ಬೆಳ್ತಂಗಡಿ: ಬಂಟ್ವಾಳ ಎಎಸ್ಪಿ ರಾಹುಲ್ ಕುಮಾರ್ ನೇತೃತ್ವದಲ್ಲಿ ಡಿಸಿಐಬಿ ಪೊಲೀಸರು ಬಂಟ್ವಾಳ ಉಪ ವಿಭಾಗದ ಪೊಲೀಸರೊಂದಿಗೆ ನಡೆಸಿದ ಕಾರ್ಯಾಚರಣೆಯಲ್ಲಿ ಯುವತಿಯನ್ನು ಮುಂದಿಟ್ಟುಕೊಂಡು ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ತಂಡವೊಂದನ್ನು ಪತ್ತೆ ಹಚ್ಚಿ ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಶುಕ್ರವಾರ ದ.ಕ.ಜಿಲ್ಲಾ ಪೊಲೀಸ್ ಅಧಿಕ್ಷಕರಾದ ಡಾ.ಶರಣಪ್ಪ ಅವರು ಈ ಬಗ್ಗೆ ತಮ್ಮ ಕಚೇರಿಯಲ್ಲಿ ಮಾಹಿತಿ ನೀಡಿದರು. ಬ್ಲ್ಯಾಕ್ಮೇಲ್ ತಂಡದಿಂದ ದರೋಡೆ, ಹಲ್ಲೆ ಹಾಗೂ ವಂಚನೆಗೊಳಗಾದ ಬಂಟ್ವಾಳ ತಾಲೂಕಿನ ಲೊರೆಟ್ಟೋ ಪದವು ನಿವಾಸಿ ಬಶೀರ್ ಎಂಬವರು ನೀಡಿದ ದೂರಿನಂತೆ ಕಾರ್ಯಪ್ರವೃತ್ತರಾದ ಪೊಲೀಸರು ವೇಣೂರು ಹಾಗೂ ಬೆಳ್ತಂಗಡಿ ಠಾಣೆ ವ್ಯಾಪ್ತಿಯ ಮಹಮ್ಮದ್ (25) , ಅಬುಲ್ ಲತೀಫ್ ಯಾನೆ ಅಬ್ದುಲ್ಲಾ (36), ಶಬೀರ್ ( 25), ಅಬೂಬಕ್ಕರ್ ಸಿದ್ಧಿಕ್ (21), ಸುಲೈಮಾನ್ (35), ಅಬ್ದುಲ್ ಮಜೀದ್ (22) ಹಾಸೀಮ್ ಹಾಗೂ (25) ಹಾಗೂ ಝರೀನಾ (27) ಎಂಬವರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ ಎಂದು ಎಸ್ಪಿಯವರು ತಿಳಿಸಿದರು.
ಜುಲೈ 27ರಂದು ಸಂಜೆ ಆಸೀಸ್ ಗೋಳಿಯಂಗಡಿ ಎಂಬಾತನು ಪರಿಚಯದ ಅಬ್ದುಲ್ ಬಶೀರ್ಗೆ ಪೋನ್ ಮಾಡಿ ಆತನ ಪರಿಚಯದ ಓರ್ವ ಹೆಂಗಸನ್ನು ಬೆಳ್ತಂಗಡಿ ಲಾಯಿಲದಿಂದ ಉಜಿರೆಗೆ ಬಿಡುವಂತೆ ತಿಳಿಸಿದ ಮೇರೆಗೆ ಅಬ್ದುಲ್ ಬಶೀರನು ತನ್ನ ಸಂಬಂಧಿ ಮಹಮ್ಮದ್ ಹ್ಯಾರಿಸ್ ನ ಆಟೋರಿಕ್ಷಾದಲ್ಲಿ ಉಜಿರೆಗೆ ಹೆಂಗಸನ್ನು ಬಿಡಲು ಹೋಗುತ್ತಿದ್ದಾಗ ದಾರಿ ಮಧ್ಯದಲ್ಲಿ ಆರೋಪಿಗಳು ಆಟೋರಿಕ್ಷಾವನ್ನು ತಡೆದು ನಿಲ್ಲಿಸಿ ಒಂದು ರಿಡ್ಜ್ ಕಾರು ಮತ್ತು ಬೊಲೆರೋ ಜೀಪಿನಲ್ಲಿ ಅಪಹರಿಸಿಕೊಂಡು ಹೋಗಿ ಹಲ್ಲೆ ನಡೆಸಿದರು.
ನಂತರ ಈ ಯುವತಿ ಜೊತೆಯಲ್ಲಿ ಬಶೀರ್ ಮತ್ತು ಮಹಮ್ಮದ್ ಹ್ಯಾರಿಸ್ ಜೊತೆ ಕುಳಿತುಕೊಳ್ಳಿಸಿ ಪೊಟೋ ತೆಗೆದು “ಹತ್ತು ಲಕ್ಷ ಕೊಡಬೇಕು” ಇಲ್ಲವಾದಲ್ಲಿ ನಿಮ್ಮ ಪೊಟೋವನ್ನು ವಾಟ್ಸ್ಆಫ್ನಲ್ಲಿ ಹಾಕಿ ರೇಪ್ ಕೇಸ್ ಕೊಡುತ್ತೇವೆ ಎಂದು ಬೆದರಿಸಿ ಬಶೀರ್ ಮತ್ತು ಮಹಮ್ಮದ್ ಹ್ಯಾರಿಸ್ ರವರನ್ನು ವೇಣೂರು ಹತ್ತಿರದ ನೈನಾಡ್ ಎಂಬಲ್ಲಿ ಮನೆಯಲ್ಲಿ ಕೂಡಿಹಾಕಿದ್ದರು ಎಂದು ಅವರು ವಿವರಿಸಿದರು.
ದ.ಕ. ಜಿಲ್ಲಾ ಎಸ್ಪಿ ಡಾ. ಶರಣಪ್ಪ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿನ್ಸೆಂಟ್ ಶಾಂತಕುಮಾರ್ ರವರ ಮಾರ್ಗದರ್ಶನದಲ್ಲಿ ಎಎಸ್ಪಿ ರಾಹುಲ್ ಕುಮಾರ್ ನೇತೃತ್ವದಲ್ಲಿ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಬಿ. ಆರ್. ಲಿಂಗಪ್ಪ, ಡಿಸಿಐಬಿ ಪಿಎಸ್ಐ ಮಂಜುಳಾ, ಎ.ಎಸ್.ಐ ಸಂಜೀವ ಪುರುಷ, ಉದಯ ರೈ, ಪಳನಿವೇಲು, ಇಕ್ಬಾಲ್, ತಾರನಾಥ, ವಾಸು ನಾಯ್ಕ, ಪ್ರವೀಣ್ ರೈ, ಕಲೈಮಾರ್, ಪರೋದಿನಿ, ವೆಂಕಟೇಶ್, ವಿಜಯ ರೋಹಿನಾಥ್, ಚಾಲಕರಾದ ವಾಸು ನಾಯ್ಕ ಹಾಗೂ ಸತ್ಯ ಪ್ರಕಾಶ್ ಮುಂತಾದವರಿ ಈ ವಿಶೇಷ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.








