ಕನ್ನಡ ವಾರ್ತೆಗಳು

ನಾಳೆಯಿಂದ ಕರಾವಳಿಯಲ್ಲಿ ಮೀನುಗಾರಿಕೆ ಆರಂಭ

Pinterest LinkedIn Tumblr

fishing_banned_1

ಮಂಗಳೂರು, ಜುಲೈ.30: ಪ್ರಸಕ್ತ ಮೀನುಗಾರಿಕೆ ಋತು ಕರಾವಳಿಯಲ್ಲಿ ಆಗಸ್ಟ್ 1ರಿಂದ ಆರಂಭವಾಗಲಿದೆ. ಈ ಬಾರಿ ಜೂನ್ 1ರಿಂದ ಜುಲೈ 31ರವರೆಗೆ ಎರಡು ತಿಂಗಳ ಕಾಲ ಆಳ ಸಮುದ್ರದ ಮೀನುಗಾರಿಕೆಗೆ ರಜೆ ಸಾರಲಾಗಿತ್ತು. ಈ ಮೀನುಗಾರಿಕೆ ರಜಾ ಅವಧಿಯಲ್ಲಿ ಕೇವಲ ನಾಡದೋಣಿ ಮೀನುಗಾರಿಕೆಗೆ ಮಾತ್ರ ಅವಕಾಶವಿತ್ತೇ ಹೊರತಾಗಿ ಟ್ರಾಲ್, ಪರ್ಸಿನ್ ಮೊದಲಾದ ಯಾಂತ್ರೀಕೃತ ಮೀನುಗಾರಿಕೆಗೆ ಸಂಪೂರ್ಣ ನಿಷೇಧ ಹೇರಲಾಗಿತ್ತು. ಈ ಬಾರಿ ಮಳೆಗಾಲದ ಅವಧಿಯಲ್ಲಿ ನಾಡ ದೋಣಿಯವರಿಗೆ ದೊರೆತ ಮೀನು ಕಡಿಮೆ ಎನ್ನುವುದು ಬಹುತೇಕ ಮೀನುಗಾರರ ಅಳಲು. ಈ ಹಿಂದಿನ ವರ್ಷಗಳಲ್ಲಿ ಪ್ರತೀವರ್ಷ ಜೂನ್ 15ರಿಂದ ಆಗಸ್ಟ್ 10ರವರೆಗೆ ಆಳಸಮುದ್ರ ಮೀನುಗಾರಿಕೆಗೆ ನಿಷೇಧವಿತ್ತು.

ಈ ಬಾರಿ ಜೂನ್ ಒಂದರಿಂದ ಜುಲೈ ಅಂತ್ಯದವರೆಗೆ ಮೀನುಗಾರಿಕೆಗೆ ನಿಷೇಧ ಹೇರಲಾಗಿತ್ತು. ಜುಲೈ 31ಕ್ಕೆ ಮೀನುಗಾರಿಕೆ ನಿಷೇಧ ಕೊನೆಗೊಳ್ಳಲಿದೆ. ಹಾಗಾಗಿ ನಾಳೆಯಿಂದ ಯಾಂತ್ರೀಕೃತ ದೋಣಿಗಳ ಮೀನುಗಾರಿಕೆ ಆರಂಭವಾಗಲಿದೆ. ಕರ್ನಾಟಕ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ ಈ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ 3,000ಕ್ಕೂ ಅಧಿಕ ಪರ್ಸಿನ್ ಬೋಟ್‌ಗಳು, ಸುಮಾರು 2,500ಕ್ಕೂ ಅಧಿಕ ಟ್ರಾಲ್ ಬೋಟ್‌ಗಳು ಹಾಗೂ ಸುಮಾರು 300ರಷ್ಟು ಆಳ ಸಮುದ್ರ ಮೀನುಗಾರಿಕೆ ದೋಣಿಗಳು ರಜೆ ಮುಗಿದು ಆ.1ರಂದು ಮೀನುಗಾರಿಕೆಯಲ್ಲಿ ತೊಡಗಲಿವೆ. ಈ ಬಾರಿ ಕಳೆದ ವರ್ಷದಂತೆ ಮೀನಿನ ಇಳುವರಿ ದೊರೆಯಬಹುದು. ಹೆಚ್ಚಿನ ಏರಿಳಿತವಾಗುವ ಸಾಧ್ಯತೆ ಕಡಿಮೆ ಎಂಬುವುದು ಮೀನುಗಾರಿಕೆ ಇಲಾಖೆಯ ಅಧಿಕಾರಿಗಳ ಅಭಿಪ್ರಾಯ. ಆದರೆ ಈ ಬಾರಿ ಆರಂಭದಲ್ಲಿ ನಾಡ ದೋಣಿಯ ಮೀನುಗಾರರಿಗೆ ಮೀನಿನ ಇಳುವರಿ ಕಡಿಮೆ ದೊರೆತಿರುವುದು ಮೀನುಗಾರರಲ್ಲಿ ತುಸು ಕಳವಳವನ್ನುಂಟು ಮಾಡಿದೆ.

