಪಂಚಲಿಂಗಯ್ಯ ಅವರು ಮರಳಿ ಜೆಡಿಎಸ್‌ಗೆ ಸೇರ್ಪಡೆಯಾದರು.  ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ವಿಧಾನಪರಿಷತ್ ಸದಸ್ಯ ಇ.ಕೃಷ್ಣಪ್ಪ, ಪಕ್ಷದ ಮುಖಂಡರಾದ ಜವರಾಯಿಗೌಡ, ಎ.ಪಿ.ರಂಗನಾಥ್ ಮತ್ತಿತರರು ಪಾಲ್ಗೊಂಡಿದ್ದರು.

ಜೆಡಿಎಸ್ ಅಭ್ಯರ್ಥಿಗಳ ಆಯ್ಕೆ ಅಂತಿಮ
ಬೆಂಗಳೂರು, ಆ.2- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಬಹುತೇಕ ಎಲ್ಲಾ ವಾರ್ಡ್‌ಗಳ ಅಭ್ಯರ್ಥಿಗಳ ಆಯ್ಕೆಯನ್ನು  ಜೆಡಿಎಸ್ ಅಂತಿಮಗೊಳಿಸಿದೆ. ಎಲ್ಲ 198 ವಾರ್ಡ್‌ಗಳ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಂಡಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಒಪ್ಪಿಗೆ ಮಾತ್ರ ಬಾಕಿ ಉಳಿದಿದೆ ಎಂದು ಜೆಡಿಎಸ್ ಬೆಂಗಳೂರು ಮಹಾನಗರದ ಅಧ್ಯಕ್ಷ ರತನ್‌ಸಿಂಗ್ ಈ ಸಂಜೆ ಪತ್ರಿಕೆಗೆ ತಿಳಿಸಿದರು. ಇನ್ನೆರಡು ದಿನಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಅಂತಿಮಗೊಳ್ಳಲಿದೆ ಎಂದು ಹೇಳಿದರು. ಯಶವಂತಪುರ, ರಾಜರಾಜೇಶ್ವರಿ ನಗರ, ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೆಲವು ವಾರ್ಡ್‌ಗಳಲ್ಲಿ ಸ್ಪರ್ಧೆಗಿಳಿಯಲು ಆಕಾಂಕ್ಷಿಗಳ ನಡುವೆ ತೀವ್ರ ಪೈಪೋಟಿ  ಕಂಡು ಬಂದಿದೆ.  ಆಕಾಂಕ್ಷಿಗಳ ನಡುವೆ ಸಮಾನ ಪೈಪೋಟಿ ಇರುವ ವಾರ್ಡ್‌ಗಳ ಅಭ್ಯರ್ಥಿಗಳನ್ನು ದೇವೇಗೌಡರ ಸಮ್ಮುಖದಲ್ಲೇ  ತಿಮಗೊಳಿಸಲು ಉದ್ದೇಶಿಸಲಾಗಿದೆ. ಪಕ್ಷದ ಸಂಘಟನೆ, ಸ್ಥಳೀಯ ಜನಪ್ರಿಯತೆ ಸೇರಿದಂತೆ ಯಾವುದೇ ಮಾನದಂಡ ನೋಡಿದರೂ 10ಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ಸರಿಸಮನಾದ ಪೈಪೋಟಿ ಕಂಡು ಬಂದಿದ್ದು, ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿದೆ. ಹೀಗಾಗಿ ಬಂಡಾಯ ಏಳದಂತೆ ಗೌಡರ ಸಮ್ಮುಖದಲ್ಲೇ ಒಮ್ಮತದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ತೀರ್ಮಾನಿಸಲಾಗಿದೆ. ಮಹಾಲಕ್ಷ್ಮಿಲೇಔಟ್, ಪುಲಕೇಶಿನಗರ ಹಾಗೂ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಅಭ್ಯರ್ಥಿಗಳ ಆಯ್ಕೆಯನ್ನು ಶಾಸಕರಿಗೆ ನೀಡಲಾಗಿದೆ ಎಂದು ರತನ್‌ಸಿಂಗ್ ತಿಳಿಸಿದರು.

Write A Comment