2013-14ನೆ ಸಾಲಿಗೆ ಹೋಲಿಸಿದರೆ ಕಳೆದ ವರ್ಷ (2014-15)ದಲ್ಲಿ ಹಿಡಿದ ಮೀನಿನ ಇಳುವರಿಯಲ್ಲಿ ಸ್ವಲ್ಪ ಪ್ರಮಾಣದ ಏರಿಕೆಯಾಗಿದೆ. ಕಳೆದ ವರ್ಷ (2013-14ನೆ ಸಾಲಿನಲ್ಲಿ) 1,075 ಕೋ.ರೂ. ವೌಲ್ಯದ 1,50,525 ಮೆಟ್ರಿಕ್ ಟನ್ ಮೀನು ಹಿಡಿಯಲಾಗಿತ್ತು. 2013-14ರಲ್ಲಿ 827 ಕೋ.ರೂ. ವೌಲ್ಯದ 1,48,272 ಮೆಟ್ರಕ್ ಟನ್ ಮೀನು ಹಿಡಿಯಲಾಗಿತ್ತು. ಕಳೆದ ಬಾರಿ ಹಾಗೂ ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದಾಗ ಸುಮಾರು 2,000 ಮೆಟ್ರಿಕ್ ಟನ್ ಹೆಚ್ಚುವರಿ ಮೀನು ದಕ್ಷಿಣ ಕನ್ನಡ ಜಿಲ್ಲಾ ಕರಾವಳಿ ತೀರದಲ್ಲಿ ದೊರೆತಿದೆ ಎಂದು ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಎಂ.ಡಿ.ಪ್ರಸಾದ್ ತಿಳಿಸಿದ್ದಾರೆ.

ಈ ಬಾರಿ ಸಮುದ್ರ ಪೂಜೆಗೆ ಮೊದಲೇ ಮೀನುಗಾರಿಕೆ ಋತು ಆರಂಭಗೊಳ್ಳುತ್ತಿದೆ. ಸಮುದ್ರ ಪೂಜೆ ಸಾಮಾನ್ಯವಾಗಿ ಆಗಸ್ಟ್ 15ರ ಸಂದರ್ಭದಲ್ಲಿ ನಡೆಯುತ್ತದೆ. ಇದರಿಂದಾಗಿ ಕೆಲವು ಮೀನುಗಾರರು ಆಗಸ್ಟ್ 1 ರಂದು ಮೀನುಗಾರಿಕೆಗೆ ತೆರಳುವ ಸಾಧ್ಯತೆ ಕಡಿಮೆ.ಜೊತೆಗೆ ಮಳೆಗಾಲದಲ್ಲಿ ಮೀನುಗಾರಿಕೆಯಲ್ಲಿ ತೊಡಗುವ ನಾಡದೋಣಿ ಮೀನುಗಾರರಿಗೆ ಹೆಚ್ಚಿನ ಮೀನು ದೊರೆಯದೆ ಇರುವುದು ಮೀನುಗಾರರಲ್ಲಿ ಆತಂಕವನ್ನುಂಟು ಮಾಡಿದೆ ಎಂದು ವಾಸುದೇವ ಬೋಳೂರು ತಿಳಿಸಿದ್ದಾರೆ

Write A Comment